ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ 14 ದೋಷ ಪತ್ತೆ ಹಚ್ಚಿದ ಸುಪ್ರೀಂ: ವಿಚಾರಣೆ ವಿಳಂಬ
ನವದೆಹಲಿ: ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ನಿರ್ಧಾರಗಳನ್ನ ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಒಕ್ಕೂಟದ ನಾಯಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವಿಳಂಬವಾಗಿದೆ.
ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯು ಈ ಅರ್ಜಿಯಲ್ಲಿ 14 ದೋಷಗಳನ್ನ ಪತ್ತೆ ಹಚ್ಚಿದ್ದು, ಅವುಗಳನ್ನ ಸರಿಪಡಿಸುವವರೆಗೆ ವಿಚಾರಣೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸೋಮವಾರ ಸಂಜೆ ರಾಹುಲ್ ಗಾಂಧಿ ಅವರು ಖುದ್ದಾಗಿ ಸುಪ್ರೀಂ ಕೋರ್ಟ್‌ಗೆ ಭೇಟಿ ನೀಡಿ ಈ ಅರ್ಜಿಯನ್ನ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ಆಕ್ಷೇಪಣೆಗಳು: ಅರ್ಜಿಯಲ್ಲಿದ್ದ ದೋಷಗಳೇನು?
ನ್ಯಾಯಾಲಯದ ರಿಜಿಸ್ಟ್ರಿ ಗುರುತಿಸಿರುವ 14 ದೋಷಗಳಲ್ಲಿ ಪ್ರಮುಖವಾಗಿ ಕೆಲವು ತಾಂತ್ರಿಕ ಅಂಶಗಳು ಸೇರಿವೆ. ನ್ಯಾಯಾಲಯದ ಶುಲ್ಕದಲ್ಲಿ 220 ರೂ.ಗಳ ಕೊರತೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ ಅಸ್ಪಷ್ಟವಾಗಿರುವುದು ಹಾಗೂ 11 ಅರ್ಜಿದಾರರ ಪೈಕಿ 9 ನಾಯಕರ ವಕಾಲತ್ತುನಾಮ ಲಗತ್ತಿಸದಿರುವುದು ಪ್ರಮುಖ ದೋಷಗಳಾಗಿವೆ.
ವಕಾಲತ್ತುನಾಮ ಸಲ್ಲಿಸದ ನಾಯಕರ ಪಟ್ಟಿಯಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಎನ್‌ಸಿಪಿ (ಶರದ್ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ, ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಮತ್ತು ಟಿಎಂಸಿ ಸಂಸದ ಸೌಗತ ರಾಯ್ ಸೇರಿದ್ದಾರೆ.
ಇದಲ್ಲದೆ, ಇದೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿದ್ದರೂ (PIL), ಮೂವರು ಚುನಾವಣಾ ಆಯುಕ್ತರನ್ನ ವೈಯಕ್ತಿಕವಾಗಿ (ಖಾಸಗಿ ವ್ಯಕ್ತಿಗಳಾಗಿ) ಪ್ರತಿವಾದಿಗಳನ್ನಾಗಿ ಮಾಡಿದ್ದೇಕೆ ಎಂಬ ಮಹತ್ವದ ಪ್ರಶ್ನೆಯನ್ನೂ ರಿಜಿಸ್ಟ್ರಿ ಎತ್ತಿದೆ.
ಈ ಎಲ್ಲ ದೋಷಗಳನ್ನ ಸರಿಪಡಿಸಿದ ಬಳಿಕ ಬುಧವಾರ ಅರ್ಜಿಯನ್ನ ವಿಚಾರಣಾ ಪಟ್ಟಿಗೆ ಸೇರಿಸುವಂತೆ ವಕೀಲರ ತಂಡ ಮನವಿ ಮಾಡಿದೆ.
ವಿಪಕ್ಷಗಳ ಪ್ರಮುಖ ಬೇಡಿಕೆಗಳೇನು?
