ತಮಿಳುನಾಡು ಕಳ್ಳಭಟ್ಟಿ ದುರಂತ: ಸಿಎಂ ಸ್ಟಾಲಿನ್, ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿದ ಪಳನಿಸ್ವಾಮಿ
ಚೆನ್ನೈ, ಮೇ. 15: ತಮಿಳುನಾಡಿನ ವಿಲುಪುರಂನಲ್ಲಿ ಒಂಬತ್ತು ಮಂದಿ ಮತ್ತು ಚೆಂಗಲ್ಪಟ್ಟುದಲ್ಲಿ ಐವರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಇದಕ್ಕೆ ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಸೋಮವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ತಿರುಚ್ಚಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ನಕಲಿ ಮದ್ಯ ಸೇವನೆಯಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರು ಅನುಭವಿಸುತ್ತಿರುವ ನೋವು, ಸಂಕಟ ಆಘಾತಕಾರಿ ಸಂಗತಿಯಾಗಿದೆ. ನಕಲಿ ಮದ್ಯ ಸೇವಿಸಿದ ಹಲವಾರು ಮಂದಿ ಆಸ್ಪತ್ರೆಗಳಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಅವರ ಸಂಬಂಧಿಕರು ಆಘಾತ ಮತ್ತು ಹತಾಶೆಯಲ್ಲಿದ್ದಾರೆ" ಎಂದಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹದಗೆಟ್ಟಿದೆ ಎಂದು ಎಐಎಡಿಎಂಕೆ ನಾಯಕ ಆರೋಪಿಸಿದ್ದಾರೆ. ಸರ್ಕಾರವನ್ನು ನಡೆಸುವಲ್ಲಿ ಎಂಕೆ ಸ್ಟಾಲಿನ್ ಅವರ ಅಸಮರ್ಥತೆಯಿಂದಾಗಿ ಜನರು ಕಾನೂನುಬಾಹಿರ ಕೃತ್ಯಗಳ ಶಿಕ್ಷೆ ಅನುಭವಿಸಬೇಕಾಯಿತು ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮ ಮದ್ಯದ ತಯಾರಿಕೆಗೆ ಸಾಕ್ಷಿಯಾಗಬೇಕಾಯಿತು ಎಂದು ಕಿಡಿಕಾರಿದ್ದಾರೆ.
ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಅಕ್ರಮ ಮದ್ಯ ತಯಾರಿಕೆಯ ವ್ಯಾಪಕವಾಗಿ ಹಬ್ಬುತ್ತಿರುವ ಬಗ್ಗೆ ಎತ್ತಿ ತೋರಿಸಿದ್ದೇನೆ. ಮರಕ್ಕನಂ ಮತ್ತು ಇತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಹಲವಾರು ಪತ್ರಿಕೆಗಳು ವರದಿ ಮಾಡಿದ್ದವು. ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ಈ ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಎಂದು ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ.

ಅಮೂಲ್ಯ ಜೀವಗಳ ಸಾವಿಗೆ ಸಿಎಂ ಸ್ಟಾಲಿನ್ ಕಾರಣ. ಈ ಸಾವುಗಳಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮೇ 2021 ರಲ್ಲಿ ಡಿಎಂಕೆ ಅಧಿಕಾರಕ್ಕೆ ಮರಳಿದ ನಂತರ ರಾಜ್ಯವು ಹಲವಾರು ಕೊಲೆಗಳು, ಮನೆಗಳ್ಳತನ ಮತ್ತು ಮಹಿಳೆಯರ ಮೇಲಿನ ಅಪರಾಧಗಳಿಗೆ ಸಾಕ್ಷಿಯಾಗಿದೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಘಟನೆ ಬಗ್ಗೆ ವಿಲುಪುರಂನಲ್ಲಿ ಒಂಬತ್ತು ಮಂದಿ ಮತ್ತು ಚೆಂಗಲ್ಪಟ್ಟುದಲ್ಲಿ ಐವರು ಸಾವನ್ನಪ್ಪಿದ್ದಾರೆ. ನಕಲಿ ಮದ್ಯ ತಯಾರಿಸಲು ಮೆಥನಾಲ್ ಬಳಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಹೇಳಿದ್ದಾರೆ. ದುರಂತಕ್ಕೆ ಸಂಬಂಧಿಸಿದಂತೆ ವಿಲ್ಲುಪುರಂ ಎಸ್ಪಿ ಅಮಾನತು ಮತ್ತು ಚೆಂಗಲ್ಪಟ್ಟು ಎಸ್ಪಿಯನ್ನು ವರ್ಗಾವಣೆ ಮಾಡಿ ಸಿಎಂ ಆದೇಶಿಸಿದ್ದಾರೆ.
ದುರಂತದಲ್ಲಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಮತ್ತು ಪ್ರಸ್ತುತ ಚಿಕಿತ್ಸೆಯಲ್ಲಿರುವವರಿಗೆ ತಲಾ 50,000 ರೂಪಾಯಿಗಳ ಪರಿಹಾರವನ್ನು ತಮಿಳುನಾಡು ಸರ್ಕಾರ ಘೋಷಿಸಿದೆ.












Click it and Unblock the Notifications