Rajinikanth: ರಾಜ್ಯಪಾಲರಾಗಿ ರಜನೀಕಾಂತ್! ಸಹೋದರ ಕೊಟ್ಟ ಸುಳಿವೇನು?
ಬೆಂಗಳೂರು, ಸೆಪ್ಟಂಬರ್ 06: ಇತ್ತೀಚೆಗಷ್ಟೇ ಜೈಲರ್ ಸಿನಿಮಾ ಮೂಲಕ ಜನಮನಗೆದ್ದ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರು ಇದೀಗ ರಾಜಕೀಯ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಮೊದಲಿನಿಂದಲೂ ಅವರು ರಾಜಕೀಯಕ್ಕೆ ಬರುವುದಿಲ್ಲ ಅಂತಲೇ ಹೇಳುತ್ತಿದ್ದಾರೆ. ಹೀಗಿದ್ದರೂ ಸಹ ಅವರ ಸಹೋದರ ನೀಡಿರುವ ಸುಳಿವಿನಿಂದಾಗಿ ರಜನಿಕಾಂತ್ ರಾಜ್ಯಪಾಲರ ಹುದ್ದೆ ಅಲಂಕರಿಸಿದ್ದಾರೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ.
ಹೌದು, ಸೂಪರ್ ಸ್ಟಾರ್ ರಜನಿಕಾಂತ್ ಅವರು ತೆಲಂಗಾಣ ರಾಜ್ಯದ ರಾಜ್ಯಪಾಲರಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ಭಾರಿ ಪ್ರಚಾರ ಪಡೆಯುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ರಜನಿಕಾಂತ್ ಸಹೋದರನಾದ ಸತ್ಯನಾರಾಯಣ ಅವರು ಮಾತನಾಡಿದ್ದಾರೆ.

'ರಾಜ್ಯಪಾಲರ ಹುದ್ದೆ ದೇವರ ಕೈಯಲ್ಲಿದೆ. ರಾಜ್ಯಪಾಲರ ಹುದ್ದೆಗೆ ಸಿಗುವ ಭರವಸೆ ನನಗಿಲ್ಲ. ಬಂದರೆ ಖುಷಿಪಡುತ್ತೇವೆ. ಒಂದು ವೇಳೆ ರಾಜ್ಯಪಾಲರ ಹುದ್ದೆ ನೀಡಿದರೆ ರಜನಿಕಾಂತ್ ಖಂಡಿತಾ ಒಪ್ಪಿಕೊಳ್ಳುತ್ತಾರೆ' ಎಂದು ಸತ್ಯನಾರಾಯಣ ಹೇಳಿದರು. ತೆಲಂಗಾಣ ರಾಜ್ಯಪಾಲ ಹುದ್ದೆ ವಿಚಾರ ಮತ್ತು ರಜನಿಕಾಂತ್ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ತಮಿಳುನಾಡು ರಾಜ್ಯದದಲ್ಲಿಯೂ ಈ ವಿಚಾರ ಮುನ್ನೆಲೆಗೆ ಬಂದಿದೆ. ಹಾಗಾದರೆ ತಮ್ಮ ನಟ ಯಾವ ರಾಜ್ಯದ ರಾಜ್ಯಪಾಲರಾಗುತ್ತಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಮಧುರೈ ಭೇಟಿ ಬಳಿಕ ಸ್ಪಷ್ಟನೆ
ಕಳೆದ ವಾರ ಭಾನುವಾರ ರಜನಿಕಾಂತ್ ಅವರು ಮಧುರೈಗೆ ಭೇಟಿ ಮೀನಾಕ್ಷಿ ದೇವರ ದರ್ಶನ ಪಡೆದರು. ನಂತರ ಅವರ ಸಹೋದರ ಸುದ್ದಿಗಾರರ ಜೊತೆ ಮಾತನಾಡಿದ್ದರು. ರಜನೀಕಾಂತ್ ಅವರು ರಾಜಕೀಯಕ್ಕೆ ಬರುವುದಿಲ್ಲ. ತಮಿಳುನಾಡು ಮಾಜಿ ಮುಖ್ಯಮಂತ್ರಿಗಳ ಬೇಟಿಗೆ ರಾಜಕೀಯ ಮಹತ್ವ ಕೊಡುವುದು ಬೇಡ, ಅಂತದ್ದೇನಿಲ್ಲ ಎಂದು ಅವರು ಹೇಳಿದ್ದರು.
ಜುಲೈ 6 ರಂದು ದೇಶಾದ್ಯಂತ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾ ಬಹುಭಾಷೆಗಳಲ್ಲಿ ತೆರೆಕಂಡು ಸಿನಿರಸಿಕರಿಂದ ಭರ್ಜರಿ ಸ್ಪಂದನೆ ಪಡೆದಿತ್ತು. ಇದರಲ್ಲಿ 'ಕಾವಾಲಯ್ಯ' ಹಾಡು ಯೂಟ್ಯೂಬ್ ನಲ್ಲಿ ಸಾಕಷ್ಟು ವೀಕ್ಷಣೆ ಗಳಿಸಿತ್ತು. ಅದರಲ್ಲಿ ನಟಿ ತಮನ್ನಾ ಭಾಟಿಯಾ ನೃತ್ಯ ಕಂಡ ಅಭಿಮಾನಿಗಳು ಭರಪೂರ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬಿಡುಗಡೆ ದಿನವೇ ರಜನಿಕಾಂತ್ ಅವರು ಹಿಮಾಲಯ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿನ ಸಾಧುಗಳನ್ನು ಬೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಬಳಿಕ ಅಲ್ಲಿಂದ ಉತ್ತರ ಪ್ರದೇಶಕ್ಕೆ ಬಂದು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಬೇಟಿ ಮಾಡಿ ಅವರೊಂದಿಗೆ ತಮ್ಮ ಜೈಲರ್ ಸಿನಿಮಾ ನೋಡಿದ್ದರು.
ಕೆಲವು ದಿನಗಳ ಹಿಂದಷ್ಟೇ ಕರ್ನಾಟಕದ ಬೆಂಗಳೂರಿನ ಜಯನಗರದ ಬಿಎಂಟಿಸಿ ಘಟಕಕ್ಕೂ ಭೇಟಿ ನೀಡಿದ್ದರ ಜನಿಕಾಂತ್ ತಮ್ಮ ಕಂಡಕ್ಟರ್ ವೃತ್ತಿಯ ಹಳೆಯ ನೆನಪುಗಳನ್ನು ಸ್ಮರಿಸಿದರು. ಈ ವೇಳೆ ನಿಗಮದ ಸಿಬ್ಬಂದಿ ಸೇರಿದಂತೆ ಅಭಿಮಾನಿಗಳು ಅವರೊಂದಿಗೆ ಸೆಲ್ಫಿಗೆ ಮುಗಿಬಿದ್ದಿದ್ದರು.
ತಮಿಳುನಾಡು ರಾಕೀಯದತ್ತ 'ರಜನಿ' ಅಭಿಮಾನಿಗಳ ಕಣ್ಣು
ಈ ವೇಳೆ ರಜನಿಕಾಂತ್ ಸಿಎಂ ಯೋಗಿ ಆದಿತ್ಯ ನಾಥ್ ಕಾಲಿಗೆ ಬಿದ್ದಿದ್ದರು. ತಮಗಿಂತ ಕಡಿಮೆ ವಯಸ್ಸಿನವರ ಕಾಲಿಗೆ ರಜನಿಕಾಂತ್ ನಮಸ್ಕರಿಸಿದ್ದಕ್ಕೆ ಅವರು ಸಾಕಷ್ಟು ಟ್ರೋಲ್ ಆಗಿದ್ದರು. ಸಾಧುಗಳ ಕಾಲಿಗೆ ಬೀಳುವಾಗ ಅವರು ನಮಗಿಂತ ಚಿಕ್ಕವರಾ? ದೊಡ್ಡವರಾ ಎಂದು ನೋಡುವುದಿಲ್ಲ. ಇಷ್ಟು ತಿಳುವಳಿಕೆ ಇದ್ದರೆ ಸಾಕು ಎಂದು ರಜನಿಕಾಂತ್ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications