Tirupati Laddu: ಪ್ರಾಣಿಗಳ ಕೊಬ್ಬಿನಿಂದ ತಿರುಪತಿ ಲಡ್ಡು ತಯಾರಿಕೆ- ಸಿಎಂ ಚಂದ್ರಬಾಬು ಸೆನ್ಸೇಷನಲ್ ಕಾಮೆಂಟ್
ತಿರುಮಲ ಶ್ರೀವಾರಿ ಲಡ್ಡು ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿ ಪ್ರಸಾದ ತಯಾರಿಕೆಗೆ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಅವರು ಟೀಕಿಸಿದ್ದಾರೆ. ಈ ಆರೋಪ ಸದ್ಯ ಆಂಧ್ರ ಪ್ರದೇಶದಲ್ಲಿ ಸಂಚಲನವನ್ನು ಸೃಷ್ಟಿಮಾಡಿದೆ.
ಹೌದು... ಕಳೆದ ದಿನ ಮಂಗಳಗಿರಿಯಲ್ಲಿ ನಡೆದ ಎನ್‌ಡಿಎ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರು ತಿರುಪತಿ ದೇವಸ್ಥಾನದಲ್ಲಿ ತಯಾರಾಗುತ್ತಿದ್ದ ಪ್ರಸಿದ್ಧ ಲಡ್ಡು ಪ್ರಸಾದದ ಬಗ್ಗೆ ಸಂವೇದನಾಶೀಲ ಹೇಳಿಕೆ ನೀಡಿದ್ದಾರೆ. ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಮಲ ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ. ಇದರಿಂದಾಗಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗಿದೆ. ದೇವರಿಗೆ ಅರ್ಪಿಸುವ ನೈವೇದ್ಯವನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ.

ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ತಿರುಮಲದಲ್ಲಿ ಅನುಚಿತವಾಗಿ ವರ್ತಿಸಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಜಗನ್ ಮೋಹನ್ ಅವರ ಅಧಿಕಾರದ ಅವಧಿಯಲ್ಲಿ ಭಕ್ತರಿಗೆ ಕಳಪೆ ಲಡ್ಡೂಗಳು ಮತ್ತು ಕಳಪೆ ಗುಣಮಟ್ಟದ ಅನ್ನಪ್ರಸಾದವನ್ನು ವಿತರಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಟಿಡಿಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಿರುಮಲ ಲಡ್ಡು ತಯಾರಿಕೆಯಲ್ಲಿ ಶುದ್ಧ ತುಪ್ಪವನ್ನು ಬಳಸಲಾಗುತ್ತಿದೆ ಎಂದು ಚಂದ್ರಬಾಬು ಅವರು ಹೇಳಿದ್ದಾರೆ.
ಹಿಂದೂಗಳು ಅತ್ಯಂತ ಪವಿತ್ರವೆಂದು ಪರಿಗಣಿಸುವ ತಿರುಮಲ ಶ್ರೀವಾರಿ ಲಡ್ಡು ಕುರಿತು ಸಿಎಂ ಚಂದ್ರಬಾಬು ನಾಯ್ಡು ನೀಡಿರುವ ಈ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಯಾವ ರೀತಿಯ ಪ್ರತಿಕ್ರಿಯೆಗಳು ಬರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತೊಂದೆಡೆ ಎಪಿಯಲ್ಲಿ ಟಿಡಿಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ತಿರುಮಲದಲ್ಲಿ ಶುದ್ಧೀಕರಣ ಪ್ರಾರಂಭವಾಯಿತು. ಈ ಹಿಂದೆ ಜೆ.ಧರ್ಮ ರೆಡ್ಡಿ ಅವರು ತಿರುಮಲ ತಿರುಪತಿ ದೇವಸ್ಥಾನದ ಇಒ ಆಗಿ ನೇಮಕಗೊಂಡಿದ್ದರು. ಅವರ ಬದಲು ಸದ್ಯ ಶ್ಯಾಮರಾವ್ ಅವರನ್ನು ನೇಮಿಸಲಾಯಿತು. ಇಒ ಆಗಿ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಶ್ಯಾಮರಾವ್ ಅವರು ಭಕ್ತರಿಗೆ ನೀಡುವ ಸೌಲಭ್ಯ ಮತ್ತು ಪ್ರಸಾದದ ಗುಣಮಟ್ಟಕ್ಕೆ ವಿಶೇಷ ಗಮನ ಹರಿಸಿದ್ದಾರೆ. ಶ್ರೀವಾರಿ ಲಡ್ಡು ಗುಣಮಟ್ಟ ಕುಸಿತಕ್ಕೆ ತುಪ್ಪ ಕಾರಣ ಎಂದು ಗುರುತಿಸಿ ತುಪ್ಪ ಪೂರೈಕೆ ಮಾಡುತ್ತಿರುವ ಕೆಲ ಕಂಪನಿಗಳಿಗೆ ಇಒ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯ ಲಡ್ಡೂಗಳನ್ನು ಶುದ್ಧ ತುಪ್ಪ ಬಳಸಿ ತಯಾರಿಸಲಾಗುತ್ತಿದೆ.
ಗುಣಮಟ್ಟದ ತುಪ್ಪ ಖರೀದಿಸಲು ನಾಲ್ವರು ಗಣ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನೂ ಟಿಟಿಡಿ ರಚಿಸಿದೆ. ಈ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಪ್ರಸ್ತುತ ಕರ್ನಾಟಕ ಸಹಕಾರಿ ಹಾಲು ಉತ್ಪನ್ನ ಕಂಪನಿಯಿಂದ ನೇರವಾಗಿ ತುಪ್ಪವನ್ನು ಖರೀದಿಸಲಾಗುತ್ತಿದೆ. ಇದೇ ತುಪ್ಪವನ್ನು ತಿರುಮಲ ಲಡ್ಡು ತಯಾರಿಕೆಯಲ್ಲಿ ಸದ್ಯ ಬಳಸಲಾಗುತ್ತಿದೆ. ಮತ್ತೊಂದೆಡೆ ತಿರುಮಲ ತಿರುಪತಿ ದೇವಸ್ಥಾನದ ಇಒ ಶ್ಯಾಮಲಾ ರಾವ್ ಕೂಡ ಇತ್ತೀಚೆಗೆ ನಡೆದ ಸಭೆಯಲ್ಲಿ ತಿರುಮಲ ಲಡ್ಡು ಗುಣಮಟ್ಟ ಹೆಚ್ಚಿದ್ದು, ರುಚಿಯೂ ಚೆನ್ನಾಗಿದೆ ಎಂದು ಬಹಿರಂಗಪಡಿಸಿದ್ದರು.

