ತಮಿಳುನಾಡಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಭೀಕರ ಸಂಘರ್ಷ!
ಚೆನ್ನೈ: ಪರಿಸ್ಥಿತಿ ಇವತ್ತು ಸರಿ ಹೋಗುತ್ತೆ, ನಾಳೆ ಸರಿಯಾಗುತ್ತೆ ಅಂತಾ ಕಾದಿದ್ದೇ ಬಂತು ಆದ್ರೆ ಏನೂ ಸರಿಯಾಗಿಲ್ಲ. ಇದು ತಮಿಳುನಾಡಲ್ಲಿ ಹೊತ್ತಿರುವ ರಾಜಕೀಯ ಕಿಚ್ಚಿನ ಕಥೆ. ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿರುವ ಕಿತ್ತಾಟ ದಿಢೀರ್ ಧಗಧಗಿಸುತ್ತಿದೆ. ಅದರಲ್ಲೂ ಇಂದು ರಾಜ್ಯಪಾಲ ಆರ್.ಎನ್.ರವಿ, ಜೈಲಿನಲ್ಲಿರುವ ಸಚಿವ ವಿ.ಸೆಂಥಿಲ್ ಬಾಲಾಜಿಯನ್ನ ಸಿಎಂ ಅನುಮತಿ ಪಡೆಯದೆ ನೇರವಾಗಿ ವಜಾ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಈ ತಿಕ್ಕಾಟವು ಶುರುವಾಗಿತ್ತು. ತಮಿಳುನಾಡು ರಾಜ್ಯಪಾಲರು ಹಾಗೂ ತಮಿಳುನಾಡು ಸರ್ಕಾರದ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಈ ಮಧ್ಯೆ ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು ಮತ್ತು ಮನಿ ಲಾಂಡರಿಂಗ್ ಸೇರಿದಂತೆ ಹಲವು ಆರೋಪದ ಅಡಿಯಲ್ಲಿ ಸಚಿವ ವಿ.ಸೆಂಥಿಲ್ ಬಾಲಾಜಿ ಬಂಧನವಾಗಿತ್ತು. ಈ ಘಟನೆ ಬಳಿಕ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ತಿಕ್ಕಾಟ ಬಲು ಜೋರಾಗಿ ನಡೆಯುತ್ತಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಚಿವ ಸೆಂಥಿಲ್ ಬಾಲಾಜಿರನ್ನ ವಜಾ ಮಾಡಿದ್ದಾರೆ ತಮಿಳುನಾಡು ರಾಜ್ಯಪಾಲರು. ಅಲ್ಲದೆ ರಾಜ್ಯಪಾಲರ ಕಚೇರಿಯಿಂದ ನೀಡಿರುವ ಅಧಿಕೃತ ಹೇಳಿಕೆ ಸಂಚಲನ ಸೃಷ್ಟಿಸಿದೆ.

