ಸಿಕ್ಕಿಂ ಹಿಮಪಾತದಲ್ಲಿ 7 ಪ್ರವಾಸಿಗರ ಸಾವು, ಸೇನೆಯಿಂದ ಮುಂದುವರೆದ ರಕ್ಷಣಾ ಕಾರ್ಯಾಚರಣೆ
ಗುವಾಹಟಿ, ಏಪ್ರಿಲ್. 04: ಮಂಗಳವಾರ ಮಧ್ಯಾಹ್ನ ಸಿಕ್ಕಿಂನ ಗ್ಯಾಂಗ್ಟಾಕ್ - ನಾಥು ಲಾ ರಸ್ತೆಯಲ್ಲಿ ಹಿಮಕುಸಿತ ಸಂಭವಿಸಿದೆ. ದುರಂತ ಘಟನೆಯಲ್ಲಿ ಕನಿಷ್ಠ ಏಳು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಒಂದು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.
ಹಿಮ ಕುಸಿತದಲ್ಲಿ ಅಂದಾಜು 20 ರಿಂದ 30 ಪ್ರವಾಸಿಗರು, ಐದು, ಆರು ವಾಹನಗಳೊಂದಿಗೆ ಹಿಮದ ಅಡಿಯಲ್ಲಿ ಸಿಲುಕಿರುವ ಶಂಕೆಯಿದೆ ಎಂದು ಭಾರತೀಯ ಸೇನೆಯು ಮಾಹಿತಿ ನೀಡಿದೆ. ಭಾರೀ ಹಿಮಪಾತದಲ್ಲಿ ಒಂದು ಮಗು ಮತ್ತು ಒಬ್ಬ ಮಹಿಳೆ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ.

"ಆಳವಾದ ಕಣಿವೆಯಿಂದ ಸಂಜೆ 4 ಗಂಟೆಯವರೆಗೆ 23 ಪ್ರವಾಸಿಗರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಭಾರತೀಯ ಸೇನೆಯ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ದುರದೃಷ್ಟವಶಾತ್, ಏಳು ಜನರು ಬಲಿಯಾಗಿದ್ದಾರೆ" ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ, 14 ಜನರನ್ನು ರಕ್ಷಿಸಲಾಗಿತ್ತು. ಅದರಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು, ಉಳಿದ ಏಳು ಮಂದಿಗೆ ಪ್ರಥಮ ಚಿಕಿತ್ಸೆ ನೀಡಿ ವಾಪಸ್ ಕಳುಹಿಸಲಾಗಿತ್ತು.
#WATCH | Sikkim: Army, State Disaster Management Team and Police carry out search and rescue mission at Gangtok-Natu La road near Milestone 15 where an avalanche struck, claiming seven lives.
— ANI (@ANI) April 4, 2023
(Video: Indian Army) pic.twitter.com/7ZMDlH5SeP
ಸುಮಾರು 5 ರಿಂದ 6 ವಾಹನಗಳು ಮತ್ತು 20 ರಿಂದ 30 ಪ್ರವಾಸಿಗರು ನಾಥು ಲಾಗೆ ಹೋಗುವ ದಾರಿಯಲ್ಲಿ ಹಿಮದ ಅಡಿಯಲ್ಲಿ ಸಿಲುಕಿರುವ ಭಯವಿದೆ ಎಂದು ಸೇನೆ ಹೇಳಿದೆ. ಕನಿಷ್ಠ 150 ಪ್ರವಾಸಿಗರು ಗ್ಯಾಂಗ್‌ಟಾಕ್‌ನಿಂದ ನಾಥುಲಾವನ್ನು ಸಂಪರ್ಕಿಸುವ ಜವಾಹರಲಾಲ್ ನೆಹರು ರಸ್ತೆಯ 15 ನೇ ಮೈಲಿನಲ್ಲಿ ಪ್ರಯಾಣಿಸುವಾಗ ಹಿಮಕುಸಿತ ಸಂಭವಿಸಿದೆ.
ನಾಥು ಲಾ ಪಾಸ್, ಸಮುದ್ರ ಮಟ್ಟದಿಂದ 4,310 ಮೀಟರ್ (14,140 ಅಡಿ) ಎತ್ತರದಲ್ಲಿದೆ. ಇದು ಚೀನಾದ ಗಡಿಯಲ್ಲಿದ್ದು, ಪ್ರಮುಖ ಪ್ರವಾಸಿ ತಾಣವಾಗಿದೆ. ಇನ್ನು, ಘಟನೆಯಿಂದ ಸಂಚಾರ ನಿರ್ಬಂಧಿಸಲಾಗಿದ್ದ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಸೇನೆ, ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಪೊಲೀಸರು ಪ್ರಸ್ತುತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

ಹಿಮದ ಅಡಿಯಲ್ಲಿ ಸಿಲುಕಿ 1.5 ಗಂಟೆಗಳಾದರೂ ಸಾವಿನೊಂದಿಗೆ ಹೋರಾಟ ನಡೆಸುತ್ತಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಸೇನಾ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ಆಕೆಗೆ ಗ್ಯಾಂಗ್‌ಟಾಕ್‌ನ ಎಸ್‌ಟಿಎನ್‌ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಿಂದ ಬರುತ್ತಿರುವ ವಿಡಿಯೋಗಳು ದುರಂತದ ಪ್ರಮಾಣವನ್ನು ತೋರಿಸಿವೆ. ಹತ್ತಾರು ಮಂದಿ ಸೈನಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಹಿಮದಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ.
ಇನ್ನು, ಹಿಮದ ಕಾರಣ ರಸ್ತೆಯಲ್ಲಿ ಸಿಲುಕಿದ್ದ ಸುಮಾರು 350 ಪ್ರವಾಸಿಗರು ಮತ್ತು 80 ವಾಹನಗಳನ್ನು ರಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.












Click it and Unblock the Notifications