ಬಾವಲಿಗಳ ರಕ್ಷಣೆಗಾಗಿ ದೀಪಾವಳಿಯಲ್ಲಿ ಪಟಾಕಿ ಸಿಡಿಸದ ತಮಿಳುನಾಡಿನ ಹಳ್ಳಿಗಳು!

ದೀಪಾವಳಿ ಎಂದರೆ ಬೆಳಕಿನ ಹಬ್ಬ. ಮನೆಮನೆಗಳಲ್ಲಿ ದೀಪ ಬೆಳಗಿಸಿ, ಸಿಹಿತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸುವುದು ಸಾಮಾನ್ಯ. ಆದರೆ ತಮಿಳುನಾಡಿನ ಕೆಲವು ಹಳ್ಳಿಗಳಲ್ಲಿ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಇಲ್ಲಿ ಜನರು ಹಬ್ಬದ ಸಂಭ್ರಮಕ್ಕಾಗಿ ಪಟಾಕಿ ಸಿಡಿಸುವುದಿಲ್ಲ. ಇದಕ್ಕೆ ಕಾರಣ ತಮ್ಮ ಊರಿನ ಮರಗಳಲ್ಲಿ ವಾಸಿಸುವ ನೂರಾರು ಬಾವಲಿಗಳು! ಶಬ್ದ ಮತ್ತು ಬೆಳಕಿನಿಂದ ಅವುಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಹಳ್ಳಿಗಳ ಜನರು ಹಲವು ತಲೆಮಾರುಗಳಿಂದ ಪಟಾಕಿ ರಹಿತ ದೀಪಾವಳಿ ಆಚರಿಸುತ್ತಿದ್ದಾರೆ. ವಿಶೇಷವೆಂದರೆ, ಬಾವಲಿಗಳನ್ನು ಓಡಿಸುವ ಬದಲು ಅವುಗಳನ್ನು ತಮ್ಮ ಊರಿನ ನಿವಾಸಿಗಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

Tamilnadu Village Diwali Cracker-Free festival to Protect Bats for Generations How they connected with flying animal

ಬಾವಲಿಗಳಿಂದ ಪರಿಸರಕ್ಕೆ ಏನು ಪ್ರಯೋಜನ?

ಬಾವಲಿಗಳು ಕೇವಲ ಮರಗಳಲ್ಲಿ ನೇತಾಡುವ ಪ್ರಾಣಿಗಳಲ್ಲ. ಪರಿಸರದ ಸಮತೋಲನ ಕಾಪಾಡುವಲ್ಲಿ ಅವುಗಳ ಪಾತ್ರ ಬಹಳ ಮುಖ್ಯ. ಹಣ್ಣಿನ ರಸವನ್ನು ಹೀರುವ ಬಾವಲಿಗಳು ಒಂದು ಮರದಿಂದ ಮತ್ತೊಂದು ಪ್ರದೇಶಕ್ಕೆ ಹಣ್ಣುಗಳ ಬೀಜಗಳನ್ನು ಹರಡುತ್ತವೆ. ಇದರಿಂದ ಹೊಸ ಗಿಡಗಳು ಬೆಳೆಯಲು ಸಹಾಯವಾಗುತ್ತದೆ. ಕೆಲವು ಬಾವಲಿಗಳು ಹೂವಿನ ಮಕರಂದವನ್ನು ಹೀರುವ ಮೂಲಕ ಪರಾಗಸ್ಪರ್ಶಕ್ಕೂ ನೆರವಾಗುತ್ತವೆ. ಹೀಗೆ ಅರಣ್ಯ ಮತ್ತು ಸಸ್ಯಸಂಪತ್ತಿನ ಬೆಳವಣಿಗೆಯಲ್ಲಿ ಅವು ಮಹತ್ವದ ಪಾತ್ರ ವಹಿಸುತ್ತವೆ.

ಹಗಲಿನಲ್ಲಿ ದೊಡ್ಡ ಮರಗಳ ಮೇಲೆ ಗುಂಪಾಗಿ ವಿಶ್ರಾಂತಿ ಪಡೆಯುವ ಬಾವಲಿಗಳು ರಾತ್ರಿ ಆಹಾರ ಹುಡುಕಿಕೊಂಡು ಹೊರಡುತ್ತವೆ. ಆದರೆ ದೀಪಾವಳಿಯ (diwali) ಪಟಾಕಿಗಳ ಭಾರೀ ಶಬ್ದ ಮತ್ತು ಬೆಳಕಿನಿಂದ ಅವು ಭಯಗೊಳ್ಳಬಹುದು. ನಿರಂತರ ಕಿರಿಕಿರಿಯಿಂದ ತಮ್ಮ ವಾಸಸ್ಥಳವನ್ನೇ ಬಿಟ್ಟು ಬೇರೆಡೆಗೆ ಹೋಗುವ ಸಾಧ್ಯತೆಯೂ ಇದೆ. ಇದನ್ನು ಅರಿತಿರುವ ಕೆಲವು ಹಳ್ಳಿಗಳ ಜನರು ದೀಪಾವಳಿಯಂದು ಶಬ್ದ ಮಾಲಿನ್ಯ ಉಂಟುಮಾಡದಿರಲು ನಿರ್ಧರಿಸಿದ್ದಾರೆ.

ಬಾವಲಿಗಳಿಗೆ ನೀರು, ಆಹಾರ ನೀಡುವ Tamilnadu Village ಮಂದಿ

ವಿಲ್ಲುಪುರಂ ಜಿಲ್ಲೆಯ ವಾನೂರು ಸಮೀಪದ ಕಳಪ್ಪೆರುಂಬಾಕ್ಕಂ ಎಂಬ ಹಳ್ಳಿಯಲ್ಲಿ ಈ ಸಂಪ್ರದಾಯಕ್ಕೆ ಒಂದು ಹುಣಸೆಮರವೇ ಕಾರಣ. ಆ ಮರದಲ್ಲಿ ಬಾವಲಿಗಳು ಹಣ್ಣು ತಿನ್ನಲು ಬರುತ್ತಿದ್ದವು. ಅವುಗಳನ್ನು ಓಡಿಸುವ ಬದಲು ಗ್ರಾಮಸ್ಥರು ಆಹಾರ ನೀಡಲು ಆರಂಭಿಸಿದರು. ಮರದ ಕೊಂಬೆಗಳ ನಡುವೆ ದೊಡ್ಡ ಪಾತ್ರೆಯೊಂದನ್ನು ಇಟ್ಟು ಅದರಲ್ಲಿ ನೀರು ತುಂಬಿಡುತ್ತಿದ್ದರು. ಮಕ್ಕಳು ಕೂಡ ಬಾವಲಿಗಳ ಚಟುವಟಿಕೆಗಳನ್ನು ಗಮನಿಸುತ್ತಾ ಬೆಳೆದರು. ಮುಂದೆ ಅವರೂ ಈ ಸಂಪ್ರದಾಯವನ್ನು ಮುಂದುವರಿಸಿದರು.

ಬಾವಲಿಗಳ ರಕ್ಷಣೆಗಾಗಿ ಗ್ರಾಮ ಪಂಚಾಯಿತಿಯೇ ಪಟಾಕಿ (crackers) ಸಿಡಿಸುವುದನ್ನು ನಿಷೇಧಿಸಿತು. ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಬಾವಲಿಗಳ ಸಂಖ್ಯೆ ಬೇಟೆ ಮತ್ತು ಮಾನವ ಚಟುವಟಿಕೆಗಳಿಂದ ಕಡಿಮೆಯಾಯಿತು. ಹಳೆಯ ಆಲದಮರದ ಕೊಂಬೆಗಳು ಮುರಿದ ಬಳಿಕ ಅವು ಮತ್ತೊಂದು ಮರಕ್ಕೆ ಸ್ಥಳಾಂತರಗೊಂಡವು. ಆದರೂ ಗ್ರಾಮಸ್ಥರ ಕಾಳಜಿ ಮಾತ್ರ ಕಡಿಮೆಯಾಗಿಲ್ಲ.

