ಹಜ್ ಯಾತ್ರೆ ವಿಚಾರದಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ಆದೇಶ!
ನವದೆಹಲಿ: ಹಜ್ ಯಾತ್ರೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಹಜ್ ಯಾತ್ರೆ ಸಂಘಟಕರ ನೋಂದಣಿ ಪ್ರಮಾಣ ಪತ್ರದ ಕುರಿತಾಗಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮಹತ್ವದ ಆದೇಶ ಹೊರಬಿದ್ದಿದೆ. ಈ ಮೂಲಕ ಹಜ್ ಯಾತ್ರಿಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಹೌದು, ದೆಹಲಿ ಹೈಕೋರ್ಟ್ ಹಜ್ ಯಾತ್ರೆ ಸಂಘಟಕರ ನೋಂದಣಿ ಪ್ರಮಾಣಪತ್ರ ಹಾಗೂ ಹಜ್ ಕೋಟಾಗಳನ್ನು ಮರುಸ್ಥಾಪಿಸಿದೆ. ಹಜ್ ಯಾತ್ರೆ ಸಂಘಟಕರ ಪ್ರಮಾಣಪತ್ರಗಳು ಮತ್ತು ಕೋಟಾ ವಜಾಗೊಳಿಸಿದರೆ, ಅವರೊಂದಿಗೆ ನೋಂದಣಿ ಮಾಡಿಸಿಕೊಂಡ ಯಾತ್ರಾರ್ಥಿಗಳಿಗೆ ಸಂವಿಧಾನದ ಅಡಿಯಲ್ಲಿ ರಕ್ಷಿತವಾಗಿರುವ ತಮ್ಮ ಧಾರ್ಮಿಕ ಕರ್ತವ್ಯಗಳನ್ನು ನೆರವೇರಿಸಲು ಸಾಧ್ಯವಾಗದು ಎಂದು ಜಸ್ಟಿಸ್ ಚಂಧ್ರ ಧಾರಿ ಸಿಂಗ್ ಅವರು ತಿಳಿಸಿದ್ದಾರೆ. ಅಲ್ಲದೆ ಮತ್ತಷ್ಟು ಪ್ರಮುಖ ವಿಚಾರಗಳನ್ನು ಕೂಡ ಇದೇ ವೇಳೆ ನ್ಯಾಯಾಲಯವು ತಿಳಿಸಿತು.

ಸಂವಿಧಾನದ ವಿಧಿ 25ರ ಉಲ್ಲಂಘನೆ!
ಅಂದಹಾಗೆ ಈ ಅರ್ಜಿಯ ಬಗ್ಗೆ ಆದೇಶ ನೀಡುವಾಗ ನ್ಯಾಯಾಲಯ ಮತ್ತೊಂದು ವಿಚಾರ ಕೂಡ ತಿಳಿಸಿತು. ಹಜ್ ಯಾತ್ರೆ ಸಂಘಟಕರ ಪ್ರಮಾಣಪತ್ರ ಮತ್ತು ಕೋಟಾ ವಜಾಗೊಳಿಸಿದರೆ ಏನಾಗುತ್ತದೆ ಎಂಬುದನ್ನೂ ತಿಳಿಸಲಾಗಿದೆ. 'ಇಂತಹ ಒಂದು ಕ್ರಮ ಹಜ್ ನೀತಿಯ ಉದ್ದೇಶ ಸೋಲಿಸುತ್ತದೆ ಹಾಗೂ ಇದು ಸಂವಿಧಾನದ 25ನೇ ವಿಧಿಯ ಉಲ್ಲಂಘನೆ ಆಗುತ್ತದೆ' ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಈ ಮೂಲಕ ಹಜ್ ಯಾತ್ರಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹಾಗಾದರೆ ಸಂವಿಧಾನದ 25ನೇ ವಿಧಿ ಹೇಳುವುದಾದರೂ ಏನು? ಆ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.
25ನೇ ವಿಧಿ ಹೇಳುವುದೇನು?
ಇನ್ನು ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ಭಾರತದ ಪ್ರಜೆಗೂ ತನ್ನ ಧರ್ಮವನ್ನು ಆಚರಿಸಲು, ಪಾಲಿಸಲು ಹಾಗೂ ಅದರ ಪ್ರಚಾರದ ಹಕ್ಕನ್ನು ಖಾತ್ರಿಪಡಿಸುತ್ತದೆ. ಹೀಗಾಗಿ ಈ ವಿಧಿಯನ್ನು ನ್ಯಾಯಾಲಯ ಪ್ರಸ್ತಾಪ ಮಾಡಿದೆ. ತಮ್ಮ ನೋಂದಣಿ ಪ್ರಮಾಣಪತ್ರ ಹಾಗೂ ಹಜ್ ಕೋಟಾ ವಜಾಗೊಳಿಸಿ ಕೇಂದ್ರ ಸರ್ಕಾರ ಮೇ 25ರಂದು ಹೊರಡಿಸಿದ ಆದೇಶ ಪ್ರಶ್ನಿಸಿ ಹಜ್ ಯಾತ್ರೆ ಸಂಘಟಕರು ಅರ್ಜಿ ಸಲ್ಲಿಸಿದ್ದರು. ಇನ್ನು ಹಜ್ ಯಾತ್ರೆ ಸಂಘಟಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ದಿಲ್ಲಿ ಹೈಕೋರ್ಟ್ ನಡೆಸಿದ್ದು, ಈ ಮಹತ್ವದ ಆದೇಶ ಹೊರಡಿಸಿದೆ.

ಹಾಗೇ ಮತ್ತೊಂದ್ಕಡೆ ಹಜ್ ಯಾತ್ರೆ ಸಂಘಟಕರ ಪ್ರಮಾಣಪತ್ರಗಳನ್ನು ನ್ಯಾಯಾಲಯ ಈಗ ಮರುಸ್ಥಾಪಿಸಿದೆ, ಆದರೂ ಇಂತಹ ಸಂಸ್ಥೆಗಳ ವಿರುದ್ಧ ತನಿಖೆ ಮುಂದುವರಿಸಲು ಸರ್ಕಾರಕ್ಕೆ ಅನುಮತಿ ನೀಡಿದೆ ಕೋರ್ಟ್. ಅಲ್ಲದೆ ಅರ್ಜಿದಾರರ ತಪ್ಪುಗಳಿಂದಾಗಿ ಯಾತ್ರಾರ್ಥಿಗಳು ಬಾಧಿತರಾಗದಂತೆ ಹಾಗೂ ಯಾವುದೇ ಅಡೆತಡೆಯಿಲ್ಲದೆ ಅವರು ಯಾತ್ರೆ ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರ ಖಾತ್ರಿಪಡಿಸಬೇಕು ಎಂದು ಕೂಡ ನ್ಯಾಯಾಲಯ ಸೂಚಿಸಿದೆ.












Click it and Unblock the Notifications