ಬಡ ಕೈದಿಗಳ ಬಿಡುಗಡೆ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ
ನವದೆಹಲಿ, ಅಕ್ಟೋಬರ್ 19: ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲಿರುತ್ತದೆ. ಹಾಗೆಯೇ ಇದೀಗ ಜೈಲಿನಲ್ಲಿರುವ ಬಡ ಕೈದಿಗಳ ಬಿಡುಗಡೆ ಸಂಬಂಧ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಜೈಲಿನಲ್ಲಿ ಇರುವ ಬಡ ಕೈದಿಗಳ ಬಿಡುಗಡೆ ಕುರಿತು ಸುಪ್ರೀಂ ಕೋರ್ಟ್ ಒಂದು ವಿಶಿಷ್ಟವಾದ SOP ಅನ್ನು ರೂಪಿಸಿದೆ. ಅಪರಾಧ ಹಿನ್ನೆಲೆ ಬಂಧಿಸಲ್ಪಟ್ಟು ವಿಚಾರಣೆ ಸಮಯದಲ್ಲಿ ಜೈಲಿನಲ್ಲಿರುವ ಯಾವುದೇ ಬಡ ವ್ಯಕ್ತಿ ಜಾಮೀನು ಪಾವತಿಸಲು ಸಾಧ್ಯ ಆಗದಿದ್ದರೆ, ಸರ್ಕಾರವು ಅವರ ಬಿಡುಗಡೆಯನ್ನು ಖಚಿತಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ಮಾಡಿದೆ.

ಸರ್ಕಾರವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಭದ್ರತಾ ಠೇವಣಿಯನ್ನು ಒದಗಿಸುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಹೊಸ SOP ಅನ್ನು ಸುಪ್ರೀಂ ಕೋರ್ಟ್ ಅಮಿಕಸ್ ಕ್ಯೂರಿ ಅವರ ಸಲಹೆಗಳನ್ನು ಒಳಗೊಂಡಂತೆ ಅಭಿವೃದ್ಧಿಪಡಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಎಸ್.ಸಿ. ಶರ್ಮಾ ಅವರ ಪೀಠವು ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ಸಲಹೆಗಳನ್ನು ಒಳಗೊಂಡಿದೆ.
ಜಾಮೀನು ಬಾಂಡ್ ಪಾವತಿ ಮಾಡಲು ಸಾಧ್ಯ ಆಗದ ಕಾರಣ ಸಾವಿರಾರು ವಿಚಾರಣಾಧೀನ ಕೈದಿಗಳು ಜಾಮೀನು ಪಡೆದಿದ್ದರೂ ಜೈಲಿನಲ್ಲೇ ಇದ್ದಾರೆ ಎಂದು ತಿಳಿದಾಗ ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಮನಿಸಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ 100,000 ರೂಪಾಯಿ ವರೆಗಿನ ಜಾಮೀನು ಮೊತ್ತವನ್ನು ಪಾವತಿಸಬಹುದು ಮತ್ತು ಕೆಳ ನ್ಯಾಯಾಲಯವು 100,000 ರೂಪಾಯಿಗಿಂತ ಹೆಚ್ಚಿನ ಜಾಮೀನು ಮೊತ್ತವನ್ನು ನಿಗದಿಪಡಿಸಿದ್ದರೆ, ಅದನ್ನು ಕಡಿಮೆ ಮಾಡಲು ಅರ್ಜಿ ಸಲ್ಲಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ವಿಚಾರಣಾಧೀನ ಕೈದಿಯೊಬ್ಬರು ಜಾಮೀನು ಪಡೆದ ಒಂದು ವಾರದಲ್ಲಿ ಜೈಲಿನಿಂದ ಬಿಡುಗಡೆ ಆಗದಿದ್ದರೆ, ಜೈಲು ಅಧಿಕಾರಿಗಳು ಡಿಎಲ್‌ಎಸ್‌ಎ ಕಾರ್ಯದರ್ಶಿಗೆ ತಿಳಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ವಿಚಾರಣಾಧೀನ ಕೈದಿಯು ತನ್ನ ಉಳಿತಾಯ ಖಾತೆಯಲ್ಲಿ ಹಣವನ್ನು ಹೊಂದಿದ್ದಾನೆಯೇ ಎಂದು ಪರಿಶೀಲಬೆ ಮಾಡಲು ಅವರು ತಕ್ಷಣ ಒಬ್ಬ ವ್ಯಕ್ತಿಯನ್ನು ನೇಮಕ ಮಾಡುತ್ತಾರೆ.
ಒಂದು ವೇಳೆ ಆರೋಪಿ ಬಳಿ ಹಣ ಇಲ್ಲದಿದ್ದರೆ, ಜಿಲ್ಲಾ ಮಟ್ಟದ ಸಬಲೀಕರಣ ಸಮಿತಿಯು ವರದಿಯನ್ನು ಸ್ವೀಕರಿಸಿದ 5 ದಿನಗಳಲ್ಲಿ ಡಿಎಲ್‌ಎಸ್‌ಎ ಶಿಫಾರಸಿನ ಮೇರೆಗೆ ಜಾಮೀನು ನಿಧಿಯನ್ನು ಬಿಡುಗಡೆ ಮಾಡಲು ನಿರ್ದೇಶಿಸುತ್ತದೆ. ಬಡ ಕೈದಿಗಳಿಗೆ ಸಹಾಯ ಯೋಜನೆಯ ಅಡಿಯಲ್ಲಿ ವಿಚಾರಣಾಧೀನ ಕೈದಿಗೆ ಆರ್ಥಿಕ ಸಹಾಯದ ಪ್ರಯೋಜನವನ್ನು ನೀಡಬೇಕೆಂದು ಹೇಳಿದೆ.
ಸಬಲೀಕರಣ ಸಮಿತಿ ಶಿಫಾರಸು ಮಾಡಿದ ಪ್ರಕರಣಗಳಲ್ಲಿ, ಕೈದಿಗೆ ಅಗತ್ಯ ಇರುವ 50,000 ರೂಪಾಯಿಗಳ ವರೆಗಿನ ಮೊತ್ತವನ್ನು ನಿಗದಿತ ರೀತಿಯಲ್ಲಿ ಹಿಂಪಡೆಯಲು ಮತ್ತು ಸಂಬಂಧಪಟ್ಟ ನ್ಯಾಯಾಲಯಕ್ಕೆ ಲಭ್ಯ ಆಗುವಂತೆ ನಿರ್ದೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಮಾರು 3 ವರ್ಷಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂದಿನ ಮುಖ್ಯ ನ್ಯಾಯಾಧೀಶರ ಮುಂದೆ ವೇದಿಕೆಯಲ್ಲಿ ಮಾತನಾಡಿ, ಭದ್ರತಾ ಠೇವಣಿ ಕೊರತೆ ಇಂದಾಗಿ ಬಡ ಬುಡಕಟ್ಟು ಜನಾಂಗದವರು ಜಾಮೀನು ಪಡೆದಿದ್ದರೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ಹೇಳಿದರು. ಬಳಿಕ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಪರಿಗಣಿಸಿ ಈ ಮಹತ್ವದ ನಿರ್ದೇಶನ ಹೊರಡಿಸಿದೆ.












Click it and Unblock the Notifications