Tirupati: ವೈಕುಂಠ ಏಕಾದಶಿಗೆ ತಿಮ್ಮಪ್ಪನ ದರ್ಶನ ಪಡೆಯಲು 2 ಲಕ್ಷ ಆನ್‌ಲೈನ್ ಟಿಕೆಟ್- ದಿನಾಂಕ, ಸಮಯ, ಮಾಹಿತಿ, ವಿವರ
ತಿರುಪತಿ, ಅಕ್ಟೋಬರ್ 07: ವೈಕುಂಟ ಏಕಾದಶಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಯಾವುದೇ ಆತಂಕ ಪಡಬೇಕಿಲ್ಲ. ಭಕ್ತರು ಈ ಬಾರಿ ತಿಮ್ಮಪ್ಪನ ದರ್ಶನದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಹೇಳಿದೆ.
ಈ ವರ್ಷದ ಡಿಸೆಂಬರ್ 23 ರಿಂದ ಜನವರಿ 1 ರ ವರೆಗೆ ವೈಕುಂಟ ಏಕಾದಶಿಯನ್ನು ತಿರುಪತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದರ್ಶನಕ್ಕಾಗಿ ಆನ್‌ಲೈನ್‌ನಲ್ಲಿ 2 ಲಕ್ಷ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ಇಒ ಧರ್ಮ ರೆಡ್ಡಿ ಶನಿವಾರ ಹೇಳಿದ್ದಾರೆ.

ಕೌಂಟರ್‌ಗಳ ಮೂಲಕ 5 ಲಕ್ಷ ಟಿಕೆಟ್‌ಗಳನ್ನು ಭಕ್ತರಿಗೆ ಆಫ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ 15ರಿಂದ 23ರ ನಡುವೆ ನಡೆಯುವ ನವರಾತ್ರಿ ಬ್ರಹ್ಮೋತ್ಸವಕ್ಕೆ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ ಎಂದೂ ಟಿಟಿಡಿ ನಿರ್ದೇಶಕ ಧರ್ಮಾ ರೆಡ್ಡಿ ತಿಳಿಸಿದ್ದಾರೆ.