ನೂರು ವರ್ಷಗಳಿಂದ ಪಟಾಕಿ ರಹಿತ ದೀಪಾವಳಿ

ಮಯಿಲಾಡುತುರೈ ಜಿಲ್ಲೆಯ ಕೊಳ್ಳಿಡಂ ಸಮೀಪದ ಪೆರುಂಬೂರು ಗ್ರಾಮದಲ್ಲಿರುವ ಆಲದಮರವನ್ನು 'ವಾವ್ವಾಲ್ ತೋಪು' ಎಂದು ಕರೆಯಲಾಗುತ್ತದೆ. ತಮಿಳಿನಲ್ಲಿ ವಾವ್ವಾಲ್ ಎಂದರೆ ಬಾವಲಿ ಎಂದರ್ಥ. ಈ ಮರದಲ್ಲಿ ನೂರಾರು ಬಾವಲಿಗಳು ವಾಸಿಸುತ್ತವೆ. ಸಮೀಪದಲ್ಲಿರುವ ಮುನೀಶ್ವರನ್ ದೇವರ ಸನ್ನಿಧಿಯಿಂದಾಗಿ ಈ ಪ್ರದೇಶವನ್ನು ಗ್ರಾಮಸ್ಥರು ಪವಿತ್ರವೆಂದು ಪರಿಗಣಿಸುತ್ತಾರೆ. ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಇಲ್ಲಿ ದೀಪಾವಳಿಯಂದು ಪಟಾಕಿ ಸಿಡಿಸುವುದಿಲ್ಲ. ಬದಲಿಗೆ ಶ್ರೀ ಆಳಾಡಿಯಮ್ಮನ್ ದೇವಸ್ಥಾನದಲ್ಲಿ ಸೇರಿ ಹಬ್ಬವನ್ನು ಆಚರಿಸುತ್ತಾರೆ.

ತಂದೆಯಿಂದ ಮಗನಿಗೆ ಬಂದ ಪರಿಸರ ಪ್ರೀತಿಯ ಪಾಠ

ತಿರುಚ್ಚಿ ಜಿಲ್ಲೆಯ ತೊಪ್ಪುಪಟ್ಟಿ ಮತ್ತು ಸಾಮ್ಪಟ್ಟಿ ಗ್ರಾಮಗಳಲ್ಲಿ ಮುನಿಯಪ್ಪ ಸ್ವಾಮಿ ದೇವರ ಪ್ರತಿಮೆಯ ಸಮೀಪವಿರುವ ದೊಡ್ಡ ಆಲದಮರದಲ್ಲಿ ನೂರಾರು ಹಣ್ಣಿನ ಬಾವಲಿಗಳು ವಾಸಿಸುತ್ತವೆ. ಅವು ಗ್ರಾಮಕ್ಕೆ ಅದೃಷ್ಟ ತರುತ್ತವೆ ಮತ್ತು ಊರನ್ನು ರಕ್ಷಿಸುತ್ತವೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಹಾಗಾಗಿ ಅವುಗಳಿಗೆ ತೊಂದರೆಯಾಗದಂತೆ ಪಟಾಕಿ ಸಿಡಿಸುವುದನ್ನು ತಪ್ಪಿಸುತ್ತಾರೆ.

ಕಲಪಟ್ಟಿ ಗ್ರಾಮದಲ್ಲಿಯೂ ಮೂರು ತಲೆಮಾರುಗಳಿಂದ ಈ ಸಂಪ್ರದಾಯ ಮುಂದುವರಿದಿದೆ. ಗ್ರಾಮಸ್ಥ ಜಿ. ಸಂಪತ್ ಅವರಿಗೆ 12 ವರ್ಷ ವಯಸ್ಸಾಗಿದ್ದಾಗ ಅವರ ತಂದೆ ಮರದಲ್ಲಿ ಬಾವಲಿಗಳಿವೆ ಎಂಬ ಕಾರಣಕ್ಕೆ ಪಟಾಕಿ ಸಿಡಿಸದಂತೆ ತಡೆದಿದ್ದರಂತೆ. ಅಂದಿನಿಂದ ಕುಟುಂಬದವರು ಮತ್ತು ಗ್ರಾಮದ ಜನರು ಈ ನಿಯಮವನ್ನು ಪಾಲಿಸುತ್ತಿದ್ದಾರೆ. ಹೊರಗಿನವರು ಬಂದು ಬಾವಲಿಗಳನ್ನು ಹಿಡಿಯಲು ಅಥವಾ ಬೇಟೆಯಾಡಲು ಕೂಡ ಅವಕಾಶ ನೀಡುವುದಿಲ್ಲ.

ಶಾಲಾ ಮಕ್ಕಳಿಗೂ ಬಾವಲಿಗಳ ರಕ್ಷಣೆಯ ಪಾಠ

ಕೊಯಮತ್ತೂರು ಸಮೀಪದ ಕಿಟ್ಟಂಪಾಳಯಂ ಗ್ರಾಮದಲ್ಲಿ ಬಾವಲಿ ಸಂರಕ್ಷಣೆಯ ಜಾಗೃತಿ ಶಾಲೆಯನ್ನೂ ತಲುಪಿದೆ. 2012ರ ನವೆಂಬರ್‌ನಲ್ಲಿ ಸರ್ಕಾರಿ ಮಧ್ಯಮ ಶಾಲೆಯಲ್ಲಿ ಬಾವಲಿ ಮತ್ತು ಪಕ್ಷಿಗಳ ಸಂರಕ್ಷಣೆಯ ಕುರಿತು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 2,000ದಷ್ಟಿದ್ದ ಇಂಡಿಯನ್‌ ಫ್ಲೈಯಿಂಗ್‌ ಫಾಕ್ಸ್‌ ಬಾವಲಿ ಸಮೂಹವನ್ನು ರಕ್ಷಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 350 ಕುಟುಂಬಗಳು ದೀಪಾವಳಿಯಂದು ಪಟಾಕಿ ಸಿಡಿಸದಿರಲು ಒಪ್ಪಿಕೊಂಡವು. ವಿದ್ಯಾರ್ಥಿಗಳು ಗ್ರಾಮಸ್ಥರು ಮತ್ತು ಪರಿಸರ ಪ್ರೇಮಿಗಳೊಂದಿಗೆ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಬಾವಲಿಗಳ ಮಹತ್ವವನ್ನು ಸಾರಿದರು.

ಪ್ರವಾಸಿಗರಿಂದಲೂ ತೊಂದರೆಯಾಗದಂತೆ ಎಚ್ಚರಿಕೆ

ಬಾವಲಿಗಳನ್ನು ಪಟಾಕಿಗಳಿಂದ ರಕ್ಷಿಸುವುದಷ್ಟೇ ಅಲ್ಲ, ಅವುಗಳ ವಾಸಸ್ಥಳಕ್ಕೆ ಬರುವ ಹೊರಗಿನವರಿಂದಲೂ ತೊಂದರೆಯಾಗದಂತೆ ಗ್ರಾಮಸ್ಥರು ಎಚ್ಚರಿಕೆ ವಹಿಸುತ್ತಿದ್ದಾರೆ. ಬಾವಲಿಗಳನ್ನು ನೋಡಲು ಬರುವ ಕುತೂಹಲಿಗಳು ಜೋರಾಗಿ ಮಾತನಾಡುವುದು, ಮರಗಳ ಬಳಿ ಗದ್ದಲ ಮಾಡುವುದು ಅವುಗಳ ವಿಶ್ರಾಂತಿಗೆ ಅಡ್ಡಿಯಾಗಬಹುದು. ಆದ್ದರಿಂದ ಪ್ರವಾಸಿಗರಿಗೆ ಅವಕಾಶ ನೀಡುವಾಗಲೂ ಅವುಗಳ ನೆಮ್ಮದಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.

ದೀಪಾವಳಿಯನ್ನು ಆಚರಿಸಲು ಪಟಾಕಿಗಳೇ ಬೇಕೆಂದೇನಿಲ್ಲ ಎಂಬುದನ್ನು ಈ ಹಳ್ಳಿಗಳು ಜಗತ್ತಿಗೆ ತೋರಿಸಿಕೊಟ್ಟಿವೆ. ತಮ್ಮೊಂದಿಗೆ ಮರಗಳಲ್ಲಿ ವಾಸಿಸುವ ಜೀವಿಗಳನ್ನೂ ಕುಟುಂಬದ ಸದಸ್ಯರಂತೆ ಕಾಣುವ ಇವರ ಮನೋಭಾವ ನಿಜಕ್ಕೂ ಮಾದರಿ. ಕೆಲವೊಮ್ಮೆ ಪ್ರಕೃತಿಯನ್ನು ಉಳಿಸಲು ದೊಡ್ಡ ಯೋಜನೆಗಳಿಗಿಂತ ಸಣ್ಣ ಬದಲಾವಣೆಗಳೇ ಸಾಕು. ಹಬ್ಬದ ದಿನ ಒಂದಷ್ಟು ಶಬ್ದ ಕಡಿಮೆ ಮಾಡುವ ನಿರ್ಧಾರವೂ ನೂರಾರು ಜೀವಿಗಳ ಬದುಕಿಗೆ ಆಸರೆಯಾಗಬಲ್ಲದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+