ಲೈಂಗಿಕ ಸಂಪರ್ಕ ಆಮಿಷ-ಒತ್ತಾಯಕ್ಕೆ ಹೊಸ ಕಾಯ್ದೆಯಡಿ ಶಿಕ್ಷೆ
ನವದೆಹಲಿ, ಸೆಪ್ಟೆಂಬರ್ 9: ಯಾವುದೇ ಕೆಲಸ ಮಾಡಿಸಿಕೊಳ್ಳಲು ಲೈಂಗಿಕ ಸಂಪರ್ಕದ ಆಮಿಷ ಒಡ್ಡುವುದು ಹಾಗೂ ಕೆಲಸ ಮಾಡಿಕೊಡಲು ಲೈಂಗಿಕ ಸಂಪರ್ಕಕ್ಕಾಗಿ ಒತ್ತಾಯಿಸುವುದನ್ನು ಲಂಚವೆಂದೇ ಪರಿಗಣಿಸಲಾಗುತ್ತದೆ. ಹೊಸದಾಗಿ ಜಾರಿಗೆ ಬಂದಿರುವ ಭ್ರಷ್ಟಾಚಾರ ವಿರೋಧಿ ಕಾನೂನಿನಲ್ಲಿ ಈ ಅಪರಾಧಕ್ಕೆ ಆರೋಪಿಗೆ ಏಳು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ.
ಸರಕಾರದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಭಾನುವಾರ ತಿಳಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ (ತಿದ್ದುಪಡಿ) ಕಾಯ್ದೆ 2018ರಲ್ಲಿ ಈ ಹೊಸ ಅಂಶ ಸೇರಿಸಲಾಗಿದೆ. ಯಾವುದೇ ಕಾನೂಬಾಹಿರ ಅನುಕೂಲ ಎಂದು ಪರಿಗಣಿಸುವ ಲಂಚದಲ್ಲಿ ಕೆಲವು ಅಂಶಗಳನ್ನು ಸೇರಿಸಲಾಗಿದೆ. ಕಾನೂನುಬದ್ಧವಾದ ಹಣ ಪಾವತಿ ಹೊರತುಪಡಿಸಿ ಪಡೆಯುವ ದುಬಾರಿ ಕ್ಲಬ್ ಸದಸ್ಯತ್ವ, ಆತಿಥ್ಯ ಇತ್ಯಾದಿ ಯಾವುದೇ ಅನುಕೂಲಗಳನ್ನು ಲಂಚ ಎಂದೇ ಪರಿಗಣಿಸಲಾಗುತ್ತದೆ.
ಯಾರನ್ನಾದರೂ ತೃಪ್ತಿ ಪಡಿಸಲು ನೀಡುವಂಥದ್ದು ವಸ್ತು ರೂಪದಲ್ಲಿ ಇರುವಂಥದ್ದು ಅಥವಾ ಹಣದ ಪ್ರಮಾಣದ ಅಂದಾಜು ಮಾಡುವಂಥದ್ದು ಮಾತ್ರವಲ್ಲದೇ ಬೇರೆ ಅನುಕೂಲಗಳನ್ನು ಲಂಚ ಎಂಬುದಾಗಿ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರಿಂದ ಅಂಕಿತ ಬಿದ್ದ ಮೇಲೆ ಜುಲೈ ಕೊನೆ ಭಾಗದಲ್ಲಿ ಕೇಂದ್ರ ಸರಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ.

ಮೂವತ್ತು ವರ್ಷಗಳ ಹಿಂದಿನ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ಈಗ ತಿದ್ದುಪಡಿ ತರಲಾಗಿದೆ. ಇದರಲ್ಲಿ ಸರಕಾರಿ ನೌಕರರು ಪಡೆಯುವ ಲಂಚದ ಬಗ್ಗೆ ವಿವರಣೆಗಳಿವೆ. ಹೊಸದಾಗಿ ತಿದ್ದುಪಡಿಯಾದ ಕಾನೂನಿನ ಪ್ರಕಾರ, ಲೈಂಗಿಕ ಸಂಪರ್ಕದ ಆಮಿಷ ಒಡ್ಡುವುದು ಹಾಗೂ ಬೇಡಿಕೆ ಇಡುವುದು ಕಂಡುಬಂದಲ್ಲಿ ಸಿಬಿಐನಂಥ ತನಿಖಾ ಸಂಸ್ಥೆಯಿಂದ ಪ್ರಕರಣ ದಾಖಲಿಸಬಹುದು.
ಇದರ ಜತೆಗೆ ದುಬಾರಿ ಕ್ಲಬ್ ಸದಸ್ಯತ್ವ ಮತ್ತು ಆತಿಥ್ಯ ಅಥವಾ ಹತ್ತಿರದ ಸ್ನೇಹಿತರು ಅಥವಾ ಸಂಬಂಧಿಕರಿಗೆ ಉದ್ಯೋಗ ಒದಗಿಸುವುದು ಇತ್ಯಾದಿ ಸಂದರ್ಭದಲ್ಲೂ ಪ್ರಕರಣ ದಾಖಲು ಮಾಡಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಲಂಚ ಕೊಡುವವರಿಗೆ ಸಹ ಗರಿಷ್ಠವಾಗಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ಇದಕ್ಕೂ ಮುನ್ನ ಲಂಚ ನೀಡುವವರಿಗೆ ಯಾವುದೇ ಶಾಸನಾತ್ಮಕ ಕಾನೂನು ಅನ್ವಯ ಆಗುತ್ತಿರಲಿಲ್ಲ.
ಈ ಬಗ್ಗೆ ಸುಪ್ರೀಂ ಕೋರ್ಟ್ ನ ವಕೀಲರೊಬ್ಬರು ಮಾತನಾಡಿ, ಯಾವುದೇ ಕಾನೂನು ಬಾಹಿರ ಅನುಕೂಲ ಅಂದರೆ ದುಬಾರಿ ಕೊಡುಗೆ, ಪುಕ್ಕಟೆ ಕೊಡುಗೆ, ಪುಕ್ಕಟೆ ರಜಾ ಪ್ರವಾಸ ಅಥವಾ ವಿಮಾನದ ಟಿಕೆಟ್ ಗೆ ಪಾವತಿ ಮಾಡುವುದು ಸಹ ಹಣದ ಹೊರತಾದ ಲಂಚದ ವ್ಯಾಪ್ತಿಯೊಳಗೆ ಬರುತ್ತವೆ ಎಂದಿದ್ದಾರೆ.
ಯಾವುದೇ ವಸ್ತು-ಸೇವೆಗೆ ಹಣ ಪಾವತಿಸುವುದು, ಸ್ಥಿರ ಅಥವಾ ಚರಾಸ್ತಿ ಖರೀದಿಗಾಗಿ ಮಾಡಿದ ಮುಂಗಡ ಹಣ ಪಾವತಿ, ಕ್ಲಬ್ ಸದಸ್ಯತ್ವ ನೋಂದಣಿ ಮುಂತಾದವುಗಳ ಜತೆಗೆ ಲೈಂಗಿಕ ಸಂಪರ್ಕವನ್ನು ಸಹ ಸೇರಿಸಲಾಗಿದೆ ಎನ್ನುತ್ತಾರೆ.












Click it and Unblock the Notifications