'ಭಕ್ತರ ಸುರಕ್ಷತೆಗಾಗಿ, ಅಕ್ಟೋಬರ್ 19 ರಂದು ಬರುವ ಗರುಡ ಸೇವೆಯ ದಿನದಂದು ನಾವು ಕನುಮ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಿದ್ದೇವೆ' ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.
ವಿವಿಧ ಕಾರಣಗಳಿಂದ ಈ ಬಾರಿಯ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವದಲ್ಲಿ ಜನಸಂದಣಿ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ನವರಾತ್ರಿ ಬ್ರಹ್ಮೋತ್ಸವದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರಕ್ಕೆ ಹೋಲಿಸಿದರೆ ತಿರುಪತಿ ತಿರುಮಲದಲ್ಲಿ ಭಕ್ತರ ಜನದಟ್ಟಣೆ ಹಾಗೂ ನೂಕುನುಗ್ಗಲು ಕಡಿಮೆಯಾಗಿದೆ. ಆದರೂ, ಸರತಿ ಸಾಲಿನಲ್ಲಿ ಕಾಯುವ ಸಮಯವು 12 ಗಂಟೆಗಳಿಗಿಂತ ಹೆಚ್ಚಾಗಿದೆ. ದೇವಾಲಯಕ್ಕೆ ಸೆಪ್ಟೆಂಬರ್ ತಿಂಗಳೊಂದರಲ್ಲೇ 111.65 ಕೋಟಿ ರೂಪಾಯಿಗಳ ಹುಂಡಿ ಕಾಣಿಕೆ ಬಂದಿದೆ. 21 ಲಕ್ಷ ಭಕ್ತರು ವೆಂಕಟೇಶ್ವರ ದೇವರ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಆಗಮಿಸಿದ್ದರು ಎಂದು ಟಿಟಿಡಿ ಮಾಹಿತಿ ನೀಡಿದೆ.
ತಿರುಮಲದ ಹೊಟೇಲ್‌ಗಳಲ್ಲಿ ಹೆಚ್ಚಿನ ದರದಲ್ಲಿ ಅನ್ನಪ್ರಸಾದ ಮಾರಾಟವಾಗುತ್ತಿದೆ ಎಂದು ಭಕ್ತರು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಅನ್ನಮಯ್ಯ ಭವನ ಮತ್ತು ನಾರಾಯಣಗಿರಿ ಎಂಬ ಎರಡು ಹೋಟೆಲ್‌ಗಳನ್ನು ಆಂದ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಗೆ ಹಂಚಿಕೆ ಮಾಡಲಾಗಿದೆ ಎಂದು ಧರ್ಮಾ ರೆಡ್ಡಿ ತಿಳಿಸಿದ್ದಾರೆ.
ಸಾಮಾನ್ಯ ಭಕ್ತರಿಗೆ ಅನ್ನಪ್ರಸಾದವನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವಂತೆ ಈ ಹೋಟೆಲ್‌ಗಳಿಗೆ ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಲ್ಲಿನ ಮಂಟಪ ಪುನರ್‌ನಿರ್ಮಾಣ
ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರಮುಖ ವಿಶ್ರಾಂತಿ ಸ್ಥಳವಾಗಿರುವ ಪುರಾತನ ಕಲ್ಲಿನ ಮಂಟಪವನ್ನು ಪುನರ್‌ನಿರ್ಮಾಣ ಮಾಡಲಾಗುತ್ತದೆ ಎಂದು ಟಿಟಿಡಿ ತಿಳಿಸಿದೆ.
ಅಲಿಪಿರಿ ಪಡಲ ಮಂಟಪದ ಬಳಿ ಇರುವ ಈ ಐತಿಹಾಸಿಕ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಸಮಗ್ರ ನವೀಕರಣದ ಅಗತ್ಯವಿದೆ ಎಂದು ಅದು ಹೇಳಿದೆ.
ಇದನ್ನು ಟಿಟಿಡಿ ಎಂಜಿನಿಯರಿಂಗ್ ವಿಭಾಗವು ಮೌಲ್ಯಮಾಪನವನ್ನು ಮಾಡಿದೆ. ರಚನೆಯನ್ನು ಅದರ ಹಿಂದಿನ ವೈಭವಕ್ಕೆ ಮರುಸ್ಥಾಪಿಸುವುದು ಅಸಾಧ್ಯವೆಂದು ತಿಳಿದುಬಂದಿದೆ. 1.36 ಕೋಟಿ ವೆಚ್ಚ ಅಂದಾಜಿನ ಈ ನವೀಕರಣ ಯೋಜನೆಯು ಅಸ್ತಿತ್ವದಲ್ಲಿರುವ ಕಲ್ಲಿನ ಕಂಬಗಳು ಮತ್ತು ಛಾವಣಿಯ ಬಳಕೆಯನ್ನು ಒಳಗೊಂಡಿರುತ್ತದೆ ಎಂದು ಟಿಟಿಡಿ ತಿಳಿಸಿದೆ.
ತಿರುಪತಿಯ ಅಲಿಪಿರಿ ಬಳಿ ಶಿಥಿಲಗೊಂಡಿರುವ ಶಿಲಾಮಯ ಮಂಟಪವನ್ನು ಬುಧವಾರ ಪರಿಶೀಲಿಸಿದ ಬಳಿಕ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಅವರು ಈ ನಿರ್ಧಾರ ಪ್ರಕಟಿಸಿದರು.
16ನೇ ಶತಮಾನದಲ್ಲಿ ಅಂದಿನ ರಾಜರು ಅಲಿಪಿರಿ ಪಡಲ ಮಂಟಪದ ಬಳಿ ನಡೆದಾಡುವ ಮಾರ್ಗದ ಪಕ್ಕದಲ್ಲಿ ಎರಡು ಕಲ್ಲಿನ ಮಂಟಪಗಳನ್ನು ನಿರ್ಮಿಸಿದ್ದರು. ಈ ಮಂಟಪಗಳು ಯಾತ್ರಾರ್ಥಿಗಳಿಗೆ ವಿಶ್ರಾಂತಿ ಸ್ಥಳವಾಗಿವೆ.












Click it and Unblock the Notifications