Iphone: ಟಾಟಾದಿಂದ ಅತೀ ದೊಡ್ಡ ಐಫೋನ್ ತಯಾರಿಕಾ ಘಟಕ, ಯಾವ ರಾಜ್ಯದಲ್ಲಿ ಸ್ಥಾಪನೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್ 10: ಆಪಲ್ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಸಮೂಹ ಸಂಸ್ಥೆ (Tata company) ಭಾರತದ ಅತೀ ದೊಡ್ಡ ಘಟಕವನ್ನು ಸ್ಥಾಪಿಸಲಿದೆ ಎಂದು ಸುದ್ದಿ ಸಂಸ್ಥೆ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಆಪಲ್ ಸಂಸ್ಥೆ ಈಗಾಗಲೇ ಟಾಟಾ ಜತೆ ಪಾಲುದಾರಿಕೆ ಹೊಂದಿದೆ. ಅದನ್ನು ಇನ್ನಷ್ಟು ಬಲಪಡಿಸಲು ಐಫೋನ್ ಪೂರೈಕೆ ಸರಪಳಿಯನ್ನು ಸ್ಥಳೀಕರಿಸಲು ಪ್ರಯತ್ನಿಸುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ವಿಸ್ಟ್ರಾನ್‌ನಿಂದ ಸ್ವಾಧೀನಪಡಿಸಿಕೊಂಡಿರುವ ಐಫೋನ್ ಕಾರ್ಖಾನೆಯನ್ನು ಆಪಲ್ ಹೊಂದಿದೆ.

ಇದೀಗ ಟಾಟಾ ಸಂಸ್ಥೆ ತಮಿಳುನಾಡಿನಲ್ಲಿ ಭಾರತದ ಅತೀ ದೊಡ್ಡ ಐಫೋನ್ ಅಸೆಂಬ್ಲಿ ಘಟಕವನ್ನು ನಿರ್ಮಿಸಲು ಸಿದ್ಧವಾಗಿದೆ. ತಮಿಳುನಾಡಿನ ಹೊಸೂರಿನಲ್ಲಿ ಸ್ಥಾವರ ಸ್ಥಾಪನೆ ಆಗಲಿದೆ ಎಂದು ವರದಿ ಆಗಿದೆ. ಇದರಿಂದ ಎರಡೇ ವರ್ಷಗಳಲ್ಲಿ ಸುಮಾರು 50,000 ಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ಸಿಗಲಿದೆ. ಯೋಜನೆ ಸಂಬಂಧ ಮುಂದಿನ ಒಂದೂವರೆ ವರ್ಷ (12-18 ತಿಂಗಳ) ಒಳಗೆ ಸೈಟ್ ಕಾರ್ಯಾರಂಭ ಮಾಡಬೇಕೆಂಬುದು ಗಡುವು ಹಾಕಿಕೊಳ್ಳಲಾಗಿದೆ.
2024 ರ ಅಂತ್ಯಕ್ಕೆ ಕಾರ್ಯಾರಂಭ ಸಾಧ್ಯತೆ
ಸದ್ಯ ಉದ್ದೇಶಿತ ಈ ತಮಿಳುನಾಡು ಐಫೋನ್ ಅಸೆಂಬ್ಲಿ ತಯಾರಿಕೆ ಘಟಕ ಮುಂದಿನ 2024 ರ ಅಂತ್ಯದ ವೇಳೆಗೆ ಸಕ್ರಿಯವಾಗುವ ಸಾಧ್ಯತೆ ಇದೆ. ಇದು ಐಫೋನ್ ಸ್ಥಳೀಯವಾಗಿ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹಿಸುತ್ತದೆ. ಈ ಉತ್ಪಾದನೆಗಳ ಏರಿಕೆಯಿಂದ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆಯನ್ನು ಸಹ ನಿರೀಕ್ಷೆ ಮಾಡಬಹುದಾಗಿದೆ. ಸದ್ಯ ಆಪಲ್ ಐಫೋನ್‌ಗೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ಸ್ ಪ್ರಬಲ ಸ್ಪರ್ಧೆ ಒಡ್ಡುತ್ತಿವೆ.
