Firecracker factory blast: ತಮಿಳುನಾಡಿನಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 16 ಮಂದಿ ಕಾರ್ಮಿಕರ ಸಾವು
Tamil Nadu Firecracker factory blast: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ (ಏಪ್ರಿಲ್ 19) ಭೀಕರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 16 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ವಿರುಧುನಗರ ಜಿಲ್ಲೆಯ ಕಟ್ಟನಾರ್‌ಪಟ್ಟಿ ಗ್ರಾಮದ ಬಳಿಯಿರುವ ವನಜ ಪಟಾಕಿ ತಯಾರಿಕಾ ಘಟಕದಲ್ಲಿ ಇಂದು ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಕಟ್ಟಡವು ಸಂಪೂರ್ಣವಾಗಿ ಭಸ್ಮವಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ವಿರುಧುನಗರ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಮಧುರೈ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿವೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯಿದೆ. ಮಾಹಿತಿ ಪ್ರಕಾರ, ಪಟಾಕಿ ತಯಾರಿಕೆಗೆ ಬೇಕಾದ ರಾಸಾಯನಿಕಗಳನ್ನು ಮಿಶ್ರಣ ಮಾಡುವ ವೇಳೆ ಸಂಭವಿಸಿದ ಘರ್ಷಣೆಯಿಂದ ಈ ಭೀಕರ ಸ್ಫೋಟ ಸಂಭವಿಸರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಸ್ಫೋಟದ ವೇಳೆ ಸುಮಾರು 5 ಕಿಲೋಮೀಟರ್ ದೂರದವರೆಗೂ ಶಬ್ಧ ಕೇಳಿಬಂದಿದ್ದು, ಕಾರ್ಖಾನೆಯ ನಾಲ್ಕು ಮಹಡಿ ಸಂಪೂರ್ಣವಾಗಿ ಕುಸಿದಿದೆ. ಈ ಕಾರ್ಖಾನೆಯೂ ಸುಮಾರು 100ಕ್ಕೂ ಅಧಿಕ ಕಾರ್ಮಿಕರನ್ನು ಹೊಂದಿತ್ತು. ಸಾಮಾನ್ಯವಾಗಿ ಭಾನುವಾರ ಈ ಕಾರ್ಖಾನೆಗೆ ರಜೆ ನೀಡಲಾಗುತ್ತಿತ್ತು. ಆದರೆ, ವಿಧಾನಸಭಾ ಚುನಾವಣೆ ಹಿನ್ನೆಲೆ ಏಪ್ರಿಲ್ 23ರಂದು ರಜೆ ನೀಡಬೇಕಾಗಿರುವ ಕಾರಣ ಇಂದು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಷ್ಟು ಸಂಖ್ಯೆಯ ಕಾರ್ಮಿಕರು ಇಂದು ಕೆಲಸಕ್ಕೆ ಹಾಜರಾಗಿದ್ದರು ಎನ್ನುವ ಮಾಹಿತಿ ಇನ್ನೂ ತಿಳಿದುಬರಬೇಕಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಟ್ವೀಟ್ ಮಾಡಿದ್ದು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಲು ಸಚಿವರಾದ ರಾಮಚಂದ್ರನ್ ಮತ್ತು ತಂಗಂ ತೆನ್ನರಸು ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
Tamil Nadu: A massive explosion occurred at a firecracker factory in Kattanarpatti near Virudhunagar. 16 people died and 6 injured: Fire and Rescue Department
— ANI (@ANI) April 19, 2026
ಇನ್ನೂ ನಿರ್ಲಕ್ಷ್ಯ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕಾರ್ಖಾನೆಯ ಮಾಲೀಕರು ಮತ್ತು ವ್ಯವಸ್ಥಾಪಕರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಘಟನೆ ನಡೆದ ತಕ್ಷಣವೇ ಮಾಲೀಕರು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪಟಾಕಿ ತಯಾರಿಕೆಗೆ ಬಳಸುವ ರಾಸಾಯನಿಕಗಳ ಮಿಶ್ರಣದ ವೇಳೆ ಸಂಭವಿಸಿದ ಘರ್ಷಣೆಯಿಂದಾಗಿ ಈ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರ್ಖಾನೆಯು ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿತ್ತೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಮಾಲೀಕರಿಗಾಗಿ ಬಲೆ ಬೀಸಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.












Click it and Unblock the Notifications