Tirumala Temple: 6 ತಿಂಗಳಲ್ಲಿ ತಿರುಮಲ ತಿಮ್ಮಪ್ಪನ ಹುಂಡಿಗೆ ದಾಖಲೆಯ ಆದಾಯ..
ಬೇಡಿದ ವರವನ್ನು ಭಕ್ತರಿಗೆ ಕರುಣಿಸುವ ದೇವರು ತಿರುಪತಿ ತಿಮ್ಮಪ್ಪ. ಈ ಏಳು ಬೆಟ್ಟಗಳ ಒಡೆಯ ತನ್ನ ಸನ್ನಿಧಾನಕ್ಕೆ ಬರುವ ಭಕ್ತರ ಸಮಸ್ಯೆಗಳನ್ನು ಅರಿತು ಅದನ್ನು ದೂರ ಮಾಡುತ್ತಾನೆಂಬ ನಂಬಿಕೆ ಇದೆ. ಹೀಗಾಗಿ ಸಾಗರೋಪಾದಿಯಲ್ಲಿ ತಿರುಪತಿ ತಿರುಮಲಕ್ಕೆ ಅನೇಕ ಜನ ಭೇಟಿ ನೀಡುತ್ತಾರೆ.
ಅತ್ಯಂತ ಶ್ರೀಮಂತ ದೇವರುಗಳಲ್ಲಿ ಒಬ್ಬರೆಂದು ಕರೆಯಲಾದ ತಿಮ್ಮಪ್ಪನ ದರ್ಶನ ಪಡೆಯಲು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಿರುಪತಿಗೆ ಭೇಟಿ ನೀಡುತ್ತಾರೆ. ಹರಕೆ ತೀರಿಸಿ ಶ್ರೀವಾರಿಗೆ ಪೂಜೆ ಸಲ್ಲಿಸುತ್ತಾರೆ. ಭಕ್ತರ ಸಂಖ್ಯೆ ಹೆಚ್ಚಾದಂತೆ ತಿರುಮಲ ತಿಮ್ಮಪ್ಪನ ಆದಾಯ ಕೂಡ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ತಿರುಮಲದಲ್ಲಿ ಭಕ್ತಾದಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳದ ಜತೆಗೆ ಹುಂಡಿಯ ಆದಾಯವೂ ದಾಖಲೆ ಬರೆಯುತ್ತಿದೆ.

ಆಪತ್ತುಗಳನ್ನು ನಿವಾರಿಸುವ ಭಗವಂತನಿಗೆ ಕಾಣಿಕೆಗಳನ್ನು ಅರ್ಪಿಸುವ ಭಕ್ತರ ಸಂಖ್ಯೆ ತಿರುಮಲೇಶನ ಆಸ್ತಿಯ ಮೌಲ್ಯವನ್ನು ಹೆಚ್ಚಿಸುತ್ತಿದೆ. ಜೊತೆಗೆ ಕಳೆದ ಆರು ತಿಂಗಳಿನಿಂದ ತಿಮ್ಮಪ್ಪನ ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ದಾಖಲೆಯ ಹಣ ಸಂಗ್ರಹವಾಗಿದೆ.
ತಿಮ್ಮಪ್ಪ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಾಣಿಯಾಗಿ ಪಡೆದಿದ್ದು, ಈ ವರ್ಷದ ಮೊದಲ 6 ತಿಂಗಳು ಹುಂಡಿಯ ಆದಾಯ 670.21 ಕೋಟಿ ಆಗಿದೆ. ಈ ವರ್ಷ ಜನವರಿಯಲ್ಲಿ 116.46 ಕೋಟಿ ರೂಪಾಯಿ ಹುಂಡಿಯಲ್ಲಿ ಸಂಗ್ರಹವಾಗಿದೆ. ಅಲ್ಲದೆ ಫೆಬ್ರವರಿಯಲ್ಲಿ 111.71 ಕೋಟಿ ರೂ., ಮಾರ್ಚ್‌ನಲ್ಲಿ 118.49 ಕೋಟಿ ರೂ., ಏಪ್ರಿಲ್‌ನಲ್ಲಿ 101.63 ಕೋಟಿ ರೂ., ಮೇನಲ್ಲಿ 108.28 ಕೋಟಿ ರೂ. ಹಾಗೂ ಜೂನ್‌ನಲ್ಲಿ 113.64 ಕೋಟಿ ರೂ.ಗಳು ತಿಮ್ಮಪ್ಪನ ಹುಂಡಿಯಲ್ಲಿ ಸಂಗ್ರಹವಾಗಿದೆ.

