ಕೆನಡಾ ಪ್ರಧಾನಿ ಹೇಳಿಕೆಗೆ ಭಾರತದ ಪ್ರತಿಭಟನೆ: ಹೈಕಮಿಷನರ್‌ಗೆ ಸಮನ್ಸ್
ನವದೆಹಲಿ, ಡಿಸೆಂಬರ್ 4: ಕೃಷಿ ಕಾಯ್ದೆಗಳ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿಕೆ ನೀಡಿರುವುದರಿಂದ ಅಸಮಾಧಾಗೊಂಡಿರುವ ಭಾರತ, ಕೆನಡಾದ ಹೈ ಕಮಿಷನರ್‌ಗೆ ಸಮನ್ ನೀಡಿ ತನ್ನ ಪ್ರತಿಭಟನೆ ದಾಖಲಿಸಿದೆ.
ಪ್ರಧಾನಿ ಜಸ್ಟಿನ್ ಟ್ರುಡೋ ಮತ್ತು ಇತರೆ ಸಂಸದರು ಪ್ರತಿಭಟನೆ ಕುರಿತು ಹೇಳಿಕೆ ನೀಡಿರುವುದು ದ್ವಿಪಕ್ಷೀಯ ಸಂಬಂಧಗಳಿಗೆ ಗಂಭೀರ ಹಾನಿಯುಂಟುಮಾಡಲಿದೆ ಎಂದು ಭಾರತ ಎಚ್ಚರಿಕೆ ನೀಡಿದೆ.
ಸೋಮವಾರ ಗುರುನಾನಕ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, 'ಕೆನಡಾ ಯಾವಾಗಲೂ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಎತ್ತಿಹಿಡಿಯುತ್ತದೆ' ಎಂದಿದ್ದರು.

'ರೈತರ ಪ್ರತಿಭಟನೆಯ ಬಗ್ಗೆ ಭಾರತದಿಂದ ಸುದ್ದಿ ಬರುತ್ತಿದೆ. ಪರಿಸ್ಥಿತಿಯು ಕಳವಳಕಾರಿಯಾಗಿದೆ ಮತ್ತು ಕುಟುಂಬಗಳು ಮತ್ತು ಸ್ನೇಹಿತರ ಬಗ್ಗೆ ನಮಗೆ ಬಹಳ ಚಿಂತೆಯಾಗುತ್ತಿದೆ. ನಾವು ಮಾತುಕತೆಯ ಮಹತ್ವದ ಬಗ್ಗೆ ನಂಬಿಕೆ ಇರಿಸಿದ್ದೇವೆ. ನಮ್ಮ ಕಳವಳಗಳನ್ನು ತಿಳಿಸಲು ನಾವು ಭಾರತದ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುತ್ತಿದ್ದೇವೆ. ಇದು ನಾವೆಲ್ಲರೂ ಜತೆಗೂಡಬೇಕಾದ ಸಮಯ' ಎಂದು ಟ್ರುಡೋ ಹೇಳಿಕೆ ನೀಡಿದ್ದರು.
'ಭಾರತದ ರೈತರಿಗೆ ಸಂಬಂಧಿಸಿದಂತೆ ಕೆನಡಾದ ಮುಖಂಡರಿಂದ ಕೆಲವು ತಪ್ಪು ಮಾಹಿತಿಯ ಹೇಳಿಕೆಗಳನ್ನು ನೋಡಿದ್ದೇವೆ. ಅಂತಹ ಹೇಳಿಕೆಗಳು ಅನವಶ್ಯಕವಾಗಿದ್ದವು. ಮುಖ್ಯವಾಗಿ ಒಂದು ಪ್ರಜಾಪ್ರಭುತ್ವ ದೇಶದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರದ ಬಗ್ಗೆ ಹೇಳಿಕೆ ಬೇಕಿರಲಿಲ್ಲ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಟ್ರುಡೋ ಹೇಳಿಕೆಗೆ ತೀಕ್ಷ್ಣ ತಿರುಗೇಟು ನೀಡಿದ್ದರು.












Click it and Unblock the Notifications