BBC ಕಛೇರಿಗಳಲ್ಲಿ 2ನೇ ದಿನವೂ ಕಾಣಿಸಿಕೊಂಡ ಐಟಿ ಅಧಿಕಾರಿಗಳು: ಉದ್ಯೋಗಿಗಳಿಗೆ 'Work from home' ನೀಡಿದ ಸಂಸ್ಥೆ
ಆದಾಯ ತೆರಿಗೆ ಅಧಿಕಾರಿಗಳು ಬಿಬಿಸಿ ಕಚೇರಿಗಳ ಮೇಲೆ ಮಂಗಳವಾರ ದಾಳಿ ನಡೆಸಿದ್ದಾರೆ. ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಎರಡನೇ ದಿನವೂ ಶೋಧ ಮುಂದುವರಿದಿದೆ. ಉದ್ಯೋಗಿಗಳಿಗೆ Work from home ನೀಡಲಾಗಿದೆ.
ನವದೆಹಲಿ, ಫೆಬ್ರವರಿ 15: ಪ್ರಧಾನಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತು ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ವಾರಗಳ ನಂತರ, ಆದಾಯ ತೆರಿಗೆ ಅಧಿಕಾರಿಗಳು ಬಿಬಿಸಿ ಕಚೇರಿಗಳ ಮೇಲೆ ಮಂಗಳವಾರ ದಾಳಿ ನಡೆಸಿದ್ದಾರೆ. ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಎರಡನೇ ದಿನವೂ ಶೋಧ ಮುಂದುವರಿದಿದೆ.

ಉದ್ಯೋಗಿಗಳಿಗೆ ಇಮೇಲ್‌ನಲ್ಲಿ ಸಂದೇಶ
BBC (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ಉದ್ಯೋಗಿಗಳಿಗೆ ಇಮೇಲ್‌ನಲ್ಲಿ ಸಂದೇಶ ರವಾನಿಸಿದೆ. ಅದರ ಪ್ರಸಾರ ವಿಭಾಗವನ್ನು ಹೊರತುಪಡಿಸಿ ಉಳಿದೆಲ್ಲರೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. 'ಐಟಿ ಅಧಿಕಾರಿಗಳು ನೌಕರರನ್ನು ಕೇಳಿದರೆ, ವೈಯಕ್ತಿಕ ಆದಾಯದ ಪ್ರಶ್ನೆಗಳಿಗೆ ಉತ್ತರಿಸಕೂಡದು' ಎಂದು ಹೇಳಿದೆ. 'ಉದ್ಯೋಗಗಳು ಇತರ ವೇತನ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಬಹುದು' ಎಂದು ಬಿಬಿಸಿ ಮೇಲಾಧಿಕಾರಿಗಳು ಹೇಳಿದ್ದಾರೆ. 'ಅಧಿಕಾರಿಗಳೊಂದಿಗೆ ಸಹಕರಿಸಲು ಮತ್ತು ಪ್ರಶ್ನೆಗಳಿಗೆ ಸಮಗ್ರವಾಗಿ ಉತ್ತರಿಸಲು' ತನ್ನ ಸಿಬ್ಬಂದಿಗೆ ಸಲಹೆ ನೀಡಿದ್ದಾರೆ.

ಸಿಬ್ಬಂದಿ ಕಂಪ್ಯೂಟರ್‌ಗಳಲ್ಲಿ ಶೋಧ
ತೆರಿಗೆ ಅಧಿಕಾರಿಗಳು ಬಿಬಿಸಿಯ ಹಿರಿಯ ನೌಕರರ ಕಾರ್ಯ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ. 'ತೆರಿಗೆ', 'ಬಿಲ್ಲುಗಳು' ಮತ್ತು 'ಕಪ್ಪು ಹಣ' ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಸಿಬ್ಬಂದಿ ಕಂಪ್ಯೂಟರ್‌ಗಳನ್ನು ಹುಡುಕಿದರು ಎಂದು ಮೂಲಗಳು ತಿಳಿಸಿವೆ. ಕೆಲವು ಹಿರಿಯ ಉದ್ಯೋಗಿಗಳ ಮೊಬೈಲ್ ಫೋನ್‌ಗಳನ್ನು ಕ್ಲೋನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಬಿಸಿಗೆ ಈ ಹಿಂದೆಯೇ ನೋಟಿಸ್
ಅಕ್ರಮ ತೆರಿಗೆ ಪ್ರಯೋಜನಗಳು, ತೆರಿಗೆ ವಂಚನೆ, ಲಾಭಗಳ ಲೆಕ್ಕಾಚಾರ ಮತ್ತು ಬಿಬಿಸಿಯ ನಿಯಮಗಳ ಅನುಸರಣೆಯ ಆರೋಪಗಳ ಕುರಿತು ತೆರಿಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬಿಬಿಸಿಗೆ ಈ ಹಿಂದೆ ನೋಟಿಸ್‌ಗಳನ್ನು ನೀಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಈ ಐಟಿ ಸಮೀಕ್ಷೆಯು 'ಹಠಾತ್ ನಿರ್ಧಾರವಲ್ಲ' ಎಂದು ಹೇಳಿದೆ. ತೆರಿಗೆ ಅಧಿಕಾರಿಗಳು ಎತ್ತಿರುವ ವಿವಿಧ ಪ್ರಶ್ನೆಗಳಿಗೆ ಬಿಬಿಸಿ 'ಪ್ರತಿಕ್ರಿಯಿಸಲು ವಿಫಲವಾದ' ನಂತರ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದೆ.

