Tirupati Laddu: ತಿರುಪತಿ ಲಡ್ಡು ಪ್ರಸಾದ ವಿವಾದ: ತಪ್ಪು ಒಪ್ಪಿಕೊಂಡ ಬಂಧಿತ ಆರೋಪಿ
ವಿಶ್ವವಿಖ್ಯಾತ ತಿರುಮಲ ತಿರುಪತಿ ಲಡ್ಡು ಪ್ರಸಾದ ತಯಾರಿಕೆಯ ತುಪ್ಪದಲ್ಲಿ ಪ್ರಾಣಿಕೊಬ್ಬು ಬಳಕೆ ಪ್ರಕರಣದ ತನಿಖೆ ನಡೆಯುತ್ತಿದ್ದು ವಿಚಾರಣೆಯ ಸಮಯದಲ್ಲಿ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಂಧಿತ ಆರೋಪಿ ಎಸ್‌ಐಟಿ ತನಿಖೆಯಲ್ಲಿ ತಪ್ಪು ಒಪ್ಪಿಕೊಂಡಿದ್ದಾರೆ.
ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದ ತಯಾರಿಸಲು ಸರಬರಾಜು ಮಾಡಿದ ತುಪ್ಪದಲ್ಲಿ ರಾಸಾಯನಿಕಗಳನ್ನು ಬೆರೆಸಲಾಗಿದೆ ಎಂದು ರಾಸಾಯನಿಕ ಎಂಜಿನಿಯರಿಂಗ್ ಪದವೀಧರೆ ಮತ್ತು ಆರೋಪಿಗಳಲ್ಲಿ ಒಬ್ಬರಾದ ಅಪೂರ್ವ ಚಾವ್ಡಾ ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ. ಎಸ್‌ಐಟಿ ತನಿಖೆಯ ಸಮಯದಲ್ಲಿ ಆರೋಪಿ ಅಪೂರ್ವ ಚಾವ್ಡಾ ತಪ್ಪು ಒಪ್ಪಿಕೊಂಡಿದ್ದಾರೆ.

ವಿಚಾರಣೆ ಚುರುಕುಗೊಳಿಸಿದ ಎಸ್‌ಐಟಿ
ತಿರುಪತಿ ಲಡ್ಡು ಪ್ರಸಾದ ಕಲಬೆರಕೆ ಆರೋಪ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತುಪ್ಪದಲ್ಲಿ ಪ್ರಾಣಿ ಕೊಬ್ಬ ಬಳಕೆ ಹಾಗೂ ಅವುಗಳನ್ನು ಎಲ್ಲಿಂದ ಪಡೆಯಲಾಗಿದೆ, ಬಳಸಿದ ಪ್ರಮಾಣ ಎಷ್ಟು ಮತ್ತು ಕಲಬೆರಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿದೆ.
ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ವಕೀಲರು ತಿರುಪತಿಯ ಎರಡನೇ ಹೆಚ್ಚುವರಿ ಮುನ್ಸಿಫ್ ನ್ಯಾಯಾಲಯದಲ್ಲಿ ಕಸ್ಟಡಿ ಅರ್ಜಿಯನ್ನು ಸಲ್ಲಿಸಿ, ಆರೋಪಿ ಅಪೂರ್ವ ಚಾವ್ಡಾ ಮತ್ತು ಆರೋಪಿ ವಿಪಿನ್ ಜೈನ್ ಅವರನ್ನು ವಶಕ್ಕೆ ಪಡೆಯುವಂತೆ ಕೋರಿದ್ದಾರೆ.
ಜೊತೆಗೆ ಭೋಲೆಬಾಬಾ ಆರ್ಗಾನಿಕ್ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೋಮಿಲ್ ಜೈನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ನ್ಯಾಯಾಧೀಶ ಕೋಟೇಶ್ವರ ರಾವ್ ಮಂಗಳವಾರ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಆರೋಪಿ ಅಪೂರ್ವ ಚಾವ್ಡಾ ಅವರ ಜಾಮೀನು ಅರ್ಜಿ ಮತ್ತು ಎಸ್‌ಐಟಿಯ ಕಸ್ಟಡಿ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.
ಎಸ್‌ಐಟಿ ತಂಡ ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳಾದ ಪೋಮಿಲ್ ಜೈನ್, ಬಿಪಿನ್ ಜೈನ್, ವಿಷ್ಣವಿ ಡೈರಿಯ ಸಿಇಒ ಅಪೂರ್ವ ಚಾವ್ಡಾ ಮತ್ತು ಎಆರ್ ಡೈರಿಯ ಎಂಡಿ ರಾಜು ರಾಜಶೇಖರನ್ ಅವರನ್ನು ವಶಕ್ಕೆ ಪಡೆದಿದೆ. ಇದೀಗ ಆರೋಪಿ ಅಪೂರ್ವ ಚಾವ್ಡಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ತಿರುಪತಿ ಲಡ್ಡು ವಿವಾದ
ಕಳೆದ ವರ್ಷ ತಿರುಪತಿ ತಿರುಮಲದಲ್ಲಿ ನೀಡುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಮಿಶ್ರಣ ಮಾಡಲಾಗಿದೆ ಎಂಬ ಅಘಾತಕಾರಿ ಅಂಶ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದು ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ ಶ್ರೀವಾರಿ ಭಕ್ತರ ನಂಬಿಕೆಗೆ ಘಾಸಿಗೊಳಿಸಲಾಗಿದೆ. ಹಿಂದೂ ಧರ್ಮೀಯರ ನಂಬಿಕೆಗೆ ಅಪಮಾನ ಮಾಡಲಾಗಿದೆ ಎಂದು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ತಿರುಮಲದಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಲಡ್ಡುವಿನಲ್ಲಿ ಹಸುವಿನ ಕೊಬ್ಬು ಮತ್ತು ಪ್ರಾಣಿಗಳ ತ್ಯಾಜ್ಯ ಮಿಶ್ರಣ ಮಾಡಲಾಗಿದೆ ಎಂದು ಚಂದ್ರಬಾಬು ನಾಯ್ಡು ಸರ್ಕಾರ ಆರೋಪಿಸಿತ್ತು. ಅವರು ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ತಿರುಮಲ ಲಡ್ಡುವಿನ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು ಅದು ಎಸ್‌ಐಟಿ ತನಿಖೆಗೆ ಆದೇಶಿಸಿದೆ.











Click it and Unblock the Notifications