ವಾಹನ, ಇನ್ನಿತರ ಬಿಡಿಭಾಗಗಳು ನಿರ್ಮಾಣ, ಏರ್‌ಲೈನ್ಸ್, ಸಾಫ್ಟವೇರ್ ನಂತರ ದೈತ್ಯ ಕಂಪನಿಗಳನ್ನು ಹೊಂದಿರುವ ಟಾಟಾ ಸಂಸ್ಥೆಯ ಟಾಟಾ ಎಲೆಕ್ಟ್ರಾನಿಕ್ಸ್ ಈಗಾಗಲೇ ಹೊಸೂರಿನಲ್ಲಿ 5,000 ಉದ್ಯೋಗಿಗಳ ಪ್ರಮುಖ ಉತ್ಪಾದನಾ ಘಟಕವನ್ನು ಹೊಂದಿದೆ. ಈ ಸ್ಥಾವರವು ಐಫೋನ್‌ಗಳ ಪೂರಕ ಉತ್ಪನ್ನಗಳನ್ನು ತಯಾರಿಸುತ್ತಿದೆ. ದೇಶದಲ್ಲಿನ ಐಫೋನ್ ಸಂಭಾವ್ಯ ಬೆಳವಣಿಗೆ, ಬೇಡಿಕೆ ಆಧಾರದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ತನ್ನ ತಮಿಳುನಾಡು ಸ್ಥಾವರಕ್ಕಾಗಿ ಈಗಾಗಲೇ ನೇಮಕಾತಿ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಟಾಟಾದ ಕರ್ನಾಟಕ ಐಫೋನ್ ಉತ್ಪಾದನಾ ಘಟಕ
ಸದ್ಯ ದಕ್ಷಿಣ ಏಷ್ಯಾದಲ್ಲಿ ಆಪಲ್ ಐಫೋನ್ ಉತ್ತೇಜಿಸಲು ಮುಂದಾಗಿರುವ ಟಾಟಾ ಸಂಸ್ಥೆ ದಕ್ಷಿಣ ಭಾರತದಲ್ಲಿ ಐಫೋನ್ ಉತ್ಪಾದನೆ ಮುನ್ನಡೆಸುವ ನಿಟ್ಟಿನಲ್ಲಿ ಅಕ್ಟೋಬರ್‌ನಲ್ಲಿ ವಿಸ್ಟ್ರಾನ್‌ನಿಂದ ಕರ್ನಾಟಕದಲ್ಲಿನ ಆಪಲ್ ಉತ್ಪಾದನಾ ಘಟಕ ಸ್ವಾಧೀನಕ್ಕೆ ಪಡೆಯಿತು. ಐಫೋನ್ ಅಸೆಂಬ್ಲಿ ಘಟಕದ ಇದನ್ನು ಟಾಟಾ 123 ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿತು.
ಈ ಘಟಕವು ಒಟ್ಟು 10,000 ಉದ್ಯೋಗಿಗಳನ್ನು ಹೊಂದಿದೆ. USD 1.4 ಶತಕೋಟಿ ಮೌಲ್ಯದ ಐಫೋನ್‌ಗಳನ್ನು ಪೂರೈಕೆಯ ಗುರಿ ಹೊಂದಿದೆ. ಇದು ಸಾಧ್ಯವಾಗುವಂತೆ ಸಂಸ್ಥೆ ಉದ್ಯೋಗಿಗಳಿಗೆ ಪ್ರೋತ್ಸಾಹಿಸುತ್ತಿದೆ. ಟಾಟಾ ಇಲೆಕ್ಟ್ರಾನಿಕ್ಸ್ ಯಾವಾಗಲೂ ಐಫೋನ್ ಉತ್ಪಾದನೆಯಲ್ಲಿ ಆಳವಾದ ಹೂಡಿಕೆಯ ಆಸಕ್ತಿಯನ್ನು ಹೊಂದಿದೆ ಎಂಬುದು ಹೊಸ ಘಟಕೆ ಆರಂಭಕ್ಕೆ ಮುಂದಾಗಿರುವ ಅದರ ನಿಲುವಿನಿಂದಲೇ ಅರ್ಥವಾಗುತ್ತದೆ.












Click it and Unblock the Notifications