CM Siddaramaiah: ದೆಹಲಿಯಲ್ಲಿ ಸಭೆ ಸೇರಿದ ಕರ್ನಾಟಕದ ರಾಜಕೀಯ ನಾಯಕರು: ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟ ಸಿದ್ದರಾಮಯ್ಯ
ದೆಹಲಿ, ಜೂನ್ 28: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸಂಸದರೊಂದಿಗೆ ನವದೆಹಲಿಯಲ್ಲಿ ಶುಕ್ರವಾರ ಸಭೆ ನಡೆಸಿದರು. ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ, ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಕೇಂದ್ರ ಸರ್ಕಾರದಲ್ಲಿ ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳು ಹಾಗೂ ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾಗಿರುವ ಕೆಲಸಗಳ ಕುರಿತು ಸಭೆ ನಡೆಸಿ ಚರ್ಚಿಸಲಾಯಿತು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜಕೀಯ ಉದ್ದೇಶವಿಲ್ಲದ, ಅದಕ್ಕೂ ಮೀರಿ ನಮ್ಮ ರಾಜ್ಯದ ಹಿತಾಸಕ್ತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರು ಸದನದ ಒಳಗೆ ಹಾಗೂ ಹೊರಗೆ ಒಕ್ಕೊರಲಿನಿಂದ ಸೌಹಾರ್ದಯುತವಾಗಿ ದನಿ ಎತ್ತುವ ಅಗತ್ಯವನ್ನು ಹೇಳಿದ್ದೇವೆ. ನಾವು ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿರಬಹುದು. ಆದರೆ ಕರ್ನಾಟಕದ ಹಿತಾಸಕ್ತಿಯ ವಿಷಯ ಬಂದಾಗ ನಾವೆಲ್ಲರೂ ಒಂದೇ ವೇದಿಕೆಯವರು. ಈ ವಿಷಯದಲ್ಲಿ ನಮ್ಮ ಹಿಂದಿನವರೂ ಸಹ ಮಾದರಿಗಳಾಗಿದ್ದಾರೆ. ನೆಲ, ಜಲ, ಸಂಪನ್ಮೂಲ, ಭಾಷೆ, ಸಂಸ್ಕೃತಿ, ಐಡೆಂಟಿಟಿ ಇತ್ಯಾದಿ ವಿಚಾರಗಳಿಗೆ ಬಂದಾಗ ನಮಗೆ ಪಕ್ಷಗಳಿಲ್ಲ. ಕರ್ನಾಟಕ ಹಿತಾಸಕ್ತಿಯ ರಕ್ಷಣೆ ನಮ್ಮ ಆಧ್ಯತೆ.
ಕರ್ನಾಟಕ ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾದ ಕೆಲಸಗಳು, ಕೇಂದ್ರದಲ್ಲಿ ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿಸಿಕೊಡುವುದು ಹಾಗೂ ಕೆಲವು policy matter ಗಳ ಕುರಿತು ಅವರೊಂದಿಗೆ ಚರ್ಚಿಸಲಾಯಿತು.
ಬೆಂಗಳೂರು ಮತ್ತು ಸುತ್ತಮುತ್ತಲ ಜನ ವಸತಿ ಪ್ರದೇಶಗಳಿಗೆ ನಿರಾತಂಕವಾಗಿ ಕುಡಿಯುವ ನೀರನ್ನು ಪೂರೈಸಲು ಹಾಗೂ ಆಣೆಕಟ್ಟೆಯಿಂದ ಹರಿಯುವ ನೀರಿನಿಂದ ವಿದ್ಯುತ್ ಉತ್ಪಾದಿಸಲು ರಾಜ್ಯ ಸರ್ಕಾರವು 67 ಟಿಎಂಸಿ ಸಾಮರ್ಥ್ಯದ ಮೇಕೆದಾಟು ಯೋಜನೆಯನ್ನು ರೂಪಿಸಿದೆ. ಈ ಪ್ರಸ್ತಾವನೆಯು 2018 ರಿಂದ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಈ ಯೋಜನೆಗೆ ಹಲವು ಹಂತಗಳ ಅನುಮತಿ ಅಗತ್ಯವಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಮಂತ್ರಾಲಯವು environmental clearance ಅನ್ನು ಶೀಘ್ರವಾಗಿ ಮಾಡಿಕೊಡುವಂತೆ ಒತ್ತಾಯಿಸುವುದು.

ಭದ್ರಾ ಯೋಜನೆ ಮೂಲಕ 2.25 ಲಕ್ಷ ಹೆಕ್ಟೇರ್ ಎತ್ತುವರಿ ನೀರಾವರಿ ಮೂಲಕ ವ್ಯವಸಾಯಕ್ಕಾಗಿ / ಕುಡಿಯುವ ನೀರಿಗಾಗಿ ನೀರನ್ನು ಒದಗಿಸುವ ಪ್ರಸ್ತಾವನೆಯು 2020 ರಿಂದ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಇದಕ್ಕಾಗಿ 2023-24ರ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ರೂ.5,300 ಕೋಟಿ ಅನುದಾನವನ್ನು ಘೋಷಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಅನುದಾನವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವುದಿಲ್ಲ. ಈ ಅನುದಾನವನ್ನು ಬಿಡುಗಡೆ ಮಾಡಿಸಲು ನೆರವಾಗಬೇಕು. ಜೊತೆಗೆ, ಈ ಯೋಜನೆಯನ್ನು ಕೂಡಲೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರುವುದು.
ಕಳಸಾ ಬಂಡೂರಿ ನಾಲಾ ಯೋಜನೆಗೆ ಮಹಾದಾಯಿ ಜಲ ವಿವಾದ ನ್ಯಾಯಮಂಡಳಿ ಅವಾರ್ಡ್ 2018 ರಲ್ಲಿ ಘೋಷಿಸಲಾಗಿತ್ತು. ರಾಜ್ಯ ಸರ್ಕಾರದ ವತಿಯಿಂದ ವಿಸ್ತೃತ ಯೋಜನಾ ವರದಿಯನ್ನು (DPR) ಈಗಾಗಲೆ ಒದಗಿಸಲಾಗಿದೆ. ಅದನ್ನು ಅನುಮೋದಿಸಲು ದಿನಾಂಕ: 30.01.2024 ರಂದು ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ ಸಮಿತಿ ಸಭೆ ಸೇರಿ ದಿನಾಂಕ: 08.01.2024 ರಂದು ವರದಿಯನ್ನು ಸಲ್ಲಿಸಿದೆ. ಈ ವಿಷಯವನ್ನು 77 ನೆ ಸಭೆಯ ಮುಂದೆ ಮಂಡಿಸಲಾಗಿತ್ತು. ಆದರೆ ಸಮಿತಿಯು ಈ ಕುರಿತು ತೀರ್ಮಾನ ಮಾಡಲು ಸಹ ಈ ವಿಷಯವನ್ನು ವಿನಾ ಕಾರಣ ಮುಂದೂಡಲಾಗಿದೆ [ಡೆಫರ್]. ಕಿತ್ತೂರು ಕರ್ನಾಟಕದ ಒಣ ಪ್ರದೇಶಗಳ ಜನರಿಗೆ ನೀರನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಆದ್ದರಿಂದ ಅತಿ ಶೀಘ್ರವಾಗಿ ತೊಡಕುಗಳು ನಿವಾರಣೆಯಾಗುವಂತೆ ನೋಡಿಕೊಳ್ಳುವುದು.












Click it and Unblock the Notifications