ವಕೀಲ ಎಸ್. ಪ್ರಸನ್ನ ಅವರ ಮೂಲಕ ಸಲ್ಲಿಸಲಾಗಿರುವ ಈ ಅರ್ಜಿಯು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತೆಗೆದುಕೊಂಡಿದ್ದಾರೆ ಎನ್ನಲಾದ ಏಕಪಕ್ಷೀಯ ನಿರ್ಧಾರಗಳ ಕುರಿತು ಸ್ವತಂತ್ರ ಮತ್ತು ಕಾಲಮಿತಿಯ ತನಿಖೆಗೆ ಆಗ್ರಹಿಸಿದೆ.
ವಿಶೇಷವಾಗಿ ಜೂನ್ 2025ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಚುನಾವಣಾ ಆಯೋಗವು ಸಾಮೂಹಿಕ ಸಾಂವಿಧಾನಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕೇ ಹೊರತು ಏಕವ್ಯಕ್ತಿಯಿಂದಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.
ಕಳೆದ 10 ತಿಂಗಳಲ್ಲಿ ಸಿಇಸಿ ಅವರ 14 ನಿರ್ಧಾರಗಳಿಗೆ ಇತರ ಇಬ್ಬರು ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಆಕ್ಷೇಪಣೆ ವ್ಯಕ್ತಪಡಿಸಿದ್ದರು ಎಂಬ ಮಾಧ್ಯಮ ವರದಿಗಳನ್ನ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಕಡತಗಳು, ಅಜೆಂಡಾ, ನಡಾವಳಿಗಳು ಮತ್ತು ಇತರ ಆಯುಕ್ತರು ದಾಖಲಿಸಿದ ಆಕ್ಷೇಪಣೆಗಳ ದಾಖಲೆಗಳನ್ನು ತರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ.
ಇದು ಕೇವಲ ಆಂತರಿಕ ಆಡಳಿತಾತ್ಮಕ ವಿಷಯವಲ್ಲ, ಬದಲಾಗಿ ಚುನಾವಣಾ ಸಮಗ್ರತೆಯನ್ನ ಕಾಪಾಡುವ ಸಂಸ್ಥೆಯ ಸಾಂವಿಧಾನಿಕ ಅಧಿಕಾರದ ಪ್ರಶ್ನೆಯಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ವಿಪಕ್ಷ ನಾಯಕರ ಹೋರಾಟ
ಅರ್ಜಿ ಸಲ್ಲಿಕೆಗೂ ಮುನ್ನ, ಚುನಾವಣಾ ಆಯೋಗದ ನಡೆಯನ್ನ ವಿರೋಧಿಸಿ ಮತ್ತು ಸಿಇಸಿ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ನಾಯಕರು ದೆಹಲಿಯಲ್ಲಿ ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆ ನಡೆಸಿದ್ದರು. ಆದರೆ, ಸುಪ್ರೀಂ ಕೋರ್ಟ್‌ನಿಂದ ಸುಮಾರು 600 ಮೀಟರ್ ದೂರದಲ್ಲಿರುವ ಭಗವಾನ್ ದಾಸ್ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನ ಅಳವಡಿಸಿ ಮೆರವಣಿಗೆಯನ್ನು ತಡೆದಿದ್ದರು.
ಈ ನಡುವೆ, ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣಾ ಪ್ರಕ್ರಿಯೆಯನ್ನ ಖಚಿತಪಡಿಸಿಕೊಳ್ಳಲು ಹಾಗೂ ಸಾರ್ವತ್ರಿಕ ವಯಸ್ಕರ ಮತಾಧಿಕಾರದ ಸಾಂವಿಧಾನಿಕ ಹಕ್ಕನ್ನ ರಕ್ಷಿಸಲು ಈ ಅರ್ಜಿ ಸಲ್ಲಿಸಲಾಗಿದೆ ಎಂದು ಪ್ರತಿಪಕ್ಷಗಳು ತಿಳಿಸಿವೆ.
ಆದ್ರೆ ಈ 14 ದೋಷಗಳು ನಿವಾರಣೆಯಾದ ಬಳಿಕವಷ್ಟೇ ಸುಪ್ರೀಂ ಕೋರ್ಟ್ ಈ ಗಂಭೀರ ಆರೋಪಗಳ ವಿಚಾರಣೆಯನ್ನ ಕೈಗೆತ್ತಿಕೊಳ್ಳಲಿದೆ.


Click it and Unblock the Notifications
