ತಿರುಪತಿಯಲ್ಲಿ ಕ್ಯೂ ನಿಂತ ಭಕ್ತರ ಬಳಿಗೆ ಬರಲಿದೆ ಪ್ರಸಾದ: ಟಿಟಿಡಿಯಿಂದ ನೂತನ ಮೂವಿಂಗ್ ಟೇಬಲ್ ವ್ಯವಸ್ಥೆ ಜಾರಿ
ತಿರುಮಲ: ಕಲಿಯುಗದ ವೈಕುಂಠ ಎಂದು ಕರೆಯುವ ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಪ್ರತಿದಿನ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಸ್ವಾಮಿಯ ದರ್ಶನ ಪಡೆಯಲು ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಸರತಿ ಸಾಲಿನಲ್ಲಿ ಕಾಯುವುದು ಸಾಮಾನ್ಯ ಎನ್ನುವಂತಾಗಿದೆ. ಈ ರೀತಿ ಕಾಯುವ ಭಕ್ತರಿಗೆ ಅನ್ನಪ್ರಸಾದ ವಿತರಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲು ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ಹೆಜ್ಜೆಯಿಟ್ಟಿದೆ.
ಪ್ರಸಾದ ವಿತರಣಾ ಕೌಂಟರ್‌ಗಳಲ್ಲಿ ಉಂಟಾಗುವ ನೂಕುನುಗ್ಗಲನ್ನ ತಪ್ಪಿಸಲು ಇದೀಗ ಹೊಸ ಟಿಟಿಡಿ ಮೂವಿಂಗ್ ಟೇಬಲ್ ಪ್ರಸಾದ ವ್ಯವಸ್ಥೆಯನ್ನು ಪರಿಚಯಿಸಿದೆ.

ಈಗಿರುವ ವ್ಯವಸ್ಥೆಯಲ್ಲಿ ದರ್ಶನದ ಕ್ಯೂನಲ್ಲಿರುವ ಭಕ್ತರು ಊಟ ಅಥವಾ ಪ್ರಸಾದ ಪಡೆಯಲು ಕೌಂಟರ್‌ಗಳ ಬಳಿ ಗುಂಪುಗೂಡಬೇಕಿತ್ತು. ಇದರಿಂದ ವಯಸ್ಸಾದವರು, ಮಕ್ಕಳು ಮತ್ತು ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಕನ್ವೇಯರ್ ಬೆಲ್ಟ್ ಮಾದರಿಯ ಚಲಿಸುವ ಟೇಬಲ್ ಅನ್ನು ಅಳವಡಿಸಲಾಗಿದೆ.
ಸುಮಾರು 7 ಮೀಟರ್ ಉದ್ದವಿರುವ ಈ ಟೇಬಲ್ ನಿರಂತರವಾಗಿ ಚಲಿಸುತ್ತಿರುತ್ತದೆ. ವಿತರಣಾ ಸಿಬ್ಬಂದಿ ಪ್ರಸಾದದ ತಟ್ಟೆಗಳನ್ನು ಈ ಟೇಬಲ್ ಮೇಲೆ ಇರಿಸಿದರೆ ಸಾಕು, ಅದು ಸರದಿ ಸಾಲಿನಲ್ಲಿ ನಿಂತಿರುವ ಭಕ್ತರ ಬಳಿಗೆ ತಾನಾಗಿಯೇ ಚಲಿಸಿಕೊಂಡು ಬರುತ್ತದೆ. ಇದರಿಂದ ಭಕ್ತರು ತಾವು ನಿಂತ ಸ್ಥಳದಲ್ಲೇ ನಿರಾಳವಾಗಿ ಪ್ರಸಾದವನ್ನು ಪಡೆದುಕೊಳ್ಳಬಹುದಾಗಿದೆ.
ರೂ. 10 ಲಕ್ಷ ವೆಚ್ಚದಲ್ಲಿ ನೂತನ ಸೌಲಭ್ಯದ ಅಳವಡಿಕೆ
ಭಕ್ತರ ಅನುಕೂಲಕ್ಕಾಗಿ ಸಿದ್ಧ ಪಡಿಸಿರುವ ಈ ಮೂವಿಂಗ್-ಟೇಬಲ್ ಅನ್ನಾ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನ ಜಾರಿಗೊಳಿಸಲಾಗಿತ್ತು. ಕೌಂಟರ್ ಬಳಿ ಜನಸಂದಣಿಯನ್ನ ಕಡಿಮೆ ಮಾಡುವಲ್ಲಿ ಮತ್ತು ತ್ವರಿತವಾಗಿ ಪ್ರಸಾದವನ್ನ ತಲುಪಿಸುವಲ್ಲಿ ಈ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ. ಆಹಾರ ವಿತರಣೆಯಲ್ಲಿನ ವಿಳಂಬ ಹಾಗೂ ನೂಕುನುಗ್ಗಲು ಇದರಿಂದ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯಶಸ್ಸಿನ ಬಳಿಕ ವ್ಯವಸ್ಥೆಯನ್ನ ಮತ್ತಷ್ಟು ವಿಸ್ತರಿಸಲು ಟಿಟಿಡಿ ಮುಂದಾಗಿದೆ.
ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಹಾಗೂ ನಾರಾಯಣಗಿರಿ ಶೆಡ್‌ಗಳಿಗೆ ವಿಸ್ತರಣೆ
ಪ್ರಾಯೋಗಿಕ ಹಂತದ ಯಶಸ್ಸಿನಿಂದ ಟಿಟಿಡಿ ಆಡಳಿತ ಮಂಡಳಿಯು, ಈ ಅತ್ಯಾಧುನಿಕ ಮೂವಿಂಗ್-ಟೇಬಲ್ ವ್ಯವಸ್ಥೆಯನ್ನ ತಿರುಮಲದ ಪ್ರಮುಖ ಕಾಯುವಿಕಾ ಕೇಂದ್ರಗಳಿಗೂ ವಿಸ್ತರಿಸಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ವೈಕುಂಠಂ ಕ್ಯೂ ಕಾಂಪ್ಲೆಕ್ಸ್-1 ಮತ್ತು 2 ನಾರಾಯಣಗಿರಿ ಶೆಡ್‌ಗಳು ಹಾಗೂ ಸ್ವಾಮಿಯ ದರ್ಶನದ ಪ್ರಮುಖ ಸರದಿ ಸಾಲುಗಳಲ್ಲಿ ಇದನ್ನು ಅಳವಡಿಸಲಾಗುವುದು.
ತಿರುಮಲಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಟಿಟಿಡಿ ಸದಾ ಮುಂಚೂಣಿಯಲ್ಲಿರುತ್ತದೆ. ಅನ್ನಪ್ರಸಾದ ವಿತರಣೆಯಲ್ಲಿ ತಂದಿರುವ ಈ ಹೊಸ ಬದಲಾವಣೆಯು ಭಕ್ತರ ಸಮಯವನ್ನು ಉಳಿಸುವುದರ ಜೊತೆಗೆ, ಸುಸ್ತು ಮತ್ತು ಆಯಾಸವಿಲ್ಲದೆ ದರ್ಶನ ಪಡೆಯಲು ಸಹಕಾರಿಯಾಗಲಿದೆ. ಭಕ್ತರಿಗೆ ಇನ್ನಷ್ಟು ಸುಲಭ ಮತ್ತು ಆರಾಮದಾಯಕವಾಗಿಸುವ ಟಿಟಿಡಿಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications
