ನ್ಯಾಯಮೂರ್ತಿ ಶ್ರೀಶಾನಂದ ಹೇಳಿಕೆಗೆ ಸುಪ್ರೀಂ ಕೋರ್ಟ್ ಆಕ್ಷೇಪ
ತಮ್ಮ ವಿಚಾರಣೆ ಸಂದರ್ಭದಲ್ಲಿ ಬೆಂಗಳೂರಿನ ಗೌರಿಪಾಳ್ಯ ಪ್ರದೇಶವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರ ಹೇಳಿಕೆಗೆ ಸಂಬಂಧಪಟ್ಟಂತೆ ಸ್ವಯಂಪ್ರೇರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿದೆ. ನ್ಯಾಯಮೂರ್ತಿ ಶ್ರೀಶಾನಂದ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಭಾರತದ ಯಾವುದೇ ಪ್ರದೇಶವನ್ನು ಪಾಕಿಸ್ತಾನ ಎಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ, ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು, ನ್ಯಾಯಾಧೀಶರು ತಮ್ಮ ಹೇಳಿಕೆಗಳಿಗೆ ಈಗಾಗಲೇ ಕ್ಷಮೆಯಾಚಿಸಿರುವುದನ್ನು ಎನ್ನುವ ಅಂಶವನ್ನು ಗಮನಿಸಿತು.

ನ್ಯಾಯಮೂರ್ತಿ ಶ್ರೀಶಾನಂದ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಇಂತಹ ಹೇಳಿಕೆಗಳು ವೇಗವಾಗಿ ಹರಡುತ್ತವೆ, ಆದ್ದರಿಂದ ನ್ಯಾಯಾಧೀಶರು ನಡವಳಿಕೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಭಾರತದ ಯಾವುದೇ ಜಾಗವನ್ನು ಯಾರೂ ಕೂಡ ಪಾಕಿಸ್ತಾನ ಎಂದು ಕರೆಯಲು ಸಾಧ್ಯಬಿಲ್ಲ. ಇದು ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾದದ್ದು ಎಂದು ಹೇಳಿದರು. ಇಂತಹ ವಿವಾದಗಳು ನ್ಯಾಯಾಲಯದ ನೇರಪ್ರಸಾರ ನಿಲ್ಲಿಸುವ ಬೇಡಿಕೆಯನ್ನು ಪ್ರಚೋದಿಸಬಾರದು ಎಂದು ಹೇಳಿದೆ.
"ವಿಚಾರಣೆಗಳು ನ್ಯಾಯಾಧೀಶರು, ವಕೀಲರು, ಅರ್ಜಿದಾರರು ನ್ಯಾಯಾಲಯದ ಆವರಣವನ್ನು ಮೀರಿದ ಪ್ರೇಕ್ಷಕರನ್ನು ತಲುಪುತ್ತದೆ ಎನ್ನುವುದನ್ನು ತಿಳಿದಿರಬೇಕು. ನ್ಯಾಯಾಧೀಶರಾಗಿ ನಾವು ಜಾಗೃತರಾಗಿರಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಕೀಲರು ಹಾಗೂ ನ್ಯಾಯಮೂರ್ತಿಗಳು ವಿಚಾರಣೆ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಪೂರ್ವಾಗ್ರಹಗಳನ್ನು ತೋರಿಸಬಾರದು. ನ್ಯಾಯಾಧೀಶರ ಹೃದಯ ಮತ್ತು ಆತ್ಮ ನಿಸ್ಪಕ್ಷವಾಗಿದ್ದಾಗ ಮಾತ್ರ ವಸ್ತುನಿಷ್ಠ ಮತ್ತು ಸರಿಯಾದ ನ್ಯಾಯ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದೆ.
ಸೆಪ್ಟೆಂಬರ್ 21ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಅವರ ಅವಲೋಕನಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಉಲ್ಲೇಖಿಸಿದ್ದಾರೆ ಎಂದು ನ್ಯಾಯಾಧೀಶ ನ್ಯಾಯಮೂರ್ತಿ ಶ್ರೀಶಾನಂದ ಅವರು ಪ್ರತಿಪಾದಿಸಿದ್ದಾರೆ ಎಂದು ಹೇಳಿದ ಸುಪ್ರೀಂ ಕೋರ್ಟ್, ನ್ಯಾಯಾಧೀಶರು ಉದ್ದೇಶಪೂರ್ವಕವಾಗಿ ಟೀಕೆ ಮಾಡಿಲ್ಲ ಮತ್ತು ಯಾರನ್ನೂ ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿದೆ.
ಮುಕ್ತ ನ್ಯಾಯಾಲಯದ ವಿಚಾರಣೆಯಲ್ಲಿ ಅವರು ಕ್ಷಮೆಯಾಚಿಸಿದ್ದಾರೆ ಎನ್ನುವುದನ್ನು ಪರಿಗಣಿಸಿ ಈ ಪ್ರಕ್ರಿಯೆಗಳನ್ನು ಮುಂದುವರಿಸದಂತೆ ಸಂಸ್ಥೆಯ ನ್ಯಾಯ ಮತ್ತು ಘನತೆಯ ಹಿತದೃಷ್ಟಿಯಿಂದ ಪರಿಗಣಿಸುತ್ತೇವೆ, ನ್ಯಾಯಂಗದ ಘನತೆಯ ಹಿತವನ್ನು ಕಾಪಾಡಲು, ನೋಟಿಸ್ ಜಾರಿಮಾಡುವುದನ್ನು ತಡೆಯಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿವಾದಕ್ಕೆ ಕಾರಣವಾದ ಹೇಳಿಕೆ
ಹೈಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಬೆಂಗಳೂರಿನ ಗೋರಿಪಾಳ್ಯ ಪಾಕಿಸ್ತಾನದಂತಿದೆ ಎಂದು ಹೇಳಿದ್ದರು. ವಕೀಲೆಯೊಬ್ಬರಿಗೆ "ನಿಮ್ಮ ಪ್ರತಿವಾದಿ ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎನ್ನುವುದನ್ನು ಹೇಳುವಷ್ಟು ಅರ್ಥಮಾಡಿಕೊಂಡಿದ್ದೀರಾ" ಎಂದು ಹೇಳಿದ್ದರು. ಅವರ ಹೇಳಿಕೆಯ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು, ಸಾಕಷ್ಟು ಆಕ್ಷೇಪ ಕೂಡ ವ್ಯಕ್ತವಾಗಿತ್ತು. ಬಳಿಕ ತಮ್ಮ ಹೇಳಿಕೆಗೆ ನ್ಯಾಯಾಮೂರ್ತಿ ಶ್ರೀಶಾನಂದ ವಿಷಾದ ವ್ಯಕ್ತಪಡಿಸಿದ್ದರು.












Click it and Unblock the Notifications