ಸರ್ಕಾರಿ ಶಾಲೆಯ ಚಿತ್ರಣವನ್ನೇ ಬದಲಿಸಿದ ಶಿಕ್ಷಕ: ರೈಲು ಬೋಗಿಯಾದ ತರಗತಿಗಳು, ಮೂರು ಪಟ್ಟು ಹೆಚ್ಚಾದ ದಾಖಲಾತಿ
ಕೊಯಮತ್ತೂರು ಜಿಲ್ಲೆಯ ಪೆಥನಾಯಕನೂರು ಸರ್ಕಾರಿ ಪ್ರೌಢಶಾಲೆ ಸ್ವಲ್ಪ ವರ್ಷಗಳ ಹಿಂದೆ ವಿದ್ಯಾರ್ಥಿಗಳಿಲ್ಲದೆ ಸೊರಗುತ್ತಿತ್ತು. ಮೂಲಸೌಕರ್ಯಗಳ ಕೊರತೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನ ಅಕ್ಕಪಕ್ಕದ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದರು. ಆದರೆ ಇಂದು ಆ ಶಾಲೆಯ ತರಗತಿಗಳು ವರ್ಣರಂಜಿತ ರೈಲಿನ ಬೋಗಿಗಳಂತೆ ಕಂಗೊಳಿಸುತ್ತಿವೆ. ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಾಗಿದ್ದು, ಶಾಲಾ ದಾಖಲಾತಿ ಮೂರು ಪಟ್ಟು ಏರಿಕೆಯಾಗಿದೆ.
ಒಂದು ಕಾಲದಲ್ಲಿ ಕಳೆಗುಂದಿದ್ದ ಶಾಲೆಯನ್ನ ಇಂದು ಮಾದರಿಯಾಗಿ ರೂಪಿಸಿದ ಕೀರ್ತಿ ತಮಿಳು ಶಿಕ್ಷಕ, ಈಗ ಮುಖ್ಯೋಪಾಧ್ಯಾಯರಾಗಿರುವ ಬಾಲಮುರುಗನ್ ಹಾಗೂ ಅವರ ಸಹೋದ್ಯೋಗಿಗಳಿಗೆ ಸಲ್ಲುತ್ತದೆ.

ಕೊಯಮತ್ತೂರು ಸರ್ಕಾರಿ ಶಾಲೆಯ ಚಿತ್ರಣ ಬದಲಿಸಿದ ಹಸಿರು ಕ್ರಾಂತಿ
2012ರಲ್ಲಿ ಈ ಶಾಲೆಯಲ್ಲಿ ಕೇವಲ 70 ವಿದ್ಯಾರ್ಥಿಗಳಿದ್ದರು. 2013ರಲ್ಲಿ ಬಾಲಮುರುಗನ್ ಅವರು ತಮಿಳು ಶಿಕ್ಷಕರಾಗಿ ಶಾಲೆಗೆ ಸೇರ್ಪಡೆಯಾದರು. ಶಾಲೆಯನ್ನ ಅಭಿವೃದ್ಧಿಪಡಿಸುವ ಅವರ ಕನಸು ಪರಿಸರದ ಬದಲಾವಣೆಯಿಂದಲೇ ಶುರುವಾಯಿತು. ಮೊದಲಿಗೆ ಶಾಲೆಯ ಆವರಣವನ್ನ ಹಸಿರಾಗಿಸಲು ನಿರ್ಧರಿಸಿದ ಅವರು, ಕೇವಲ ಒಂದು ವಾರದಲ್ಲಿ 110 ಸಸಿಗಳನ್ನ ನೆಟ್ಟರು.
ವಿದ್ಯಾರ್ಥಿಗಳ ನೆರವಿನೊಂದಿಗೆ ಬರೋಬ್ಬರಿ 45,000 ಬೀಜದ ಉಂಡೆಗಳನ್ನ ತಯಾರಿಸಿ ಪರಿಸರ ಸಂರಕ್ಷಣೆಯ ಪಾಠವನ್ನ ಪ್ರಾಯೋಗಿಕವಾಗಿ ಕಲಿಸಿದರು. ಇಂದು ಶಾಲೆಯ ಆವರಣದಲ್ಲಿ 960ಕ್ಕೂ ಹೆಚ್ಚು ಮರಗಳಿದ್ದು, ಮಕ್ಕಳಿಗೆ ನೆರಳು ನೀಡುತ್ತಿವೆ.
ಇದಲ್ಲದೆ, ಶಾಲೆಯನ್ನ ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಲಾಗಿದೆ. ಹುಟ್ಟುಹಬ್ಬದಂದು ಪ್ಲಾಸ್ಟಿಕ್ ಕವರ್‌ನಿಂದ ಸುತ್ತಿದ ಚಾಕಲೇಟ್ ಬದಲು, ಬೆಲ್ಲ ಅಥವಾ ಮನೆಯಲ್ಲಿ ಮಾಡಿದ ಸಿಹಿ ಹಂಚುವ ಮೂಲಕ ಪರಿಸರ ಪ್ರೇಮವನ್ನ ಮೈಗೂಡಿಸಿಕೊಳ್ಳಲಾಗಿದೆ.
6000 ಪುಸ್ತಕಗಳ ಗ್ರಂಥಾಲಯ
ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನ ಬೆಳೆಸಲು 2017-2019ರ ಅವಧಿಯಲ್ಲಿ ಶಾಲೆಯಲ್ಲಿ ಸುಸಜ್ಜಿತ ಗ್ರಂಥಾಲಯವನ್ನ ಅಭಿವೃದ್ಧಿಪಡಿಸಲಾಯಿತು. ಬಾಲಮುರುಗನ್ ಅವರು ಸ್ವತಃ 24,000 ರೂಪಾಯಿ ಖರ್ಚು ಮಾಡಿ, ದಾನಿಗಳ ಹಾಗೂ ಸರ್ಕಾರಿ ಇಲಾಖೆಗಳ ನೆರವಿನಿಂದ 6,000ಕ್ಕೂ ಹೆಚ್ಚು ಪುಸ್ತಕಗಳನ್ನ ಈ ಗ್ರಂಥಾಲಯದಲ್ಲಿ ಸಂಗ್ರಹಿಸಿದರು.
ಈ ಓದಿನ ಪ್ರಭಾವದಿಂದ ತಮಿಳರಸಿ ಎಂಬ 9ನೇ ತರಗತಿಯ ವಿದ್ಯಾರ್ಥಿನಿ ಬರೆದ ಪರಿಸರ ಸಂರಕ್ಷಣೆಯ ಲೇಖನ ತಮಿಳುನಾಡು ಸರ್ಕಾರದ 'ತೆನ್ಸಿಟ್ಟು' ಪತ್ರಿಕೆಯಲ್ಲಿ ಪ್ರಕಟವಾಗಿ, 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ತಲುಪಿತು. ಶಾಲೆಯ ಮಕ್ಕಳು ಕೇವಲ ಪುಸ್ತಕ ಓದುವುದಷ್ಟೇ ಅಲ್ಲದೆ, ಕವಿತೆ ಮತ್ತು ಕಥೆಗಳನ್ನ ಬರೆದು ಪ್ರಕಾಶಕರ ನೆರವಿನೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವುದು ವಿಶೇಷ.
ಶಾಲೆಯ ದಾಖಲಾತಿ ಹೆಚ್ಚಳ
ಕೋವಿಡ್ ಸಾಂಕ್ರಾಮಿಕದ ನಂತರ ಆನ್‌ಲೈನ್ ತರಗತಿ ಮುಗಿಸಿ ಮಕ್ಕಳು ಶಾಲೆಗೆ ಮರಳಿದಾಗ ಅವರಿಗೆ ದೊಡ್ಡ ಅಚ್ಚರಿಯೊಂದು ಕಾದಿತ್ತು. ಶಾಲೆಯ ಎಲ್ಲಾ ತರಗತಿಗಳನ್ನ ರೈಲಿನ ಬೋಗಿಗಳಂತೆ ವಿನ್ಯಾಸಗೊಳಿಸಲಾಗಿತ್ತು. ಸಂಗೀತ ಮತ್ತು ಸಂಭ್ರಮಾಚರಣೆಯೊಂದಿಗೆ ಮಕ್ಕಳನ್ನ ಸ್ವಾಗತಿಸಲಾಯಿತು. ಈ ಆಕರ್ಷಕ ಬದಲಾವಣೆಗೆ 50,000 ರೂಪಾಯಿ ವೆಚ್ಚವಾಗಿದ್ದು, ಅದರಲ್ಲಿ 35,000 ರೂಪಾಯಿಗಳನ್ನ ಬಾಲಮುರುಗನ್ ಅವರೇ ಭರಿಸಿದ್ದರು, ಉಳಿದ ಮೊತ್ತವನ್ನ ಪೋಷಕರು ನೀಡಿದ್ದರು.
A government school with 70 students now has 200+.
— The Better India (@thebetterindia) August 26, 2026
The reason? One teacher refused to let it stay ordinary.
When Tamil teacher Balamurugan joined Pethanayakanur Government School in Coimbatore, he didn’t just teach lessons from a textbook. He helped turn the school into a place… pic.twitter.com/Oy0cGmZf92
ಶಾಲೆಯಲ್ಲಿ ಕೇವಲ ಪಠ್ಯವಲ್ಲದೆ, ತಮಿಳಿನ ಜಾನಪದ ಕಲೆಗಳಾದ ಪಾರೈ ಇಸೈ, ಮೈಲಾಟ್ಟಂ, ಕರಗಾಟ್ಟಂ ಮುಂತಾದ ಕಲೆಗಳ ತರಬೇತಿಯನ್ನ ಸಂಜೆಯ ವೇಳೆ ನೀಡಲಾಗುತ್ತಿದೆ. ಉತ್ತಮ ಶಿಕ್ಷಣದ ಫಲವಾಗಿ, ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯೊಬ್ಬರು ದೇಶದ ಅತ್ಯಂತ ಕಠಿಣ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್‌ನಲ್ಲಿ ತೇರ್ಗಡೆಯಾಗಿದ್ದಾರೆ. 2015ರಿಂದ ಈ ಶಾಲೆ 10ನೇ ತರಗತಿಯಲ್ಲಿ 100% ಫಲಿತಾಂಶ ದಾಖಲಿಸುತ್ತಿದೆ.
2012ರಲ್ಲಿ ಕೇವಲ 70 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಇಂದು 210 ದಾಟಿದೆ. "ಮಕ್ಕಳು ಕೇವಲ ಅಂಕಗಳಿಸುವ ಯಂತ್ರಗಳಾಗದೆ, ಉತ್ತಮ ಚಿಂತಕರಾಗಿ, ಒಳ್ಳೆಯ ಮನುಷ್ಯರಾಗಿ ರೂಪುಗೊಳ್ಳಬೇಕು ಎನ್ನುವುದೇ ನಮ್ಮ ಉದ್ದೇಶ" ಎನ್ನುತ್ತಾರೆ ಬಾಲಮುರುಗನ್.


Click it and Unblock the Notifications
