Wrestlers protest: ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು, ದೆಹಲಿ ಪೊಲೀಸರ ನಡುವೆ ಮಾರಾಮಾರಿ
ನವದೆಹಲಿ, ಮೇ. 04: ಬುಧವಾರ ತಡರಾತ್ರಿ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಮತ್ತು ದೆಹಲಿ ಪೊಲೀಸರ ನಡುವೆ ಮಾರಾಮಾರಿ ನಡೆದಿದೆ. ಪೊಲೀಸ್ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿ ನಿಂದಿಸಿದ್ದಾರೆ ಎಂದು ಪ್ರತಿಭಟನಾನಿರತ ಕ್ರೀಡಾಪಟುಗಳು ಆರೋಪಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದವರು ದೆಹಲಿ ಪೊಲೀಸ್ ಸಿಬ್ಬಂದಿ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ, ಆದರೆ ದಾಳಿಕೋರರ ಗುರುತಿನ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ರಾಷ್ಟ್ರ ರಾಜಧಾನಿಯ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ನಲ್ಲಿ ಜನರು ಹಿಂಸಾಚಾರಕ್ಕೆ ಸಾಕ್ಷಿಯಾಗಿರುವುದು ಇದೇ ಮೊದಲು. ಸ್ಥಳದಲ್ಲಿ ಕುಸ್ತಿಪಟುಗಳು ದೆಹಲಿ ಪೊಲೀಸರ ಸಮವಸ್ತ್ರದ ಸದಸ್ಯರೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದಾಗಿದೆ.

ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಕುಸ್ತಿಪಟುಗಳು ನ್ಯಾಯಕ್ಕಾಗಿ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ 11 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಸ್ತಿಪಟುಗಳು, ತಮ್ಮ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಕುಡಿದ ಅಮಲಿನಲ್ಲಿದ್ದ ಎಂದು ಆರೋಪಿಸಿದ್ದಾರೆ.
ಪ್ರತಿಭಟನಾ ಸ್ಥಳದಿಂದ ಮಾಧ್ಯಮಗಳೊಂದಿಗೆ ಮಾತನಾಡಿದ ಕುಸ್ತಿಪಟು ಬಜರಂಗ್ ಪುನಿಯಾ, ಪ್ರತಿಭಟನಾಕಾರರಿಗೆ ಇಡೀ ದೇಶದ ಬೆಂಬಲದ ಅಗತ್ಯವಿದೆ ಎಂದಿದ್ದಾರೆ. "ನಮಗೆ ಇಡೀ ದೇಶದ ಬೆಂಬಲದ ಅಗತ್ಯವಿದೆ, ಎಲ್ಲರೂ ದೆಹಲಿಗೆ ಬರಬೇಕು. ಪೊಲೀಸರು ನಮ್ಮ ವಿರುದ್ಧ ಬಲಪ್ರಯೋಗ ಮಾಡುತ್ತಿದ್ದಾರೆ, ಮಹಿಳೆಯರನ್ನು ನಿಂದಿಸುತ್ತಿದ್ದಾರೆ. ಆದರೆ, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಏನನ್ನೂ ಮಾಡಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.

ಕುಸ್ತಿಪಟುಗಳು ಏಕೆ ಪ್ರತಿಭಟಿಸುತ್ತಿದ್ದಾರೆ..?
ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಅಪ್ರಾಪ್ತ ಕುಸ್ತಿಪಟು ಸೇರಿದಂತೆ ಹಲವರು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದಾರೆ. ನ್ಯಾಯಕ್ಕಾಗಿ ಒತ್ತಾಯಿಸಿ ಒಲಿಂಪಿಕ್ಸ್ ವಿಜೇತರು ಸೇರಿದಂತೆ ಭಾರತೀಯ ಕುಸ್ತಿಪಟುಗಳು ಎರಡನೇ ಹಂತದ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು, "ಮಹಿಳೆ" ಆಗಿದ್ದರೂ ಸಹ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಗಂಭೀರ ಆರೋಪಗಳನ್ನು ಕಡೆಗಣಿಸಿದ್ದಕ್ಕಾಗಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಮುಖ್ಯಸ್ಥೆ ಪಿಟಿ ಉಷಾ ಅವರನ್ನು ಕುಸ್ತಿಪಟುಗಳು ಪದೇ ಪದೇ ಟೀಕಿಸಿದ್ದಾರೆ. ಮತ್ತೊಂದೆಡೆ, ಪ್ರತಿಭಟನೆಯು ಕುಸ್ತಿಪಟುಗಳಲ್ಲಿ ಶಿಸ್ತಿನ ಕೊರತೆಯನ್ನು ತೋರಿಸಿದೆ ಎಂದು ಪಿಟಿ ಉಷಾ ಹೇಳಿದ್ದರು. ಅಲ್ಲದೆ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿದ್ದರು.
ಬ್ರಿಜ್ ಭೂಷಣ್ ಸಿಂಗ್ ಅವರು ಹಲವು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ, ಇದನ್ನು ಕ್ರೀಡಾ ನಿರ್ವಾಹಕರು ಮತ್ತು ಕೈಸರ್‌ಗಂಜ್‌ನ ಬಿಜೆಪಿ ಸಂಸದರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಎಲ್ಲಾ ಹೇಳಿಕೆಗಳನ್ನು ತಳ್ಳಿಹಾಕಿದ ಅವರು, ಈ ಪ್ರತಿಭಟನೆಗಳು ರಾಜಕೀಯ ಪ್ರೇರಿತ ಮತ್ತು ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.
ವಾಸ್ತವವಾಗಿ, ಕುಸ್ತಿಪಟುಗಳ ಪ್ರತಿಭಟನೆಯು ಕಾಂಗ್ರೆಸ್ ಮತ್ತು ಕುಸ್ತಿಪಟು ಬಜರಂಗ್ ಪುನಿಯಾ ರೂಪಿಸಿದ "ಪಿತೂರಿ"ಯ ಭಾಗವಾಗಿದೆ ಎಂದು ನನಗೆ ತಿಳಿದಿದೆ. ಇದಕ್ಕೆ ಬೇಕಾದ ಪುರಾವೆ ಸಿಕ್ಕಿದೆ ಎಂದು ಸಿಂಗ್ ಹೇಳಿದ್ದಾರೆ. ಪ್ರತಿಭಟನಾಕಾರರು ಮನೆಗೆ ಹಿಂತಿರುಗಿ ಶಾಂತಿಯುತವಾಗಿ ಇದ್ದರೆ ರಾಜೀನಾಮೆ ನೀಡಲು ಸಿದ್ಧ ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.
ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ನಂತರ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. "ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಜೊತೆಗೆ POCSO ಕಾಯಿದೆಯಡಿಯಲ್ಲಿ ಮೊದಲ ಎಫ್‌ಐಆರ್ ದಾಖಲಿಸಲಾಗಿದೆ. ಅಪ್ರಾಪ್ತ ವಯಸ್ಕರ ಆರೋಪದ ಆಧಾರದ ಮೇಲೆ ಅದನ್ನು ದಾಖಲಿಸಲಾಗಿದೆ. ಎರಡನೇ ಎಫ್‌ಐಆರ್ ಅನ್ನು ಇತರ ದೂರುದಾರರ ದೂರುಗಳಿಗೆ ಸಂಬಂಧಿಸಿದ ಹಲವು ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications