Telangana Poll: ಕಾಂಗ್ರೆಸ್ ನಿಂದ 'ಕರ್ನಾಟಕ ಮಾದರಿ' ಮಾರಾಟ: ಯಡಿಯೂರಪ್ಪ
ಹೈದರಾಬಾದ್, ನವೆಂಬರ್ 22: ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಉಚಿತ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ 05 ಗ್ಯಾರೆಂಟಿಗಳನ್ನು ಜಾರಿಗೊಳಿಸದೆ ಕರ್ನಾಟಕದ ಜನರನ್ನು ವಂಚಿಸಿದೆ ಎಂದು ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಬುಧವಾರ ಆರೋಪಿಸಿದರು.
ತೆಲಂಗಾಣ ಚುನಾವಣೆ ಕುರಿತು ಹೈದರಾಬಾದ್‌ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ಅವರು, 'ಕರ್ನಾಟಕ ಮಾದರಿ' ಯನ್ನು ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಚುನಾವಣಾ ಮಾದರಿಯಾಗಿಟ್ಟುಕೊಂಡಿದೆ. ಕಾಂಗ್ರೆಸ್ ಪಕ್ಷವು ಘೋಷಿಸುವ "ಸುಳ್ಳು ಮತ್ತು ಪೊಳ್ಳು ಭರವಸೆಗಳಿಗೆ" ನಂಬಬೇಡಿ. ಕಾಂಗ್ರೆಸ್ ಹೇಳಿದಂತೆ ನಡೆದುಕೊಳ್ಳುವುದಿಲ್ಲ ಎಂದು ತೆಲಂಗಾಣ ಜನರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ತನ್ನ ಐದು ಚುನಾವಣಾ ಪೂರ್ವ ಭರವಸೆಗಳನ್ನು ಜಾರಿಗೊಳಿಸದೆ ಕರ್ನಾಟಕದ ಜನರನ್ನು ವಂಚಿಸಿದೆ. ಅನ್ಯಾಯ ಮಾಡಿದೆ ಎಂದರು.
ಕರ್ನಾಟಕ ರಾಜ್ಯದ ಮತದಾರರಿಗೆ ಆಡಳಿತ ಪಕ್ಷ ಕಾಂಗ್ರೆಸ್ ಐದು ಭರವಸೆಗಳನ್ನು ನೀಡಿತ್ತು. ಬಳಿಕ ಇದೇ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿತ್ತು. ಇದು ತೆಲಂಗಾಣ ಮತ್ತು ಚುನಾವಣೆ ನಡೆಯುವ ಇತರ ರಾಜ್ಯಗಳಲ್ಲಿ "ಕರ್ನಾಟಕ ಮಾದರಿ" ಅನ್ನು ಮಾರಾಟ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದೆ.
ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ
ಕರ್ನಾಟಕದಲ್ಲಿ ಸರ್ಕಾರವು ತನ್ನ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಹೀಗಿದ್ದರೂ ಸುಳ್ಳು ಹೇಳಿಕೊಂಡು ಜನರನ್ನು ನಂಬಿಸುತ್ತಿದೆ. ತೆಲಂಗಾಣದ ಜನರು ಈ ಕಾಂಗ್ರೆಸ್ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ ಎಂದು ಅವರು ಹೇಳಿದರು.

ಸದ್ಯ ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನ ಆರು ಭರವಸೆಗಳ ಚುನಾವಣೆ ಪ್ರಣಾಳಿಕೆ ಮೂಲಕ ರಾಜ್ಯದ ಮತದಾರರನ್ನು ವಂಚಿಸಲು ಯತ್ನಿಸುತ್ತಿದೆ. ತೆಲಂಗಾಣ ಜನರು ಪ್ರಣಾಳಿಕೆಯಲ್ಲಿನ ಅಂಶಗಳನ್ನು ನಂಬಿ ಮೋಸ ಹೋಗಬಾರದು ಎಂದು ಹೇಳಿದ ಯಡಿಯೂರಪ್ಪ ಬಿಜೆಪಿ ಪರ ಮತಯಾಚನೆ ಮಾಡಿದರು.
ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ಕಿಡಿ
ತೆಲಂಗಾಣದಲ್ಲಿ ಇದೇ ನವೆಂಬರ್ 30ರಂದು ಎಲ್ಲ ವಿಧಾನಸಭಾ ಚುನಾವಣೆಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 03 ರಂದು ಮತ ಎಣಿಕೆನಡೆಯಲಿದೆ. ಈ ಹಿಂದೆ ಕರ್ನಾಟಕ ಕಾಂಗ್ರೆಸ್ ನಾಯಕರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ತೆಲಂಗಾಣಕ್ಕೆ ತೆರಳಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು.
ಇದೀಗ ಕರ್ನಾಟಕದ ಬಿಜೆಪಿ ನಾಯಕ ರಾಜಾಹುಲಿ ಬಿಎಸ್ ಯಡಿಯೂರಪ್ಪ ಅವರು ತೆಲಂಗಾಣದಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಭಾಷಣದುದ್ದಕ್ಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications