
ಗುಜರಾತ್‌ನಲ್ಲಿ 750 ಕೋಟಿ ನಗದು, ಚಿನ್ನ, ಡ್ರಗ್ಸ್ ವಶ: ಚುನಾವಣಾ ಆಯೋಗ
ಗಾಂಧಿನಗರ, ನವೆಂಬರ್ 30: ವಿಧಾನಸಭಾ ಚುನಾವಣೆ ನಡೆಯುತ್ತಿರುವ ಗುಜರಾತ್ ರಾಜ್ಯದಲ್ಲಿ 750 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಮತ್ತು ಮಾದಕವಸ್ತುಗಳ ದಾಖಲೆಯನ್ನು ಭಾರತೀಯ ಚುನಾವಣಾ ಆಯೋಗ ವಶಪಡಿಸಿಕೊಂಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬುಧವಾರ ಹೇಳಿದ್ದಾರೆ.
"ಇಲ್ಲಿಯವರೆಗೆ, ನಾವು ಗುಜರಾತ್‌ನಲ್ಲಿ 750 ಕೋಟಿ ರೂಪಾಯಿ ಮೌಲ್ಯದ ನಗದು, ಆಭರಣ ಮತ್ತು ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ" ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಗುಜರಾತ್ ಚುನಾವಣೆ: ಸೂರತ್ನಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ, ಆಪ್ಗೆ ಬೆಂಬಲ
ಗುರುವಾರ ಗುಜರಾತ್‌ನಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, 89 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ 89 ಸ್ಥಾನಗಳಲ್ಲಿ 2.39 ಕೋಟಿ ಮತದಾರರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
2017ರ ಚುನಾವಣೆಯಲ್ಲಿ 27 ಕೋಟಿ ಮೌಲ್ಯದ ವಸ್ತು ವಶ:
ಕಳೆದ 2017ರಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 27 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಲ್ಲಿಯವರೆಗೆ ಈ ವಸೂಲಾತಿ 750 ಕೋಟಿ ರೂಪಾಯಿ ತಲುಪಿದೆ ಎಂದು ಕುಮಾರ್ ಹೇಳಿದ್ದಾರೆ. 27 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ, 15 ಕೋಟಿ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ, 60 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗದ ಕಟ್ಟುನಿಟ್ಟಿನಿಂದಾಗಿ ವಶಪಡಿಸಿಕೊಳ್ಳುವಿಕೆ ಹೆಚ್ಚಾಗಿದೆ ಎಂದು ಕುಮಾರ್ ಹೇಳಿದರು. ಇಂದಿಗೂ ವಡೋದರಾದಲ್ಲಿ ದೊಡ್ಡ ಜಪ್ತಿ ನಡೆಯುತ್ತಿದೆ. ಸುಮಾರು 450 ಕೋಟಿ ವಶವಾಗುವ ಸಾಧ್ಯತೆ ಇದೆ. ಗುಜರಾತ್‌ನಲ್ಲಿ 171 ಕೋಟಿ ರೂಪಾಯಿ ಮೌಲ್ಯದ ಉಚಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕುಮಾರ್ ಹೇಳಿದರು. ಡಿಆರ್ಐ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಗುಜರಾತ್ ಎಟಿಎಸ್ ಮತ್ತು ಪೋಲಿಸ್ ಎಲ್ಲರೂ ಬಹಳ ಶ್ರದ್ಧೆಯಿಂದ ಕೆಲಸ ಮಾಡಿ ದ್ದಾರೆ ಎಂದು ಅವರು ಹೇಳಿದರು.
ಗುಜರಾತ್ ನೆರೆಹೊರೆಯೆ ಗಡಿ ಬಂದ್:
ಗುಜರಾತ್‌ನ ನೆರೆಯ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ದಮನ್-ದಿಯು ತಮ್ಮ ಗಡಿಗಳನ್ನು ಬಂದ್ ಮಾಡಲಾಗಿದೆ. ಎಲ್ಲಾ ರೀತಿಯ ಆಮಿಷಗಳನ್ನು ತಡೆಯುವುದು ಮತ್ತು ಮತದಾರರನ್ನು ಭ್ರಷ್ಟಗೊಳಿಸುವ ಪ್ರಯತ್ನಗಳನ್ನು ನಿಲ್ಲಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಕುಮಾರ್ ಹೇಳಿದರು. ಈ ಹಿಂದಿನ ಉಪಚುನಾವಣೆಯಲ್ಲಿ ಮತದಾರರಿಗೆ ಹಣ ನೀಡಲಾಗುತ್ತಿದೆ ಎಂದು ಹಲವೆಡೆ ದೂರುಗಳು ಬಂದಿವೆ. ಈ ಕೆಟ್ಟ ಅಭ್ಯಾಸವನ್ನು ನಾವು ಸಂಪೂರ್ಣವಾಗಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದೇವೆ. ಆಯೋಗವು ಗುಜರಾತ್ ಮತ್ತು ಹಿಮಾಚಲವನ್ನು ಪರಿಶೀಲಿಸಲು ಹೋದಾಗ, ನಮಗೆ ಪ್ರಚೋದನೆ ರಹಿತ ಚುನಾವಣೆಗಳು ಬೇಕು ಎಂದು ಎಲ್ಲಾ ಏಜೆನ್ಸಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿತು ಎಂದು ಸಿಇಸಿ ಹೇಳಿದೆ.

ಹಿಮಾಚಲದಲ್ಲಿ 57 ಕೋಟಿ ಹಣ ವಶಕ್ಕೆ:
''ನಗದು, ಮದ್ಯ, ಡ್ರಗ್ಸ್ ಮತ್ತು ಉಚಿತ ವಸ್ತುಗಳನ್ನು ವಿತರಿಸಬಾರದು ಎಂದು ನಾವು ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಿದ್ದೇವೆ. ಪ್ರತಿಯೊಬ್ಬರೂ ಉತ್ತಮ ಕೆಲಸ ಮಾಡಿದ್ದಾರೆ. ಹಿಮಾಚಲದಲ್ಲಿ 57 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ, ಇದು 2017 ರ ಹಿಮಾಚಲ ಚುನಾವಣೆಯಲ್ಲಿ ವಶಪಡಿಸಿಕೊಂಡ ಹಣಕ್ಕಿಂತ 7 ಪಟ್ಟು ಹೆಚ್ಚು, "ಎಂದು ಸಿಇಸಿ ಮತ್ತಷ್ಟು ಹೇಳಿದರು.
ಗುಜರಾತ್‌ನಲ್ಲಿ ನಾಳೆ ಮೊದಲ ಹಂತದ ಮತದಾನ:
ಗುಜರಾತ್‌ನಲ್ಲಿ ಒಟ್ಟು ಎರಡು ಹಂತಗಳಲ್ಲಿ 182 ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 15 ನಾಮಪತ್ರ ಪರಿಶೀಲನೆ, ನವೆಂಬರ್ 17 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿತ್ತು. ಡಿಸೆಂಬರ್ 1ರಂದು ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಡಿಸೆಂಬರ್ 5ರಂದು ಎರಡನೇ ಹಂತದ ಮತದಾನ:
ಗುಜರಾತ್‌ನ 93 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 18ರಂದು ನಾಮಪತ್ರ ಪರಿಶೀಲನೆ, ನವೆಂಬರ್ 21ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 5ರಂದು ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂತಿಮವಾಗಿ ಡಿಸೆಂಬರ್ 8ರಂದು 182 ವಿಇಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.