Earthquake: ಪಶ್ಚಿಮ ಬಂಗಾಳದಲ್ಲಿ ಪ್ರಬಲ ಭೂಕಂಪ- 5.1 ತೀವ್ರತೆಯಲ್ಲಿ ಕಂಪಿಸಿದ ಭೂಮಿ
ಕೋಲ್ಕತ್ತಾ ಫೆಬ್ರವರಿ 25: ಬಂಗಾಳಕೊಲ್ಲಿಯಲ್ಲಿ ಮಂಗಳವಾರ ಬೆಳಗಿನ ಜಾವ ಪ್ರಬಲ ಭೂಕಂಪ ಸಂಭವಿಸಿದೆ. ಎನ್‌ಸಿಎಸ್ ಪ್ರಕಾರ ಅದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.1 ಎಂದು ಅಳೆಯಲಾಗಿದೆ. ಇಂದು ಬೆಳಿಗ್ಗೆ 6:10ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ನೆಲದಿಂದ 91 ಕಿಲೋಮೀಟರ್ ಆಳದಲ್ಲಿದೆ ಎಂದು ಗುರುತಿಸಲಾಗಿದೆ. ಭೂಕಂಪ ಸಂಭವಿಸಿದಾಗ ಜನರು ತಮ್ಮ ಮನೆಗಳಲ್ಲಿ ಮಲಗಿದ್ದರು. ಎಚ್ಚರವಾಗಿದ್ದವರಿಗೆ ಬಲವಾದ ಕಂಪನದ ಅನುಭವವಾಗಿದೆ. ಭಯಗೊಂಡ ಅನೇಕರು ತಮ್ಮ ಮನೆಗಳಿಂದ ಹೊರ ಓಡಿ ಬಂದಿದ್ದಾರೆ.
ಎನ್‌ಸಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ''25/02/2025 ರಂದು ಮಂಗಳವಾರ ಬೆಳಿಗ್ಗೆ 6:10:25ಕ್ಕೆ ಪಶ್ಚಿಮ ಬಂಗಾಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ 5.1 ಆಗಿತ್ತು. ಇದರ ಕೇಂದ್ರ 19.52 ಉತ್ತರ ಅಕ್ಷಾಂಶ ಮತ್ತು 88.55 ಪೂರ್ವ ರೇಖಾಂಶದಲ್ಲಿತ್ತು. ಬಂಗಾಳಕೊಲ್ಲಿಯಲ್ಲಿ 91 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ'' ಎಂದು ಹಂಚಿಕೊಳ್ಳಲಾಗಿದೆ.

ಭಯಭೀತರಾದ ಜನ
ಭೂಕಂಪನದಿಂದ ಭಯಭೀತರಾದ ಜನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ''ಇಂದು ಬೆಳಗ್ಗೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಪ್ರಬಲ ಭೂಕಂಪನದ ಅನುಭವವಾಯಿತು. ನಾವು ಭಯಭೀತರಾಗಿ ಮನೆಗಳಿಂದ ಹೊರಬಂದೆವು'' ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.
''ನನಗೆ ನಿದ್ರೆಯಿಂದ ಎಚ್ಚರಗೊಂಡು ಹಾಸಿಗೆಯ ಮೇಲೆ ಕುಳಿತಿದ್ದಾಗ ತಲೆ ಸುತ್ತುತ್ತಿರುವಂತೆ ಅನಿಸಿತು, ಮೊದಲಿಗೆ ತನಗೆ ತಲೆ ಸುತ್ತುತ್ತಿರಬಹುದು ಎಂದು ನಾನು ಭಾವಿಸಿದೆ. ಆದರೆ ಭೂಕಂಪದ ಶಬ್ದ ಕೇಳಿದಾಗ ಮನೆಯಿಂದ ಹೊರಗೆ ಓಡಿಬಂದೆ' ಎಂದು ಸ್ಥಳೀಯ ನಿವಾಸಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಸೋಮವಾರ ದೆಹಲಿ-ಎನ್‌ಸಿಆರ್‌ನಲ್ಲಿ ಭೂಕಂಪನದ ಅನುಭವವಾಗಿತ್ತು. ಕಳೆದ ಏಳು ದಿನಗಳಲ್ಲಿ ದೆಹಲಿಯಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದೆ. ಹೀಗಾಗಿ ಈ ಪ್ರದೇಶ ಭೂಕಂಪ ಅಪಾಯದ ಕೆಂಪು ವಲಯದಲ್ಲಿದೆ. ಜನರು ಭಯಭೀತರಾಗದಂತೆ ಮನವಿ ಮಾಡಲಾಗಿದೆ.
ಬಂಗಾಳದ ಜಲ್ಪೈಗುರಿಯ ಪಶ್ಚಿಮ ಭಾಗಗಳು ಮತ್ತು ಕೂಚ್ ಬೆಹಾರ್‌ನ ಉತ್ತರ ಜಿಲ್ಲೆಗಳು ಭೂಕಂಪನ ವಲಯ V ರಲ್ಲಿವೆ. ಈ ಎರಡು ಜಿಲ್ಲೆಗಳ ಉಳಿದ ಭಾಗಗಳು ಡಾರ್ಜಿಲಿಂಗ್, ಉತ್ತರ ದಿನಾಜ್‌ಪುರ, ದಕ್ಷಿಣ ದಿನಾಜ್‌ಪುರ, ಮಾಲ್ಡಾ, 24 ಉತ್ತರ ಪರಗಣಗಳು ಮತ್ತು 24 ದಕ್ಷಿಣ ಪರಗಣಗಳು ಜಿಲ್ಲೆಗಳೊಂದಿಗೆ ವಲಯ IV ರಲ್ಲಿ ಬರುತ್ತವೆ.












Click it and Unblock the Notifications