ಈರುಳ್ಳಿ ಬೆಲೆ ನೂರಕ್ಕೇರಲು ಹತ್ತು ಕಾರಣಗಳು
ಇಂದಿನ ಕಾಲದಲ್ಲಿ ಬಡವರ ಕಣ್ಣಲ್ಲಿ ಕಣ್ಣೀರು ಬರಬೇಕೆಂದರೆ ಕಾರಣವೇ ಬೇಕಿಲ್ಲ. ಆಹಾರ ಧಾನ್ಯಗಳು, ಪೆಟ್ರೋಲ್, ಬಸ್ ರೈಲು ದರ, ಹಾಲು ಹಣ್ಣು, ಜುಟ್ಟಿಗೆ ಮುಡಿಯುವ ಮಲ್ಲಿಗೆ ಹೂವುಗಳ ದರಗಳನ್ನು ಕೇಳಿದರೇ ಸಾಕು ಬಡಜನತೆಯ ಕಣ್ಣಂಚಿನಲ್ಲಿ ನೀರು ಜಿನುಗಿರುತ್ತದೆ. ಇದಕ್ಕೆ ಈಗ ಹೊಸ ಸೇರ್ಪಡೆ ಸೆಂಚುರಿ ಬಾರಿಸಲು ಸಜ್ಜಾಗಿರುವ ಎಲ್ಲರ ಅಚ್ಚುಮೆಚ್ಚಿನ ಈರುಳ್ಳಿ ಯಾನೆ ಉಳ್ಳಾಗಡ್ಡಿ.
ಉಳ್ಳಾಗಡ್ಡಿಯ ಬಳಕೆಯಿಲ್ಲದೆ ಅನೇಕರ ಮನೆಗಳಲ್ಲಿ ಅಡುಗೆ ರುಚಿಕಟ್ಟುವುದಿಲ್ಲ. ಈರುಳ್ಳಿ ಇಲ್ಲದ ಚಿತ್ರಾನ್ನ, ಉಪ್ಪಿಟ್ಟು ಕಲ್ಪಿಸಿಕೊಂಡು ನೋಡಿ! ಎಷ್ಟೇ ಬೆಲೆ ಏರಲಿ, ಎಷ್ಟೇ ಕೊಳೆತಿದ್ದಿರಲಿ ಜೇಬಿಗೆ ತೂತು ಬಿದ್ದಾದರೂ ಸರಿ ಈರುಳ್ಳಿ ಮನೆಯಲ್ಲಿರಲಿ ಎಂದು ಹಲವಾರು ಜನರು ಉಳ್ಳಾಗಡ್ಡಿಯನ್ನು ಮನೆಗೆ ತರುತ್ತಿದ್ದಾರೆ.
ಆದರೆ, ದೀಪಾವಳಿ ಇನ್ನು ಕೆಲವೇ ದಿನವಿರುವಾಗ ಈರುಳ್ಳಿ ಬೆಲೆ ಭರ್ಜರಿ ಸಿಕ್ಸರ್ ಬಾರಿಸಿ ನೂರರ ಗಡಿ ದಾಟಿದರೆ ಕೊಳ್ಳುವುದಾದರೂ ಹೇಗೆ? ಐಷಾರಾಮಿ ಹೋಟೆಲುಗಳ ಸಲಾಡ್ ಮೆನುವಿನಿಂದ ಈಗಾಗಲೆ ಮಾಯವಾಗಿರುವ ಗಾಲಿಗಾಲಿ ಈರುಳ್ಳಿ, ಮಧ್ಯಮ ವರ್ಗದವರ ದರ್ಶಿನಿಯಿಂದ ಕಾಣೆಯಾಗುವುದು ದೂರವೇನಿಲ್ಲ.
ಪ್ರತಿ ಲೀಟರ್ ಪೆಟ್ರೋಲ್ ದರವನ್ನು ಹಿಂದಿಕ್ಕಿ ಈರುಳ್ಳಿ ಬೆಲೆ ಈಪಾಟಿ ಏರಲು ಕಾರಣಗಳಾದರೂ ಏನು? ಆಹಾರ ಹಣದುಬ್ಬರಕ್ಕೆ ಕಾರಣವಾಗಿರುವ ಉಳ್ಳಾಗಡ್ಡಿ ಯಾವ ಕಾರಣಗಳಿಂದಾಗಿ ಗ್ರಾಹಕರಿಂದ ದೂರ ದೂರ ಸಾಗುತ್ತಿದೆ? ಎಂಬ ಅಂಶಗಳತ್ತ ಕಣ್ಣು ಹಾಯಿಸೋಣ ಬನ್ನಿ. ಚಿನ್ನದ ನಿಕ್ಷೇಪದ ಕನಸು ಕಂಡ ಸಾಧು ಶೋಭನ ಸರ್ಕಾರ್ ಗೆ ಈರುಳ್ಳಿ ಹುದುಗಿಸಿಟ್ಟಿರುವ ಕನಸು ಬಿದ್ದರೆ ಚೆನ್ನಾಗಿರುತ್ತದೆ!

ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಪೂರೈಕೆ ಇಲ್ಲ
ಇಡೀ ದೇಶದ ಶೇ.45ರಷ್ಟು ಭಾಗಕ್ಕೆ ಭಾರತೀಯ ಆಹಾರದ ಅವಿಭಾಜ್ಯ ಅಂಗವಾಗಿರುವ ಈರುಳ್ಳಿ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಪೂರೈಕೆಯಾಗುತ್ತದೆ. ಈ ಎರಡೂ ರಾಜ್ಯಗಳಲ್ಲಿ ಈರುಳ್ಳಿ ಉತ್ಪಾದನೆ ಕುಂಠಿತವಾದರೆ ಇಡೀ ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆ ಕಂಡುಬರುತ್ತದೆ.

ಮಹಾರಾಷ್ಟ್ರದಲ್ಲಿ ಇಳುವರಿಯೇ ಕಡಿಮೆ
ಪ್ರಸ್ತುತ ವರ್ಷ ಮಹಾರಾಷ್ಟ್ರದಲ್ಲಿ ಈರುಳ್ಳಿ ಇಳುವರಿಯಲ್ಲಿ ಭಾರೀ ಇಳಿಕೆ ಕಂಡುಬರಲಿದೆ. ಇಲ್ಲಿಂದಲೇ ದೇಶದ ಶೇ.25ರಷ್ಟು ಈರುಳ್ಳಿ ಪೂರೈಕೆಯಾಗುತ್ತದೆ. ಇನ್ನು ಮಹಾರಾಷ್ಟ್ರದಲ್ಲೇ ಉತ್ಪಾದನೆ ಕುಂಠಿತವಾದರೆ ಸಹಜವಾಗಿ ಇಡೀ ದೇಶಕ್ಕೆ ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗುತ್ತದೆ. ಪರಿಣಾಮ ಈರುಳ್ಳಿ ಬೆಲೆ ಏರಿಕೆ.

ಭಾರೀ ಮಳೆಯಿಂದ ಬಾರದ ಈರುಳ್ಳಿ
ಜುಲೈನಿಂದ ಸೆಪ್ಟೆಂಬರ್ ವರೆಗೆ ಈರುಳ್ಳಿ ಬೆಳೆ ಅಷ್ಟಾಗಿ ಇರುವುದಿಲ್ಲ. ಆದರೆ, ಬೇಸಿಗೆ ಬೆಳೆಯಿಂದಾಗಿ ಅಷ್ಟಾಗಿ ಈರುಳ್ಳಿ ಕೊರತೆ ಕಂಡುಬರುವುದಿಲ್ಲ. ಆದರೆ, ದೇಶದೆಲ್ಲೆಡೆ ಸುರಿದ ಭಾರೀ ಮಳೆಯಿಂದಾಗಿ ಸೆಪ್ಟೆಂಬರ್ ಕೊನೆಗೆ ಬರಬೇಕಿದ್ದ ಈರುಳ್ಳಿ ಬರದಿದ್ದರಿಂದ ಭಾರೀ ಹೊಡೆತ ಬಿದ್ದಿದೆ.

ಮಹಾರಾಷ್ಟ್ರದಲ್ಲಿ ಹಾಳಾದ ಖಾರಿಫ್ ಬೆಳೆ
ಈರುಳ್ಳಿ ಅತಿ ಹೆಚ್ಚು ಬೆಳೆಯುವ ಮಹಾರಾಷ್ಟ್ರದಿಂದ ಈರುಳ್ಳಿ ಬೆಳೆಯಲು ಪೂರೈಕೆಯಾಗಬೇಕಾಗಿದ್ದ ಖಾರಿಫ್ ಬೆಳೆ ಹಾಳಾಗಿದ್ದರಿಂದ ಉಳಿದ ರಾಜ್ಯಗಳಿಗೆ ಈರುಳ್ಳಿ ಸಂದಾಯವಾಗಿಲ್ಲ. ಇದರಿಂದಾಗಿ ಬೇಡಿಕೆ ಜಾಸ್ತಿಯಿದ್ದರೂ ಕೊರತೆ ಕಂಡುಬಂದು ಬೆಲೆ ಏರಿಕೆಯಾಗಿದೆ.

ಅಕಾಲಿಕ ಮಳೆಯಿಂದ ರಬಿ ಬೆಳೆಯೂ ಹಾಳು
ಇದಕ್ಕೂ ಮೊದಲು ಮಾರ್ಚ್ ನಿಂದ ಮೇವರೆಗೆ ಬೇಸಿಗೆಯಲ್ಲಿ ಕೂಡ ಅಕಾಲಿಕ ಮಳೆಯಿಂದಾಗಿ ಬೇಸಿಗೆ ಬೆಳೆ ಅಥವಾ ರಬಿ ಕ್ರಾಪ್ ಹಾಳಾಗಿದ್ದರಿಂದ ಈರುಳ್ಳಿ ಪೂರೈಕೆಯಲ್ಲಿ ಕೊರತೆ ಕಂಡುಬಂದಿತ್ತು. ದೇಶದ ಶೇ.50ರಷ್ಟು ಭಾಗ ಈರುಳ್ಳಿಯ ಬೇಸಿಗೆ ಬೆಳೆಯನ್ನು ಅವಲಂಬಿಸಿದೆ.

ಉತ್ತಮ ತಳಿ ರಫ್ತಿಗೆ, ಹೋಟೆಲಿಗೆ ಸಂದಾಯ
ಕೇವಲ ಆರು ತಿಂಗಳು ಸಂಗ್ರಹಿಸಿಡಬಹುದಾದ ಈರುಳ್ಳಿ ಬೇಸಿಗೆ ಬೆಳೆ ಸಂಪೂರ್ಣ ಖಾಲಿಯಾಗಿದೆ. ರಫ್ತು ಮಾಡುವ ಮತ್ತು ಐಷಾರಾಮಿ ಹೋಟೆಲುಗಳಿಗೆ, ಆಹಾರ ಸಂಸ್ಕರಣ ಉದ್ಯಮಕ್ಕೆ ಸಂದಾಯವಾಗುವ ಈರುಳ್ಳಿ ಬೆಲೆ ಸಿಕ್ಕಾಪಟ್ಟೆ ದುಬಾರಿ. ಈಗ ಖಾರಿಫ್ ಬೆಳೆ ಕೂಡ ಮಳೆಯಿಂದಾಗಿ ಕೊಳೆತುಹೋಗಿದೆ. ಹೀಗಾದ್ರೆ ಬೆಲೆ ಏರದೆ ಇನ್ನೇನಾಗತ್ತೆ?

ಒಂದೇ ತಿಂಗಳಲ್ಲಿ ಕೊಳೆಯುತ್ತಿರುವ ಈರುಳ್ಳಿ
ಮಹಾರಾಷ್ಟ್ರದಲ್ಲಿ ವರ್ಷದಲ್ಲಿ ಮೂರು ಬೆಳೆಗಳನ್ನು ಬೆಳೆಯಲಾಗುತ್ತದೆ. ಅವುಗಳಲ್ಲಿ ಖಾರಿಫ್ ಬೆಳೆ ಕೂಡ ಸೇರಿದಂತೆ, ವಾತಾರವಣದಲ್ಲಿ ತೇವಾಂಶವಿದ್ದರಿಂದ ಮೂರು ಬೆಳೆಗಳೂ ಒಂದೇ ತಿಂಗಳಲ್ಲಿ ಕೊಳೆತುಹೋಗುತ್ತಿವೆ.

ಚಿತ್ರದುರ್ಗದಿಂದಲೂ ಈರುಳ್ಳಿ ಆಗಮಿಸುತ್ತಿಲ್ಲ
ಕರ್ನಾಟಕದ ಚಿತ್ರದುರ್ಗ ಸೇರಿದಂತೆ ಇತರ ಜಿಲ್ಲೆಗಳಿಂದ ಬೆಂಗಳೂರಿಗೆ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಆಗಮಿಸುತ್ತಿಲ್ಲ. ರಾಜಸ್ಥಾನದ ಆಳ್ವಾರ್, ಮಧ್ಯಪ್ರದೇಶದ ಇಂದೋರ್, ವಾರಣಾಸಿ, ಔರಂಗಾಬಾದ್ ಮುಂತಾದ ಪ್ರದೇಶಗಳಿಂದ ಈರುಳ್ಳಿ ರಫ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ದೇಶದ ಪ್ರಮಖ ನಗರಗಳ ಮಾರುಕಟ್ಟೆಗೆ ಈರುಳ್ಳಿ ಆಗಮಿಸುತ್ತಿಲ್ಲ.

ಬೇಡಿಕೆ ಜಾಸ್ತಿ, ಪೂರೈಕೆಯಲ್ಲಿ ಕೊರತೆ
ಹಬ್ಬದ ಸಮಯದಲ್ಲಿ ಈರುಳ್ಳಿ ಬೆಲೆ ನೂರರ ಗಡಿ ದಾಟುತ್ತದೆ ಎಂದು ತಿಳಿಯುತ್ತಿದ್ದಂತೆ ಜನರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಕೊಳ್ಳಲು ಮುಂದಾಗಿದ್ದರಿಂದ, ಬೇಡಿಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿ, ಪೂರೈಕೆ ಕಡಿಮೆಯಾಗಿ, ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಕೂಡಿಟ್ಟ ಈರುಳ್ಳಿ ದಾಸ್ತಾನು
ದೀಪಾವಳಿ ಹತ್ತಿರ ಬರುತ್ತಿದ್ದಂತೆ ಈರುಳ್ಳಿ ಬೆಲೆ ಇನ್ನೂ ಜಾಸ್ತಿಯಾಗುತ್ತದೆ ಎಂದು ತಿಳಿಯುತ್ತಿದ್ದಂತೆ ಸಗಟು ವ್ಯಾಪಾರಸ್ಥರು ಈರುಳ್ಳಿ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿಲ್ಲ. ಕರ್ನಾಟಕದ ಚಳ್ಳಕೆರೆ, ಚಿತ್ರದುರ್ಗದಿಂದ ಈರುಳ್ಳಿ ಬೆಂಗಳೂರಿಗೆ ಬರುತ್ತಲೇ ಇಲ್ಲ. ಇದರಿಂದಾಗಿಯೂ ಈರುಳ್ಳಿ ಬೆಲೆ ಗಗನಕ್ಕೇರಿ ಕುಳಿತಿದೆ.












Click it and Unblock the Notifications