ಬಿಬಿಸಿ ಘಟನೆ ಬಗ್ಗೆ ಯುಎಸ್ ಹೇಳಿದ್ದೇನು?
ನ್ಯೂಸ್ ಬ್ರಾಡ್‌ಕಾಸ್ಟರ್‌ಗಳು ಮತ್ತು ಡಿಜಿಟಲ್ ಅಸೋಸಿಯೇಷನ್ (NBDA) ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಇಂತಹ ತೆರಿಗೆ ಸಮೀಕ್ಷೆಗಳು ಮಾಧ್ಯಮಗಳ ಮೇಲಿನ ನಿರಂತರ ಕಿರುಕುಳಕ್ಕೆ ಕಾರಣವಾಗುತ್ತವೆ. ಇದು 'ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಖ್ಯಾತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ' ಎಂದು ಟೀಕಿಸಿವೆ. ಸಮೀಕ್ಷೆಯ ಬಗ್ಗೆ ನಾವು ಗಮನಿಸುತ್ತಿದ್ದೇವೆ. ಆದರೆ, ಯಾವುದೇ ತೀರ್ಪು ನೀಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಯುಎಸ್ ಹೇಳಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಬೆಂಬಲಿಸುತ್ತೇವೆ ಎಂದ ಯುಎಸ್
ಈ ಕುರಿತು ಮಾತನಾಡಿರುವ ಯುನೈಟೈಡ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್, 'ನಾವು ಪ್ರಪಂಚದಾದ್ಯಂತ ಮುಕ್ತ ಪತ್ರಿಕಾ ಪ್ರಾಮುಖ್ಯತೆಯನ್ನು ಬೆಂಬಲಿಸುತ್ತೇವೆ. ನಾವು ಅಭಿವ್ಯಕ್ತಿ ಸ್ವಾತಂತ್ರ್ಯ, ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದನ್ನು ಮುಂದುವರಿಸುತ್ತೇವೆ. ಇದು ವಿಶ್ವದಾದ್ಯಂತ ಪ್ರಜಾಪ್ರಭುತ್ವಗಳನ್ನು ಬಲಪಡಿಸಲು ಕೊಡುಗೆ ನೀಡುತ್ತದೆ. ಇದು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ' ಎಂದು ಹೇಳಿದ್ದಾರೆ.

ಬಿಬಿಸಿ ಸಾಕ್ಷ್ಯಚಿತ್ರವನ್ನು ಹಗೆತನದ ಪ್ರಚಾರ
ಮೋದಿ ಸರ್ಕಾರವು ಬಿಬಿಸಿ ಸಾಕ್ಷ್ಯಚಿತ್ರವನ್ನು ಹಗೆತನದ ಪ್ರಚಾರ ಮತ್ತು ಭಾರತ ವಿರೋಧಿ ಕಾರ್ಯವೆಂದು ಟೀಕಿಸಿದೆ. ಕೇಂದ್ರವು ಕಳೆದ ತಿಂಗಳಲ್ಲಿ ಐಟಿ ನಿಯಮಗಳ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಯೂಟ್ಯೂಬ್ ವೀಡಿಯೊಗಳು ಮತ್ತು ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ಹಂಚಿಕೊಳ್ಳುವ ಟ್ವಿಟರ್ ಪೋಸ್ಟ್‌ಗಳನ್ನು ನಿರ್ಬಂಧಿಸಿದೆ. ಸೆನ್ಸಾರ್ಶಿಪ್ ಅನ್ನು ಪ್ರತಿಭಟಿಸಿ, ವಿರೋಧ ಪಕ್ಷದ ನಾಯಕರು ಮತ್ತು ವಿದ್ಯಾರ್ಥಿಗಳು ಸಾಕ್ಷ್ಯಚಿತ್ರದ ಸಾರ್ವಜನಿಕ ಪ್ರದರ್ಶನಗಳನ್ನು ಆಯೋಜಿಸಿದ್ದರು. ಇದು ಅನೇಕ ಕ್ಯಾಂಪಸ್ ಘರ್ಷಣೆಗಳಿಗೆ ಕಾರಣವಾಯಿತು. ಆಡಳಿತಾರೂಢ ಬಿಜೆಪಿಯು ಬಿಬಿಸಿಯ ಸಾಕ್ಷ್ಯಚಿತ್ರವನ್ನು 'ವಿಷಪೂರಿತ, ಆಳವಿಲ್ಲದ ಮತ್ತು ಅಜೆಂಡಾ ರೂಪಿಸುವ ವರದಿ' ಎಂದು ಕರೆದಿದೆ. ಆದಾಯ ತೆರಿಗೆ ಇಲಾಖೆಯು ತನ್ನ ಕೆಲಸವನ್ನು ಮಾಡಲು ಅನುಮತಿಸಬೇಕು ಎಂದು ಹೇಳಿದೆ. 'ಅವರು ಕಾನೂನುಬಾಹಿರವಾಗಿ ಏನನ್ನೂ ಮಾಡದಿದ್ದರೆ, ಚಿಂತೆ ಏಕೆ ಮಾಡುತ್ತಿದ್ದಾರೆ?' ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.












Click it and Unblock the Notifications