ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧನ: ಏನಿದು ₹371 ಕೋಟಿ ಸ್ಕಿಲ್ ಡೆವಲಪ್‌ಮೆಂಟ್ ಹಗರಣ? ಇಲ್ಲಿದೆ ಸಂಪೂರ್ಣ ಮಾಹಿತಿ
ಕೌಶಲ್ಯಾಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಅಪರಾಧ ತನಿಖಾ ಇಲಾಖೆ ( ಸಿಐಡಿ ) ಪೊಲೀಸರು ಇಂದು ಬಂಧಿಸಿದ್ದಾರೆ. ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರು ಎ1 ಆರೋಪಿಯಾಗಿದ್ದಾರೆ. ₹371 ಕೋಟಿ ಸ್ಕಿಲ್ ಡೆವಲಪ್‌ಮೆಂಟ್ ಹಗರಣದ ಬಗ್ಗೆ ತಿಳಿಯಿರಿ
371 ಕೋಟಿ ರೂ ಹಗರಣ ಆರೋಪ
371 ಕೋಟಿ ರೂ ಹಗರಣವು ಕೌಶಲ್ಯ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದೆ. ಇದು ಆಂದ್ರಪ್ರದೇಶದ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರು ಎ1 ಆರೋಪಿಯಾಗಿದ್ದಾರೆ. ಚಂದ್ರಬಾಬು ನಾಯ್ಡು ಅವರನ್ನು ಒಳಗೊಂಡಂತೆ ಹಲವರ ವಿರುದ್ದ ಪ್ರಕರಣ ದಾಖಲಾಗಿದೆ.

ಸ್ಕಿಲ್ ಡೆವೆಲಪ್‌ಮೆಂಟ್ ನಿಗಮದ ಗುತ್ತಿಗೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು, ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ನೆಪದಲ್ಲಿ ವಂಚನೆ ಮಾಡಿರುವ ಆರೋಪಗಳು ನಾಯ್ಡು ಅವರ ಮೇಲೆ ಕೇಳಿಬಂದಿವೆ.
ಜಿಎಸ್‌ಟಿ, ಇಂಟೆಲಿಜೆನ್ಸ್, ಐಟಿ, ಇಡಿ, ಸೆಬಿ ಮುಂತಾದ ಸರ್ಕಾರಿ ಏಜೆನ್ಸಿಗಳು ಈ ಹಗರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿವೆ. ಈ ಹಗರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ಬಚ್ಚಿಟ್ಟಿದ್ದ ಹಣವನ್ನು ಅಧಿಕಾರಿಗಳು ವಾಪಸ್ ಪಡೆದುಕೊಂಡಿದ್ದಾರೆ.
ಜೂನ್ 2014 ರಲ್ಲಿ ಚಂದ್ರಬಾಬು ನಾಯ್ಡು ಅವರು ಅಧಿಕಾರಕ್ಕೆ ಬಂದ ಕೇವಲ ಎರಡು ತಿಂಗಳ ನಂತರ ಈ ಹಗರಣ ಬೆಳಕಿಗೆ ಬಂದಿದೆ. ಈ ಯೋಜನೆಯು ಒಟ್ಟು ರೂ. 3,356 ಕೋಟಿಗಳನ್ನು ಹೊಂದಿತ್ತು. ಸರ್ಕಾರವು ಶೇ 10 ವ್ಯಯಿಸಿದರೆ, ಸೀಮೆನ್ಸ್ ಕಂಪನಿ ಶೇ 90 ಖರ್ಚು ಮಾಡಲು ಒಪ್ಪಿಕೊಂಡಿತ್ತು.
ಈ ಹಗರಣದ ಕುರಿತಂತೆ ಸೀಮೆನ್ಸ್ ಆಂತರಿಕ ವಿಚಾರಣೆಯನ್ನು ನಡೆಸಿತು. ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ಹೇಳಿಕೆಯನ್ನು ಒದಗಿಸಿತು. ಜಂಟಿ ಉದ್ಯಮ (ಜೆವಿಒ) ಅಥವಾ ತಿಳುವಳಿಕೆ ಪತ್ರದಲ್ಲಿ (ಎಂಒಯು) ತಮ್ಮ ಕಂಪನಿಯು ಯಾವುದೇ ತೊಡಗಿಸಿಕೊಂಡಿಲ್ಲ ಎಂದು ಸೀಮೆನ್ಸ್ ಒತ್ತಿಹೇಳಿತ್ತು.
ಈ ಯೋಜನೆಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿದೆ. ಯೋಜನೆಗೆ ತ್ವರಿತ ಅನುಮೋದನೆ ಮತ್ತು ನಿಧಿಯ ಬಿಡುಗಡೆಗೆ ಸಂಬಂಧಿಸಿದಂತೆ ಹಲವು ನಿಯಮಯಗಳು ಹಾಗೂ ನಿಬಂಧನೆಗಳನ್ನು ಅನುಸರಿಸಿಲ್ಲವೆಂದು ತಿಳಿದುಬಂದಿದೆ. ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದಲ್ಲದೆ, ಒಪ್ಪಂದ ಮತ್ತು ಸರ್ಕಾರದ ಆದೇಶಗಳಲ್ಲಿ ವಿರೋಧಾಭಾಸ ಕಂಡುಬರುತ್ತಿವೆ. ಸ್ಪಷ್ಟವಾದ ಒಪ್ಪಂದದ ಆಧಾರವಿಲ್ಲದೆ ಹಣವನ್ನು ಬಿಡುಗಡೆ ಮಾಡಲಾಗಿದೆ. ಹಣಕಾಸು ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದಾಗಲೂ ಚಂದ್ರಬಾಬು ನಾಯ್ಡು ಅವರು ತಕ್ಷಣ ಹಣ ಬಿಡುಗಡೆಗೆ ಆದೇಶ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಣಕಾಸು ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿ ಸೇರಿದಂತೆ ಸರ್ಕಾರದೊಳಗಿನ ಪ್ರಮುಖ ಅಧಿಕಾರಿಗಳು ಹಣ ಬಿಡುಗಡೆಗೆ ಅನುಕೂಲ ಮಾಡಿಕೊಡುವಲ್ಲಿ ಪಾತ್ರ ವಹಿಸಿದ್ದಾರೆ ಎಂದು ವರದಿಯಾಗಿದೆ. ಇಷ್ಟಾದ ಮೇಲೆಯೂ, ಈ ನಿಧಿಗಳು ಎಲ್ಲಿವೆ ಎಂಬುದು ತಿಳಿದಿಲ್ಲ.
ರಾಜಕೀಯ ದುರುದ್ದೇಶದ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದೆ ಎಂದು ಟಿಡಿಪಿ ಹೇಳಿಕೊಂಡಿದೆ.












Click it and Unblock the Notifications