ಶ್ಯಾಮಲಾ ರಾವ್ ಇಒ ಆಗಿ ನೇಮಕಗೊಂಡ ಬಳಿಕ ವಿಶೇಷವಾಗಿ ತಿರುಪತಿ ಲಡ್ಡು ತಯಾರಿಕೆ ಗುಣಮಟ್ಟದ ಕಡೆಗೆ ಹೆಚ್ಚಿನ ಗಮನ ನೀಡಿದರು. ಗುಣಮಟ್ಟ ಪರಶೀಲನೆಗೆ ಸಮಿತಿಯನ್ನು ರಚನೆ ಮಾಡಿ, ಅನ್ನಪ್ರಸಾದ ಹಾಗೂ ಲಡ್ಡು ತಯಾರಿಕೆಯಲ್ಲಿ ರುಚಿಯಲ್ಲಿ ಬದಲಾವಣೆ ತಂದಿದ್ದಾರೆ. ಸದ್ಯ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹೇಳಿಕೆಗೂ ಇಒ ಶ್ಯಾಮಲಾ ರಾವ್ ತಂದ ಬದಲಾವಣೆಗಳಿಗೆ ಹೋಲಿಕೆಯಾಗುತ್ತಿದೆ. ಆದರೆ ಈ ಹೇಳಿಕೆ ಭಕ್ತರಿಗೆ ಮುಜುಗರ ತಂದಿದ್ದು, ಇದರ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆಗೆ ಒತ್ತಾಯಗಳು ಕೇಳಿ ಬಂದಿವೆ.
ವೈಎಸ್ಆರ್ ಕಾಂಗ್ರೆಸ್ ಪ್ರತಿಕ್ರಿಯೆ
ನಾಯ್ಡು ಅವರು "ರಾಜಕೀಯ ಲಾಭಕ್ಕಾಗಿ ಯಾವುದೇ ಮಟ್ಟಕ್ಕೆ ಇಳಿಯುತ್ತಾರೆ" ಎಂದು ವೈಎಸ್ಆರ್ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. ನಾಯ್ಡು ಅವರು ತಮ್ಮ ಹೇಳಿಕೆಗಳಿಂದ ಪವಿತ್ರ ತಿರುಮಲದ ಪಾವಿತ್ರ್ಯತೆ ಮತ್ತು ಕೋಟ್ಯಂತರ ಹಿಂದೂಗಳ ನಂಬಿಕೆಗೆ ತೀವ್ರ ಧಕ್ಕೆ ತಂದಿದ್ದಾರೆ ಎಂದು ವೈಎಸ್‌ಆರ್‌ಸಿಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ಬಾ ರೆಡ್ಡಿ ಆರೋಪಿಸಿದ್ದಾರೆ.












Click it and Unblock the Notifications