ಕೈಲಾಸ್ ಮಾನಸ ಸರೋವರ ವಾರ್ಷಿಕ ಯಾತ್ರೆಗೆ ಸುಷ್ಮಾ ಸ್ವರಾಜ್ ಚಾಲನೆ
ನವದೆಹಲಿ, ಜೂನ್ 11: ಮೊದಲ ಗುಂಪಿನ ಭಕ್ತಾದಿಗಳನ್ನು ಒಳಗೊಂಡ ಕೈಲಾಸ್ ಮಾನಸ ಸರೋವರ ವಾರ್ಷಿಕ ಯಾತ್ರೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಚಾಲನೆ ನೀಡಿದರು. ಈ ಯಾತ್ರೆಯ ಮಾರ್ಗದುದ್ದಕ್ಕೂ ರಸ್ತೆಯಲ್ಲಿ ಶುಚಿತ್ವಕ್ಕೂ ಮಹತ್ವ ನೀಡುವಂತೆ ಹೇಳಿದರು.
ಶಿವನಿಗೆ ಎಷ್ಟು ಭಕ್ತಿ, ಗೌರವ ನೀಡುತ್ತೇವೋ ಆತನ ವಾಸಸ್ಥಳಕ್ಕೂ ಅಷ್ಟೇ ಮಹತ್ವ ನೀಡಬೇಕು. ಆದ್ದರಿಂದ ಅಲ್ಲಿಗೆ ತೆರಳುವ ದಾರಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಾವಿರದ ನಾನೂರಾ ಮೂವತ್ತು ಭಕ್ತರು ಇಪ್ಪತ್ತೈದು ಗುಂಪುಗಳಲ್ಲಿ ಈ ವರ್ಷ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಅರವತ್ತು ಭಕ್ತರನ್ನು ಒಳಗೊಂಡ ಹದಿನೆಂಟು ಗುಂಪು ಲಿಪುಲೆಕ್ ಪಾಸ್ ಮಾರ್ಗದಲ್ಲಿ ಹಾಗೂ ಐವತ್ತು ಭಕ್ತರನ್ನು ಒಳಗೊಂಡ ಏಳು ಗುಂಪು ಹೊಸದಾಗಿ ಅರಂಭವಾಗಿರುವ ನಾಥು ಲಾ ಮಾರ್ಗದಲ್ಲಿ ಮಾನಸ ಕೈಲಾಸ ಮಾನಸ ಸರೋವರಕ್ಕೆ ತೆರಳಲಿದೆ.
ಮುಂದಿನ ನಾಲ್ಕು ತಿಂಗಳ ಕಾಲ ಈ ಯಾತ್ರೆ ಮುಂದುವರಿಯಲಿದೆ. ಈ ವರ್ಷ ನಾಲ್ಕು ಸಾವಿರದ ನಾನೂರಾ ನಲವತ್ತೆರಡು ಅರ್ಜಿಗಳು ಬಂದಿದ್ದವು. ಕಳೆದ ವರ್ಷ ಈ ಸಂಖ್ಯೆ ಎರಡು ಸಾವಿರದ ಆರು ನೂರು ಅರ್ಜಿಗಳು ಬಂದಿದ್ದವು. ಕಂಪ್ಯೂಟರ್ ಡ್ರಾ ಮೂಲಕ ಆಯ್ಕೆ ಮಾಡಲಾಯಿತು.
ಕಳೆದ ತಿಂಗಳು ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಆ ದೇವರ ದಯೆಯಿಂದ ಬೇಗ ಚೇತರಿಸಿಕೊಂಡೆ. ನನ್ನ ಪರವಾಗಿ ಆ ದೇವರನ್ನು ಪ್ರಾರ್ಥಿಸಿ. ನಾನು ಈ ವರೆಗೆ ಮಾನಸ ಸರೋವರಕ್ಕೆ ಹೋಗಿಲ್ಲ. ಮುಂದೆ ಹೋಗುವುದಕ್ಕೆ ಆಗುತ್ತದೋ-ಇಲ್ಲವೋ ಗೊತ್ತಿಲ್ಲ ಎಂದು ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.












Click it and Unblock the Notifications