Mettur Dam: ಕಾವೇರಿ ಪರಿಶೀಲನಾ ಸಭೆ ಬಳಿಕ ಮೆಟ್ಟೂರು ಡ್ಯಾಂ ತೆರೆಯಲು ನಿರ್ಧರಿಸಿದ ತಮಿಳುನಾಡು
ಚೆನ್ನೈ, ಜುಲೈ, 28: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕಾವೇರಿ ನೀರು ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಭಾನುವಾರ ಪರಿಶೀಲನಾ ಸಭೆ ನಡೆಸಿದ್ದಾರೆ. ಸಭೆ ಬಳಿಕ ಕುರುವಾಯಿ ಭತ್ತದ ಕೃಷಿ ನೀರಾವರಿಗಾಗಿ ಮೆಟ್ಟೂರು ಜಲಾಶಯವನ್ನು ತೆರೆಯಲು ನಿರ್ಧರಿಸಿದ್ದಾರೆ.
ಸಭೆಯಲ್ಲಿ ಕರ್ನಾಟಕದಿಂದ ನೀರು ಬಿಡದ ಕಾರಣ ಜುಲೈ ತಿಂಗಳ ಆರಂಭದಲ್ಲಿಯೇ ಮೆಟ್ಟೂರು ಅಣೆಕಟ್ಟೆಯಿಂದ ನೀರು ಬಿಡುವುದನ್ನು ಮುಂದೂಡಬೇಕಾಯಿತು ಎನ್ನಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಶಿಫಾರಸು ಮಾಡಿದ ನೀರಿನ ಪ್ರಮಾಣವನ್ನು ಮಳೆಯ ಕೊರತೆಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡದಿರಲು ನಿರ್ಧರಿಸಿದ ನಂತರ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು.

ಆದರೆ, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ, ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟ 109.20 ಅಡಿಗಳಿಗೆ ಏರಿಕೆಯಾಗಿದ್ದು, ಪ್ರಸ್ತುತ 77.30 ಟಿಎಂಸಿ ನೀರು ಇದೆ. ಕರ್ನಾಟಕದ ನಾಲ್ಕು ಅಣೆಕಟ್ಟುಗಳಿಂದ ಮೆಟ್ಟೂರು ಅಣೆಕಟ್ಟಿಗೆ 1.48 ಲಕ್ಷ ಕ್ಯೂಸೆಕ್ ಹೆಚ್ಚುವರಿ ನೀರು ಬರುತ್ತಿದ್ದು, ಹವಾಮಾನ ಮುನ್ಸೂಚನೆಯಂತೆ ಇನ್ನೂ ಮೂರು ದಿನಗಳ ಕಾಲ ಈ ಪ್ರದೇಶಗಳಲ್ಲಿ ಮಳೆ ಮುಂದುವರಿಯುವ ನಿರೀಕ್ಷೆಯಿದೆ.
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಜುಲೈ 28 ರಂದು ಮಧ್ಯಾಹ್ನ ಮೆಟ್ಟೂರು ಅಣೆಕಟ್ಟನ್ನು ಓಪನ್ ಮಾಡಲು ಹೇಳಿದ್ದಾರೆ. ಆರಂಭದಲ್ಲಿ 12,000 ಕ್ಯೂಸೆಕ್ ನೀರು ಬಿಡುಗಡೆ ಮಾಡಿದರು. ಸಂಬಂಧಪಟ್ಟ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ನೀರು ಬಿಡುವುದನ್ನು ನಿರ್ವಹಿಸಿ 'ಆದಿ ಪೆರುಕ್ಕು' ಉತ್ಸವಕ್ಕೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದ್ದಾರೆ. ಮೆಟ್ಟೂರು ಡ್ಯಾಂನಿಂದ ಬಿಡುಗಡೆಯಾಗುವ ನೀರನ್ನು 13 ಜಿಲ್ಲೆಗಳಲ್ಲಿ ಕುರುವಾಯಿ (ದೀರ್ಘಾವಧಿ) ಭತ್ತದ ಕೃಷಿಗೆ ಬಳಸಲಾಗುತ್ತದೆ.

100 ಅಡಿಯ ಗಡಿ ತಲುಪಿದ ಮೆಟ್ಟೂರು ಡ್ಯಾಂ ನೀರಿನ ಮಟ್ಟ
1934ರಲ್ಲಿ ಜಲಾಶಯ ಉದ್ಘಾಟನೆಯಾದ ನಂತರ ಶನಿವಾರ ಬೆಳಗ್ಗೆ ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟ 71ನೇ ಬಾರಿಗೆ 100 ಅಡಿಯ ಗಡಿ ತಲುಪಿದೆ. ಶನಿವಾರ ರಾತ್ರಿ 8 ಗಂಟೆಯ ವೇಳೆಗೆ ನೀರಿನ ಮಟ್ಟ 103.7 ಅಡಿಗಳಿಗೆ ಏರಿತು. ಅದರ ಪೂರ್ಣ ಸಾಮರ್ಥ್ಯದ 120 ಅಡಿಗಿಂತ ಕೇವಲ 17 ಅಡಿ ಕಡಿಮೆಯಾಗಿದೆ. ಅಣೆಕಟ್ಟಿನಲ್ಲಿ ಸುಮಾರು 70 ಟಿಎಂಸಿ (ಸಾವಿರ ಮಿಲಿಯನ್ ಘನ ಅಡಿ) ನೀರು ಇದೆ, ಅದರ ಪೂರ್ಣ ಸಾಮರ್ಥ್ಯದ 93.47 ಟಿಎಂಸಿ. ಜೂನ್ 11, 2023 ರಂದು ಅಣೆಕಟ್ಟು ಕೊನೆಯದಾಗಿ 100 ಅಡಿಗಳ ಗಡಿಯನ್ನು ತಲುಪಿತು.
ಮೂಲಗಳ ಪ್ರಕಾರ, ಕಬಿನಿ ಮತ್ತು ಕೃಷ್ಣರಾಜ ಸಾಗರ ಅಣೆಕಟ್ಟುಗಳು ತಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪಿವೆ. ಆ ಅಣೆಕಟ್ಟುಗಳ ಸಂಪೂರ್ಣ ಒಳಹರಿವು ಈಗ ಕಾವೇರಿ ನದಿಗೆ ಬಿಡಲಾಗುತ್ತಿದೆ. ಇದು ಮೆಟ್ಟೂರು ಅಣೆಕಟ್ಟಿನ ಒಳ ಹರಿವಿಗೆ ಕಾರಣವಾಗಿದೆ. ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳಿಂದ ಒಟ್ಟು 1,45,000 ಕ್ಯೂಸೆಕ್ ನೀರು ಮೆಟ್ಟೂರು ಅಣೆಕಟ್ಟನ್ನು ತಲುಪುವ ನಿರೀಕ್ಷೆಯಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಜಲ ಆಯೋಗವು ಶನಿವಾರ ತಡರಾತ್ರಿ ಮೆಟ್ಟೂರು ಅಣೆಕಟ್ಟು ಅಧಿಕಾರಿಗಳಿಗೆ ಸಲಹೆ ನೀಡಿದೆ.












Click it and Unblock the Notifications