ಇದೇ ವೇಳೆ ಕಳೆದ ವರ್ಷದ ಹಿಂದಿನ ಏಳುಕೊಂಡಲವಾಡ ಒಡೆತನದ ಆಸ್ತಿಯ ವಿವರಗಳನ್ನು ಟಿಟಿಡಿ ಪ್ರಕಟಿಸಿದೆ. ಟಿಟಿಡಿ 24 ಬ್ಯಾಂಕ್ ಖಾತೆಗಳಲ್ಲಿನ ಸ್ಥಿರ ಠೇವಣಿ ಮತ್ತು ಚಿನ್ನದ ಠೇವಣಿಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಈ ಲೆಕ್ಕಾಚಾರಗಳ ಪ್ರಕಾರ, ಅಕ್ಟೋಬರ್ 31, 2023 ರೊಳಗೆ ನಗದು ಠೇವಣಿಯಲ್ಲಿ 17,816.15 ಕೋಟಿ ರೂ. ಚಿನ್ನದ ನಿಕ್ಷೇಪಗಳು ಸಂಗ್ರಹವಾಗಿವೆ.
ಟಿಟಿಡಿಯ ಚಿನ್ನದ ಠೇವಣಿ ಎರಡು ಬ್ಯಾಂಕ್‌ಗಳಲ್ಲಿದೆ ಎಂದು ಸ್ಪಷ್ಟಪಡಿಸಿದ ಟಿಟಿಡಿ, ಅಕ್ಟೋಬರ್ 31, 2023ರಲ್ಲಿ 11,225.66 ಕೆಜಿ ಚಿನ್ನ ಠೇವಣಿಯಾಗಿದೆ ಎಂದು ಹೇಳಿದೆ. ಪ್ರಸ್ತುತ ಟಿಟಿಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 10786.67 ಕೆಜಿ ಚಿನ್ನ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 438.99 ಕೆಜಿ ಚಿನ್ನವನ್ನು ಠೇವಣಿ ಮಾಡಿದೆ.
ವಾರಾಂತ್ಯದಲ್ಲಿ ತಿರುಪತಿಯಲ್ಲಿ ನೂಕು ನುಗ್ಗಲು
ವಿಶೇಷ ಹಾಗೂ ವಾರಾಂತ್ಯದಲ್ಲಿ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಎಂದಿಗಿಂತ ಹೆಚ್ಚಾಗಿರುತ್ತದೆ. ಜೊತೆಗೆ ತಿರುಮಲದಲ್ಲಿ ಶ್ರೀವಾರಿ ದರ್ಶನಕ್ಕಾಗಿ ಭಕ್ತರ ನೂಕುನುಗ್ಗಲು ಮುಂದುವರೆದಿದೆ. ಇಂದು ಬುಧವಾರ ಪ್ರಥಮ ಏಕಾದಶಿಯಾದ ಕಾರಣ ಸ್ವಾಮಿಯ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. 300 ರೂಪಾಯಿಗಳ ವಿಶೇಷ ದರ್ಶನ ಟಿಕೆಟ್ ಪಡೆದವರಿಗೂ ಮೂರರಿಂದ ಐದು ಗಂಟೆ ಸಮಯ ದೇವರ ದರ್ಶನಕ್ಕೆ ಬೇಕಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications