ಎಚ್ಚರಿಕೆ ಗಂಟೆ: ಭಾರತದಲ್ಲಿ ಕೊವಿಡ್-19 ಸೋಂಕಿನ 3ನೇ ಅಲೆ ಶುರು!
ನವದೆಹಲಿ, ಜನವರಿ 3: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಶುರುವಾಗಲು ಹೊಸ ರೂಪಾಂತರಿ ಓಮಿಕ್ರಾನ್ ಕಾರಣವಾಗಿದೆ. ದೇಶದ ಮೆಟ್ರೋ ಸಿಟಿಗಳಲ್ಲಿ ಅತಿಹೆಚ್ಚು ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ ಎಂದು ಲಸಿಕೆ ಕಾರ್ಯಪಡೆ ಮುಖ್ಯಸ್ಥ ಡಾ. ಎನ್ ಕೆ ಅರೋರಾ ಎಚ್ಚರಿಕೆ ನೀಡಿದ್ದಾರೆ.
"ಮುಂಬೈ, ದೆಹಲಿ, ಕೋಲ್ಕತ್ತಾದಂತಹ ಮಹಾನಗರಗಳಲ್ಲಿ ಇತ್ತೀಚಿಗೆ ವರದಿ ಆಗುತ್ತಿರುವ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಶೇ.75ರಷ್ಟು ಪ್ರಕರಣಗಳು ಓಮಿಕ್ರಾನ್ ರೂಪಾಂತರಿ ಆಗಿವೆ. ಕಳೆದ ನವೆಂಬರ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿರುವ ಈ ಓಮಿಕ್ರಾನ್ ಸೋಂಕು ಅತಿಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ," ಎಂದು ಕೊವಿಡ್-19 ಕಾರ್ಯಪಡೆ ಮುಖ್ಯಸ್ಥ ಡಾ. ಎನ್ ಕೆ ಅರೋರಾ ಹೇಳಿದ್ದಾರೆ.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಕಳೆದ 24 ಗಂಟೆಗಳಲ್ಲಿ 30,000 ಗಡಿ ದಾಟಿ ಹೋಗಿದೆ. ಇದರ ಮಧ್ಯೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಬಗ್ಗೆ ತಜ್ಞರು ನೀಡಿರುವ ಎಚ್ಚರಿಕೆ ಏನು ಎಂಬುದರ ಕುರಿತು ಮುಂದೆ ಓದಿ.

ಮೆಟ್ರೋ ಸಿಟಿಗಳಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಸೋಂಕು
"ಕೊರೊನಾವೈರಸ್ ಸೋಂಕಿತರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಕಳೆದ ಡಿಸೆಂಬರ್ ತಿಂಗಳಿನ ಮೊದಲ ವಾರದಲ್ಲಿ ಮೊದಲ ಓಮಿಕ್ರಾನ್ ಸೋಂಕಿತ ಪ್ರಕರಣ ವರದಿ ಆಗಿತ್ತು. ಅದಾಗಿ ಒಂದು ವಾರದಲ್ಲಿ ದೇಶಾದ್ಯಂತ ಓಮಿಕ್ರಾನ್ ರೂಪಾಂತರಿ ಸೋಂಕಿತ ಪ್ರಕರಣಗಳ ಪಾಲು ಹೆಚ್ಚಾಗುತ್ತಾ ಹೋಯಿತು. ಎರಡನೇ ವಾರದಲ್ಲಿ ಒಟ್ಟು ಕೊವಿಡ್-19 ಸೋಂಕಿತ ಪ್ರಕರಣಗಳ ಪೈಕಿ ಶೇ.12ರಷ್ಟು ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತು. ಅದರ ಮುಂದಿನ ವಾರ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಪಾಲು ಶೇ.28ಕ್ಕೆ ಏರಿಕೆ ಆಯಿತು. ಆದ್ದರಿಂದ ದೇಶದಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಮಿತಿಮೀರಿದ ವೇಗದಲ್ಲಿ ಹರಡುತ್ತಿದೆ."

ಮೆಟ್ರೋ ಸಿಟಿಗಳಲ್ಲಿ ಹೆಚ್ಚಿದ ಓಮಿಕ್ರಾನ್ ಭೀತಿ
"ಭಾರತದ ಮಟ್ಟಿಗೆ ಹೇಳುವುದಾದರೆ ಮೆಟ್ರೋ ಸಿಟಿಗಳಲ್ಲಿ ಅತಿಹೆಚ್ಚು ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿದೆ. ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ನವದೆಹಲಿಯಲ್ಲಿ ಪತ್ತೆಯಾಗುವ ಒಟ್ಟು ಪ್ರಕರಣಗಳ ಪೈಕಿ ಶೇ.75ರಷ್ಟು ಜನರಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದ್ದು, ಎಲ್ಲರನ್ನೂ ಐಸೋಲೇಟ್ ಮಾಡಲಾಗಿದೆ," ಎಂದು ಡಾ. ಎನ್ ಕೆ ಅರೋರಾ ತಿಳಿಸಿದ್ದಾರೆ.

ದೇಶದಲ್ಲಿ 1,700 ಓಮಿಕ್ರಾನ್ ಸೋಂಕಿತ ಪ್ರಕರಣ
ಭಾರತದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.22ರಷ್ಟು ಏರಿಕೆಯಾಗಿದೆ. ದೇಶದಲ್ಲಿ ಒಟ್ಟು 1,700 ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು, ಅಂದರೆ 510 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ಜಿನೋಮ್ ಸೀಕ್ವೆನ್ಸಿಂಗ್ ವೇಳೆ ಗೊತ್ತಾಗಿದೆ. ಮಹಾರಾಷ್ಟ್ರದಲ್ಲಿಯೇ ಕೊರೊನಾವೈರಸ್ ಮೂರನೇ ಅಲೆಯು ಹೆಚ್ಚಾಗಿರುವ ಬಗ್ಗೆ ಡಾ. ಎನ್ ಕೆ. ಅರೋರಾ ಎಚ್ಚರಿಕೆ ನೀಡಿದ್ದಾರೆ.

ಮೂರನೇ ಅಲೆಯ ಬಗ್ಗೆ ಸ್ಪಷ್ಟ ಉಲ್ಲೇಖ
"ಭಾರತದಲ್ಲಿ ಕೊರೊನಾವೈರಸ್ ಮೂರನೇ ಅಲೆ ಇರುವುದು ಸ್ಪಷ್ಟವಾಗಿದೆ. ಮೂರನೇ ಅಲೆಯು ಸಂಪೂರ್ಣವಾಗಿ ಓಮಿಕ್ರಾನ್ ಸೋಂಕಿನಿಂದ ಆವರಿಸಿಕೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಏರಿಕೆ ಆಗುತ್ತಿರುವ ಕೊವಿಡ್-19 ಸೋಂಕಿತ ಪ್ರಕರಣಗಳನ್ನು ಗಮನಿಸಿದಾಗ ಇದು ಸಾಬೀತಾಗುತ್ತದೆ," ಎಂದು ಡಾ. ಎನ್ ಕೆ ಅರೋರಾ ತಿಳಿಸಿದ್ದಾರೆ.
ಇಂದು ಕೋವಿಡ್-19 ಲಸಿಕೆಯ ಡೋಸ್ ಪಡೆಯಲು ಪ್ರಾರಂಭಿಸಿದ 15-18 ವಯಸ್ಸಿನವರಿಗೆ ನೀಡಲಾಗುತ್ತಿರುವ ಲಸಿಕೆಗಳು ಅಸುರಕ್ಷಿತವಾಗಬಹುದು ಎಂಬ ಆತಂಕವನ್ನು ಡಾ ಅರೋರಾ ತಳ್ಳಿ ಹಾಕಿದ್ದಾರೆ. "ಇದು ನೀಡುತ್ತಿರುವ ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದೆ. ಲಸಿಕೆ ಉತ್ಪಾದಿಸುತ್ತಿದ್ದ ಆರಂಭಿಕ ಹಂತದಲ್ಲಿ ಲಸಿಕೆ ಕಾಲಾವಧಿ ಬಗ್ಗೆ ಸಮಸ್ಯೆಗಳು ಗೋಚರಿಸಿದ್ದವು, ಆದರೆ ಅವು ಅಧ್ಯಯನದ ಅವಧಿಗೆ ಮಾತ್ರ ಸೀಮಿತವಾಗಿವೆ. ಏಕೆಂದರೆ, ಲಸಿಕೆ ಉತ್ಪಾದಿಸುತ್ತಿರುವ ಅವಧಿಯಿಂದ ಇಂದಿನವರೆಗೆ ಪ್ರಾಣಿಗಳ ಮೇಲೆ ನಡೆಸಿರುವ ಅಧ್ಯಯನ ಮತ್ತು ಮೌಲ್ಯಮಾಪನದಿಂದ ಸಾಕಷ್ಟು ಅನುಭವವನ್ನು ಪಡೆದುಕೊಂಡಿದ್ದೇವೆ. ಅದರಿಂದ ಲಸಿಕೆಯು ಪರಿಣಾಮಕಾರಿ ಆಗಿದ್ದು, 12 ತಿಂಗಳವರೆಗೂ ಸಕ್ರಿಯವಾಗಿ ಸುರಕ್ಷತೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ," ಎಂದು ಡಾ. ಎನ್ ಕೆ ಅರೋರಾ ತಿಳಿಸಿದ್ದಾರೆ.












Click it and Unblock the Notifications