ಉದ್ಯೋಗ ಹಗರಣ: ಅಭಿಷೇಕ್ ಬ್ಯಾನರ್ಜಿಗೆ ಕೋರ್ಟ್ ರಿಲೀಫ್ ಸಿಕ್ಕ ದಿನವೇ ಸಿಬಿಐ ಸಮನ್ಸ್!
ನವದೆಹಲಿ, ಏಪ್ರಿಲ್. 17: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದ ಕೆಲವೇ ಗಂಟೆಗಳ ಬಳಿಕ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಕೇಂದ್ರ ತನಿಖಾ ದಳ (ಸಿಬಿಐ) ಸಮನ್ಸ್ ಜಾರಿ ಮಾಡಿದೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರಿಗೆ, ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರದ ಆರೋಪದ ಕುರಿತ ತನಿಖೆಗೆ ಆದೇಶಿಸಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದ ಕೆಲವೇ ಗಂಟೆಗಳ ನಂತರ ಸೋಮವಾರ ಮಧ್ಯಾಹ್ನ ಸಿಬಿಐ ಸಮನ್ಸ್ ನೀಡಿದೆ.

ಮೂಲಗಳ ಪ್ರಕಾರ, ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಬ್ಯಾನರ್ಜಿ ಅವರನ್ನು ಪ್ರಶ್ನಿಸುವಂತೆ ಕೇಂದ್ರ ತನಿಖಾ ಸಂಸ್ಥೆಗಳಿಗೆ ಕಲ್ಕತ್ತಾ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿದ್ದ ಕಾರಣ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಇದಾದ ನಂತರವೂ ಸಂಸದರಿಗೆ ಸಿಬಿಐ ಸಮನ್ಸ್ ಹಸ್ತಾಂತರಿಸಲಾಗಿದೆ.
ಈಗಾಗಲೇ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿದ್ದು, ಈ ಘಟನೆ ಮತ್ತೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ತೀವ್ರ ಘರ್ಷಣೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಅಭಿಷೇಕ್ ಬ್ಯಾನರ್ಜಿ ಅವರು ಸುಪ್ರೀಂ ಕೋರ್ಟ್ ತಡೆಯಾಜ್ಞೆ ಉಲ್ಲಂಘಿಸಿದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುತ್ತಾರೆ.
In its desperation to ‘harass’ and ‘target’ me, BJP EXPOSES CBI & ED to CONTEMPT OF COURT!
— Abhishek Banerjee (@abhishekaitc) April 17, 2023
SC stayed the Calcutta HC’s order in the morn that granted permission to the Central Agencies to summon me.
Yet, the ‘SUMMON’ was HAND-DELIVERED today at 1:45 pm
Grave State of affairs! pic.twitter.com/p7wVT4Eycq
ಈ ಕುರಿತು ಟ್ವೀಟ್ ಮಾಡಿರುವ ಸಂಸದ ಅಭಿಷೇಕ್ ಬ್ಯಾನರ್ಜಿ, "ನನಗೆ 'ಕಿರುಕುಳ' ಮತ್ತು 'ಟಾರ್ಗೆಟ್' ಮಾಡುವ ಹತಾಶೆಯಲ್ಲಿ, ಬಿಜೆಪಿಯು ಸಿಬಿಐ ಮತ್ತು ಇಡಿಯನ್ನು ನ್ಯಾಯಾಲಯ ನಿಂದನೆಗೆ ಒಡ್ಡಿದೆ!. ನನಗೆ ಸಮನ್ಸ್ ನೀಡಲು ಕೇಂದ್ರ ಏಜೆನ್ಸಿಗಳಿಗೆ ಅನುಮತಿ ನೀಡಿದ ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಬೆಳಗ್ಗೆ ತಡೆಹಿಡಿಯಿತು. ಆದರೂ, 'ಸಮನ್ಸ್' ಅನ್ನು ಇಂದು ಮಧ್ಯಾಹ್ನ 1:45 ಕ್ಕೆ ವಿತರಿಸಲಾಗಿದೆ. ಇದೊಂದು ಗಂಭೀರ ಸ್ಥಿತಿ!" ಎಂದು ಟೀಕಿಸಿದ್ದಾರೆ.

ಭಾನುವಾರವಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮದ್ಯದ ನೀತಿ ರೂಪಿಸುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಪ್ರಕರಣದಲ್ಲಿ ಸಿಬಿಐ ವಿಚಾರಣೆ ನಡೆಸಿತ್ತು. ಇದೇ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ. ಬಂಧನಕ್ಕೂ ಮೊದಲು ಅವರ ಮನೆ ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದಲ್ಲಿ ವಿರೋಧ ಪಕ್ಷದ ನಾಯಕರು ಬಿಜೆಪಿ ಸರ್ಕಾರವು ಉದ್ದೇಶಪೂರ್ವಕವಾಗಿ ಕೇಂದ್ರೀಯ ಸಂಸ್ಥೆಗಳನ್ನು ಸುಳ್ಳು ಪ್ರಕರಣಗಳಲ್ಲಿ ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇತ್ತ ತನ್ನ ಸೋದರಳಿಯನಿಗೆ ಸಿಬಿಐ ಸಮನ್ಸ್‌ನ ನೀಡುವ ಮೊದಲು ಮಾತನಾಡಿದ್ದ ಸಿಎಂ ಮಮತಾ ಬ್ಯಾನರ್ಜಿ, 2024 ರ ರಾಷ್ಟ್ರೀಯ ಚುನಾವಣೆಗೆ ವಿರೋಧ ಪಕ್ಷಗಳು ಒಂದಾಗುವ ಬಗ್ಗೆ ಮಾತನಾಡುವಾಗಲೆಲ್ಲಾ ಕೇಂದ್ರವು ಸಿಬಿಐ ಮತ್ತು ಇತರ ಏಜೆನ್ಸಿಗಳನ್ನು ಬಳಸಿ ಅವರ ಬಾಯಿ ಮುಚ್ಚಿಸಲು ಮತ್ತು ಒಗ್ಗಟ್ಟು ಮುರಿಯಲು ನೋಡುತ್ತಿದೆ ಎಂದು ಆರೋಪಿಸಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಕಳೆದ ವರ್ಷ ಜುಲೈನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. 2014ರಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರೂ ಉದ್ಯೋಗ ನಿರಾಕರಿಸಲಾಗಿದೆ ಎಂದು ಕೆಲವು ಅಭ್ಯರ್ಥಿಗಳ ದೂರನ್ನು ಸಿಬಿಐ ತನಿಖೆ ನಡೆಸುತ್ತಿದೆ.












Click it and Unblock the Notifications