Shirdi Sai Baba: ಮೇ 1 ರಿಂದ ಶಿರಡಿ ಸಾಯಿ ಬಾಬಾ ದೇವಸ್ಥಾನ ಬಂದ್: ಸ್ಪಷ್ಟನೆ ಕೊಟ್ಟ ದೇವಸ್ಥಾನ ಆಡಳಿತ ಮಂಡಳಿ
ಮಹಾರಾಷ್ಟ್ರದ ಶಿರಡಿಯಲ್ಲಿ ವಿಶ್ವ ವಿಖ್ಯಾತ ಧಾರ್ಮಿಕ ಪ್ರವಾಸೋದ್ಯಮ ತಾಣ, ಶಿರಡಿ ಸಾಯಿಬಾಬಾ ದೇವಸ್ಥಾನವನ್ನು ಮೇ 1 ರಿಂದ ಅನಿರ್ದಿಷ್ಟಾವಧಿಯವರೆಗೆ ಮುಚ್ಚಲಾಗುವುದು ಎನ್ನು ವದಂತಿಗಳು ಹರಿದಾಡುತ್ತಿವೆ. ಹಲವು ಪತ್ರಿಕೆಗಳು, ಜಾಲತಾಣದಲ್ಲಿ ಈ ಸುದ್ದಿ ಹರಿದಾಡುತ್ತಿದ್ದು ಸಾಕಷ್ಟು ವೈರಲ್ ಆಗಿದೆ.
ದೇಗುಲದ ಭದ್ರತೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನಿಯೋಜಿಸಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದ್ದನ್ನು ವಿರೋಧಿಸಿ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತಿದೆ ಎಂದು ಹೇಳಲಾಗಿತ್ತು. ದೇವಾಲಯದ ಟ್ರಸ್ಟ್ ಬಂದ್‌ಗೆ ಕರೆನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಆದರೆ, ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದೆ. ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (SSST) ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದೆ. "ಎಲ್ಲಾ ಆರತಿಗಳು ಮತ್ತು ಎಲ್ಲಾ ಧಾರ್ಮಿಕ ಸಂಪ್ರದಾಯಗಳು ಸೋಮವಾರ 01 ನೇ ಮೇ 2023 ರಂದು ಯಥಾಪ್ರಕಾರ ಮುಂದುವರಿಯುತ್ತದೆ. ಸಂಸ್ಥಾನದ ಎಲ್ಲಾ ಸೌಲಭ್ಯಗಳಾದ ಶ್ರೀ ಸಾಯಿ ಪ್ರಸಾದಾಲಯ, ಎಲ್ಲಾ ಭಕ್ತ ನಿವಾಸ ಸ್ಥಳಗಳು ಮತ್ತು ಆಸ್ಪತ್ರೆಗಳು ಇತ್ಯಾದಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಈ ಮಾಹಿತಿಯನ್ನು ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜಾಧವ್ ಅವರು ಒದಗಿಸಿದ್ದಾರೆ" ಎಂದು ಪ್ರಕಟಿಸಿದೆ.
ಪ್ರತಿವರ್ಷ ಲಕ್ಷಾಂತರ ಭಕ್ತರ ಭೇಟಿ
ಮಹಾರಾಷ್ಟ್ರದ ಅಹಮದ್‌ನಗರದಲ್ಲಿರುವ ಸಣ್ಣ ಪಟ್ಟಣದಲ್ಲಿರುವ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ದೇಶದ ಮೂಲೆ ಮೂಲೆಗಳಿಂದ ಸಾಯಿ ಬಾಬಾ ದರ್ಶನ ಮಾಡಲು ಜನ ಇಲ್ಲಿಗೆ ಧಾವಿಸುತ್ತಾರೆ. ತಿಂಗಳು, ವಾರಗಳ ಮೊದಲೇ ವಿಮಾನ, ಬಸ್, ರೈಲು ಟಿಕೆಟ್ ಬುಕ್ ಮಾಡಿರುತ್ತಾರೆ, ಮೇ 1ರಿಂದ ದೇವಸ್ಥಾನ ಮುಚ್ಚುತ್ತಾರೆ ಎನ್ನುವ ಸುದ್ದಿ ಭಕ್ತರಲ್ಲಿ ಆತಂಕವನ್ನು ಉಂಟು ಮಾಡಿತ್ತು ಸದ್ಯ ದೇವಸ್ಥಾನ ಆಡಳಿತ ಮಂಡಳಿ ಭಕ್ತರ ಆತಂಕವನ್ನು ದೂರಾಗಿಸಿದೆ.
ಪ್ರಾಥಮಿಕವಾಗಿ ಕೈಗಾರಿಕಾ ಸ್ಥಾಪನೆಗಳು, ಮೆಟ್ರೋ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳನ್ನು ರಕ್ಷಿಸುವ ಪಡೆಗಳಾದ ಸಿಐಎಸ್‌ಎಫ್ ಪಡೆಯನ್ನು ದೇವಸ್ಥಾನದ ಭದ್ರತೆಗೆ ನಿಯೋಜನೆ ಮಾಡುವುದನ್ನು ವಿರೋಧಿಸಿ ಆಡಳಿತ ಮಂಡಳಿ ಪ್ರತಿಭಟನೆಗೆ ಮುಂದಾಗಿತ್ತು ಎನ್ನಲಾಗಿದೆ.
ಒಂದು ವೇಳೆ ದೇವಸ್ಥಾನದ ಬಾಗಿಲು ಮುಚ್ಚಿದ್ದರೆ ಸಾವಿರಾರು ಜನರ ಮೇಲೆ ಪರಿಣಾಮ ಬೀರುತ್ತಿತ್ತು. ದೇವಸ್ಥಾನವನ್ನೇ ನಂಬಿಕೊಂಡಿರುವ ಹೋಟೆಲ್, ಅಂಗಡಿಗಳು, ವಾಹನಗಳು ಮುಂತಾದ ವ್ಯವಹಾರಗಳ ಮೇಲೆ ಹೊಡೆತ ಬೀಳುತ್ತಿತ್ತು.












Click it and Unblock the Notifications