Actor Balakrishna: ಲಿಂಗಾಯತರ ಬಗ್ಗೆ ಕಾಳಜಿ ವಹಿಸುವ ಅಗತ್ಯವಿಲ್ಲ! ಸಹಾಯ ಕೇಳಿದ ಗ್ರಾಮಸ್ಥರಿಗೆ ಶಾಸಕನ ದರ್ಪದ ಉತ್ತರ
ತೆಲುಗು ಚಿತ್ರರಂಗದ ಹಿರಿಯ ನಟ, ಶಾಸಕ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ತಮ್ಮ ಹೇಳಿಕೆ ಮೂಲಕ ವಿವಾದ ಮಾಡಿಕೊಂಡಿದ್ದಾರೆ. ತೆರೆಯ ಮೇಲೆ ದೊಡ್ಡ ಹೀರೋ ಆಗಿರುವ ಶಾಸಕ ಇದೀಗ ಸಹಾಯ ಕೇಳಿ ಬಂದ ಗ್ರಾಮಸ್ಥರನ್ನೇ ಬೈದು ಕಳಿಸಿದ್ದಲ್ಲದೆ, ಅವರ ಜಾತಿಯ ಬಗ್ಗೆ ಮಾತನಾಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಚಲನಚಿತ್ರ ನಟ ಮತ್ತು ಹಿಂದೂಪುರಂನ ಟಿಡಿಪಿ ಶಾಸಕ ನಂದಮೂರಿ ಬಾಲಕೃಷ್ಣ ಗುರುವಾರ ತಮ್ಮ ಹುಟ್ಟೂರಾದ ನಿಮ್ಮಕೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೊಮರವೊಲೊ ಗ್ರಾಮಸ್ಥರು ಬಾಲಕೃಷ್ಣ ಅವರ ಜೊತೆ ಫೋಟೊಗಳನ್ನು ತೆಗೆಸಿಕೊಂಡಿದ್ದಕ್ಕೆ ಕೋಪಗೊಂಡಿದ್ದಾರೆ. ಫೋಟೊ ತೆಗೆಸಿಕೊಳ್ಳುವ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಊರಿನ ಅಭಿವೃದ್ಧಿ ಕಡೆ ಗಮನ ಕೊಡುವಂತೆ ಕೇಳಿದ್ದಕ್ಕೆ ಸಿಟ್ಟಾಗಿದ್ದು, ಫೋಟೊಗಳನ್ನು ತೆಗೆದುಕೊಂಡಿದ್ದೀರಲ್ಲಾ ಅಷ್ಟೇ ಸಾಕು ಇಲ್ಲಿಂದ ಹೋಗಿ ಎಂದಿದ್ದಾರೆ.

ಅಷ್ಟೇ ಅಲ್ಲದೆ "ಕೊಮರವೋಲ್ ಗ್ರಾಮ ಎಲ್ಲಿದೆ?" ಎಂದು ವ್ಯಂಗ್ಯವಾಗಿ ಕೇಳಿದ್ದು, ಅವರು ಲಿಂಗಾಯತರು ಅವರ ಬಗ್ಗೆ ಕಾಳಜಿ ವಹಿಸುವ ಅಗತ್ಯ ನನಗಿಲ್ಲ ಎಂದು ಹೇಳಿದ್ದಾರೆ. ಜಾತಿಯನ್ನು ಉಲ್ಲೇಖಿಸಿ ಕೆಲಸ ಮಾಡಲ್ಲ ಎಂದಿರುವ ಬಾಲಕೃಷ್ಣ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿದ್ದು, ತೆರೆಯ ಮೇಲಷ್ಟೆ ಇವರು ಹೀರೋಗಳು ಎಂದು ಜನ ಟೀಕೆ ಮಾಡುತ್ತಿದ್ದಾರೆ.
ವಿವಾದಗಳೇನೂ ಹೊಸದಲ್ಲ
ನಟ, ಶಾಸಕ ನಂದಮೂರಿ ಬಾಲಕೃಷ್ಣ ಅವರಿಗೆ ವಿವಾದಗಳೇನೂ ಹೊಸದಲ್ಲ, ಈ ಮೊದಲು ತಮ್ಮ ವರ್ತನೆಯಿಂದ ಹಲವು ಬಾರಿ ವಿವಾದ ಮಾಡಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಗೇ ಹೊಡೆಯುವ ಮೂಲಕ ವಿವಾದ ಮಾಡಿಕೊಂಡಿದ್ದರು. ಈಗ ತನ್ನ ಮತಕ್ಷೇತ್ರದಲ್ಲಿರುವ ಹಳ್ಳಿಯ ಜನ ಕೆಲಸ ಮಾಡುವಂತೆ ಮನವಿ ಮಾಡಿದರೆ ನಡೆದುಕೊಂಡಿರುವ ರೀತಿಗೆ ಟೀಕೆ ವ್ಯಕ್ತವಾಗುತ್ತಿದೆ.
ನಿಮ್ಮಕೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಂದಮೂರಿ ಬಾಲಕೃಷ್ಣ ತಮ್ಮ ಅಪ್ಪ-ಅಮ್ಮನ ಪ್ರತಿಮೆಗಳಿಗೆ ಹಾರ ಹಾಕುವ ಮೂಲಕ ಗೌರವ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ಅವರಿಗೆ ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಿದ ಬಳಿಕ ಮೊದಲ ಬಾರಿಗೆ ನಿಮ್ಮಕೂರಿಗೆ ಭೇಟಿ ನೀಡಿದ್ದರು. ಬಾಲಕೃಷ್ಣರಿಗೆ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತ ಕೋರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ತನ್ನ ತಂದೆ ಎನ್‌ಟಿಆರ್ ಅವರಿಗೆ ಶೀಘ್ರದಲ್ಲೇ 'ಭಾರತ ರತ್ನ' ಪ್ರಶಸ್ತಿ ದೊರೆಯಲಿ ಎನ್ನುವ ಆಶಯ ವ್ಯಕ್ತಪಡಿಸಿದರು.












Click it and Unblock the Notifications