ಆಂಧ್ರ ಪ್ರದೇಶ ಚುನಾವಣೆ: ವೈಎಸ್‌ಆರ್‌ಸಿಪಿ ಪರ ಮತ ಹಾಕಿದ್ದಕ್ಕೆ ತಾಯಿಯನ್ನೇ ಕೊಂದ ಟಿಡಿಪಿ ಬೆಂಬಲಿಗ
ರಾಜಕೀಯ ಎನ್ನುವುದು ತೀರಾ ವೈಯಕ್ತಿಕ ಆಗಬಾರದು, ರಾಜಕೀಯ ನಾಯಕರು ಹೊರಗಡೆ ಕಿತ್ತಾಡಿದರೂ, ಇಬ್ಬರೂ ಕೂಡ ಸ್ನೇಹಿತರೇ ಆಗಿರುತ್ತಾರೆ. ಅದಕ್ಕೆ ರಾಜಕೀಯದಲ್ಲಿ ಯಾರೂ ಶತ್ರುಗಳೂ ಅಲ್ಲ ಮಿತ್ರರೂ ಅಲ್ಲ ಎನ್ನುವ ಗಾದೆ ಮಾತಿದೆ. ಆದರೆ ಕಾರ್ಯಕರ್ತರು ಮಾತ್ರ ಬದ್ಧ ವೈರಿಗಳಂತೆ ಆಡುವುದನ್ನು ನೋಡಬಹುದು.
ಆಂಧ್ರ ಪ್ರದೇಶದಲ್ಲಿ ಎದುರಾಳಿ ಪಕ್ಷಕ್ಕೆ ಮತ ಹಾಕಿದ ತಾಯಿಯನ್ನೇ ಮಗ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಅನಂತಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಬೆಂಬಲಿಗ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ತಾಯಿಯನ್ನು ಕೊಲೆ ಮಾಡಿದ್ದಾನೆ.

ಬುಧವಾರ ಆಂಧ್ರ ಪ್ರದೇಶ ವಿಧಾನಸಭೆಗೆ ಮತದಾನ ಮುಕ್ತಾಯವಾಗಿದೆ. ಮತ ಹಾಕಿದ ತಪ್ಪಿಗೆ ತಾಯಿ ಕೊಲೆಯಾಗಿದ್ದಾರೆ. ಆರೋಪಿಯನ್ನು ಕಂಬದೂರು ಮಂಡಲದ ಏಗುವಪಲ್ಲೆ ಗ್ರಾಮದ ವಡ್ಡೆ ವೆಂಕಟೇಶ್ವರಲು (35) ಎಂದು ಗುರುತಿಸಲಾಗಿದ್ದು, ಟಿಡಿಪಿ ಬೆಂಬಲಿಗ ಎಂದು ಪೊಲೀಸರು ಹೇಳಿದ್ದಾರೆ.
ಮೇ 13ರಂದು ನಡೆದಿದ್ದ ಮತದಾನ
ಮೇ 13 ರಂದು ತನ್ನ ತಾಯಿ ಸುಂಕಮ್ಮ (65) ಅವರು ವೈಎಸ್‌ಆರ್‌ಸಿಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ತಿಳಿದ ನಂತರ ಮಗ ಕೋಪಗೊಂಡಿದ್ದ ಎಂದು ವರದಿಯಾಗಿದೆ.
ಈ ವಿಚಾರವಾಗಿ ಅವರು ತಮ್ಮ ತಾಯಿಯೊಂದಿಗೆ ಜಗಳವಾಡುತ್ತಿದ್ದರು. ವೆಂಕಟೇಶ್ವರಲು ಸುಂಕಮ್ಮ ಅವರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದು, ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆತ ಗ್ರಾಮದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಲಾಟೆ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ನೋಡಿದಾಗ ಸುಂಕಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವೆಂಕಟೇಶ್ವರಲು ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.












Click it and Unblock the Notifications