ರಾಜಭವನ ಪತ್ರದಲ್ಲಿ ಹೇಳಿದ್ದೇನು?
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ (RN Ravi) ಇಂದು ದಿಢೀರ್ ಜೈಲಿನಲ್ಲಿರುವ ಸಚಿವ ಸೆಂಥಿಲ್ ಬಾಲಾಜಿ ಅವರನ್ನ ಸಂಪುಟದಿಂದ ವಜಾ ಮಾಡಿದ್ದಾರೆ. ಇದರ ಜೊತೆಗೆ ರಾಜಭವನದಿಂದ ಅಧಿಕೃತ ಹೇಳಿಕೆ ಬಿಡುಗಡೆ ಆಗಿದ್ದು 'ಬಾಲಾಜಿ ಅವರು ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು ಮತ್ತು ಮನಿ ಲಾಂಡರಿಂಗ್ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾ ಮಾಡಿದ್ದಾರೆ' ಎಂದು ತಿಳಿಸಲಾಗಿದೆ. ಇದು ಡಿಎಂಕೆ ಸರ್ಕಾರದ ಪಿತ್ತ ನೆತ್ತಿಗೇರಿಸಿದೆ. ಸಿಎಂ ಎಂ.ಕೆ.ಸ್ಟಾಲಿನ್ ಈ ಘಟನೆ ಬಳಿಕ ಕೆಂಡವಾಗಿದ್ದಾರೆ.
Tamil Nadu Governor RN Ravi dismisses jailed V Senthil Balaji from the Council of Ministers with immediate effect. pic.twitter.com/fhDJdxUZxE
— ANI (@ANI) June 29, 2023
ಸುಪ್ರೀಂಗೆ ತಮಿಳುನಾಡು ಸರ್ಕಾರದ ಮೊರೆ?
ಇಷ್ಟೆಲ್ಲಾ ತಿಕ್ಕಾಟದ ನಡುವೆ ತಮಿಳುನಾಡು ಸರ್ಕಾರ ರಾಜ್ಯಪಾಲರ ನಿರ್ಧಾರ ಪ್ರಶ್ನಿಸುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ತಮಿಳುನಾಡು ಸರ್ಕಾರ ಈ ಕ್ರಮವನ್ನು ಸುಪ್ರೀಂ ತನಕವೂ ಕೊಂಡೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೂ ಉದ್ಯೋಗಕ್ಕಾಗಿ ನಗದು ಹಗರಣ ಸೇರಿ ಹಲವು ಭ್ರಷ್ಟಾಚಾರ ಆರೋಪದಡಿ ಈಗ ಜೈಲಿನಲ್ಲಿರುವ ಮತ್ತು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಬಾಲಾಜಿಯನ್ನು ಸ್ಟಾಲಿನ್ ಖಾತೆಯಿಲ್ಲದೆ ಸಚಿವರಾಗಿ ಉಳಿಸಿಕೊಂಡಿದ್ದರು. ಆದರೆ ದಿಢೀರ್ ರಾಜ್ಯಪಾಲರ ಕ್ರಮದಿಂದ ಆ ನಿರ್ಧಾರ ರದ್ದುಗೊಳಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಸಿಎಂ ಸ್ಟಾಲಿನ್ ವಿಡಿಯೋ ಮುಖಾಂತರ, ದ್ವೇಷ ರಾಜಕಾರಣ ಮಾಡಬೇಡಿ ಎಂದಿದ್ದರು. ಈ ಘಟನೆ ಬಳಿಕ ರಾಜ್ಯಪಾಲರ ನಿರ್ಧಾರ ಸಂಚಲನ ಸೃಷ್ಟಿ ಮಾಡಿದೆ.
ಸಚಿವ ಸೆಂಥಿಲ್ ಬಾಲಾಜಿ ಎಲ್ಲಿ?
ಅಂದಹಾಗೆ ಜೂನ್ ಆರಂಭದಲ್ಲಿ ಇಡಿ ಅಂದರೆ ಜಾರಿ ನಿರ್ದೇಶನಾಲಯ ಸಚಿವ ಸೆಂಥಿಲ್ ಬಾಲಾಜಿಯನ್ನ ಬಂಧಿಸಿತ್ತು. ಸಚಿವ ಬಾಲಾಜಿಯ ನ್ಯಾಯಾಂಗ ಬಂಧನವನ್ನು ಚೆನ್ನೈನ ನ್ಯಾಯಾಲಯ ಜುಲೈ 12 ರವರೆಗೂ ವಿಸ್ತರಿಸಿತ್ತು. ಅಲ್ಲದೆ ಬಂಧನಕ್ಕೂ ಮುನ್ನ ವೈದ್ಯಕೀಯ ತಪಾಸಣೆಗೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಅಲ್ಲಿ ಸಚಿವ ಬಾಲಾಜಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿತ್ತು. ಅದಕ್ಕೂ ಮುನ್ನ ಎದೆನೋವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಎಲ್ಲಾ ಘಟನೆಗಳ ಬಳಿಕ ಈಗ ರಾಜ್ಯಪಾಲರು ದಿಢೀರ್ ಸಚಿವರನ್ನ ಸಂಪುಟದಿಂದ ವಜಾ ಮಾಡಿದ್ದಾರೆ.

ಈಗಾಗಲೇ ರಾಜ್ಯಪಾಲ ತಮಿಳುನಾಡು ಆರ್.ಎನ್.ರವಿ ವಿರುದ್ಧ ಡಿಎಂಕೆಯ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ನೀಡಿದೆ. ರಾಜ್ಯಪಾಲರ ನಡೆ ಬಗ್ಗೆ ಕಳೆದ ವರ್ಷ ರಾಷ್ಟ್ರಪತಿಗೆ ದೂರು ನೀಡಿದ್ದರು ಡಿಎಂಕೆ ನಾಯಕರು. ಈಗ ಕಿತ್ತಾಟ ಮತ್ತೊಮ್ಮೆ ಜೋರಾಗಿದ್ದು, ರಾಜ್ಯಪಾಲರ ನಡೆ ಏಕಪಕ್ಷೀಯವಾಗಿದೆ ಅಂತಾ ತಮಿಳುನಾಡು ಸರ್ಕಾರ ಹೇಳುತ್ತಿದೆ. ಆದರೆ ಬಿಜೆಪಿ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೇ ವಿಚಾರ ಮುಂದೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸುವ ಎಲ್ಲಾ ಲಕ್ಷಣಗಳು ಈಗ ಕಂಡುಬರುತ್ತಿವೆ.












Click it and Unblock the Notifications