Screen Protector: ನಿಮ್ಮ ಮೊಬೈಲ್‌ಗೆ ಹಾಕಿಸುವ ಸ್ಕ್ರೀನ್ ಗಾರ್ಡ್ ಸೇಫಾ? ಇನ್ಮುಂದೆ BIS ಪ್ರಮಾಣಪತ್ರ ಕಡ್ಡಾಯ
ಹೊಸ ಮೊಬೈಲ್ ಫೋನ್ ತಗೊಂಡ ಕೂಡಲೇ ಹೆಚ್ಚಿನ ಭಾರತೀಯರು ಮಾಡೊ ಕೆಲಸ ಅಂದ್ರೆ ಅದಕ್ಕೊಂದು ಸ್ಕ್ರೀನ್ ಗಾರ್ಡ್ ಅಥವಾ ಪ್ರೊಟೆಕ್ಟರ್ (Screen Protector) ಹಾಕಿಸೋದು. ಮೊಬೈಲ್ ಸ್ಕ್ರೀನ್‌ಗಳು ಸಾಮಾನ್ಯವಾಗಿ ಕಣ್ಣಿನ ಆರೋಗ್ಯ ದೃಷ್ಟಿಯಿಂದ ಪ್ರಮಾಣಿತ ಅಥವಾ ಸರ್ಟಿಫೈಡ್ ಆಗಿರ್ತವೆ. ಆದ್ರೆ ಸ್ಕ್ರೀನ್ ಗಾರ್ಡ್‌ಗಳೂ ಅಷ್ಟೇ ಸೇಫಾ? ನಮಗೆ ಗೊತ್ತಿಲ್ಲ. ಗೊತ್ತು ಮಾಡುವ ಬಗೆ ಹೇಗೆ? ಅದೂ ಗೊತ್ತಿಲ್ಲ.
ಇದೀಗ ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಹತ್ವದ ಬದಲಾವಣೆಯೊಂದು ಬರಲಿದೆ. ಇನ್ನು ಮುಂದೆ ಸ್ಮಾರ್ಟ್‌ಫೋನ್‌ಗಳ ಸ್ಕ್ರೀನ್ ಪ್ರೊಟೆಕ್ಟರ್‌ಗಳನ್ನು ಮಾರಾಟ ಮಾಡಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಮಾಣಪತ್ರ ಕಡ್ಡಾಯವಾಗಲಿದೆ. ಕಡಿಮೆ ಗುಣಮಟ್ಟದ ಸ್ಕ್ರೀನ್ ಪ್ರೊಟೆಕ್ಟರ್‌ಗಳ ಮಾರಾಟವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಸರ್ಕಾರದ ಸೆಪ್ಟೆಂಬರ್ 21ರ ಅಧಿಸೂಚನೆಯ ಪ್ರಕಾರ, 2027ರ ಏಪ್ರಿಲ್ 1ರಿಂದ ಸ್ಮಾರ್ಟ್‌ಫೋನ್ ಸ್ಕ್ರೀನ್ ಪ್ರೊಟೆಕ್ಟರ್‌ಗಳು ಕಡ್ಡಾಯ BIS ನೋಂದಣಿ ನಿಯಮದ ವ್ಯಾಪ್ತಿಗೆ ಬರಲಿವೆ. ಈ ಉತ್ಪನ್ನಗಳು IS 19348:2025 ಎಂಬ ಭಾರತೀಯ ಮಾನದಂಡಕ್ಕೆ ಅನುಗುಣವಾಗಿರಬೇಕು.
ಮಾರಾಟಕ್ಕೂ ಮುನ್ನ ಪ್ರಮಾಣಪತ್ರ ಅಗತ್ಯ
ಹೊಸ ನಿಯಮ ಜಾರಿಗೆ ಬಂದ ಬಳಿಕ ಭಾರತದಲ್ಲಿ ಸ್ಮಾರ್ಟ್‌ಫೋನ್ ಸ್ಕ್ರೀನ್ ಪ್ರೊಟೆಕ್ಟರ್‌ಗಳನ್ನು ಮಾರಾಟ ಮಾಡಲು ಸಂಬಂಧಪಟ್ಟ ಸಂಸ್ಥೆಗಳು ಅಗತ್ಯ ನಿಯಂತ್ರಣ ಅನುಮೋದನೆ ಮತ್ತು BIS ಪ್ರಮಾಣೀಕರಣ ಪಡೆಯಬೇಕಾಗುತ್ತದೆ. ಇದರ ಪ್ರಮುಖ ಉದ್ದೇಶ, ಮಾರುಕಟ್ಟೆಯಲ್ಲಿ ಸಿಗುವ ಕಡಿಮೆ ಗುಣಮಟ್ಟದ ಸ್ಕ್ರೀನ್ ಪ್ರೊಟೆಕ್ಟರ್‌ಗಳನ್ನು ನಿಯಂತ್ರಿಸುವುದು.
ಸ್ಕ್ರೀನ್ ಪ್ರೊಟೆಕ್ಟರ್‌ಗಳ ಗುಣಮಟ್ಟದಲ್ಲಿ ಕನಿಷ್ಠ ಮಾನದಂಡವನ್ನು ಖಚಿತಪಡಿಸುವ ಮೂಲಕ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳು ದೊರೆಯುವಂತೆ ಮಾಡುವ ನಿರೀಕ್ಷೆಯಿದೆ.
ಕಡ್ಡಾಯ ನೋಂದಣಿ ನಿಯಮದ ಅಡಿಯಲ್ಲಿ ಅಧಿಸೂಚನೆ ಹೊರಡಿಸಲಾದ 66ನೇ ಉತ್ಪನ್ನ ಸ್ಮಾರ್ಟ್‌ಫೋನ್ ಸ್ಕ್ರೀನ್ ಪ್ರೊಟೆಕ್ಟರ್ ಆಗಿದೆ. ಈ ಪಟ್ಟಿಯಲ್ಲಿ ಈಗಾಗಲೇ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜರ್‌ಗಳು, ಎಲ್‌ಇಡಿ ಟೆಲಿವಿಷನ್‌ಗಳು, ಮೈಕ್ರೋವೇವ್ ಓವನ್‌ಗಳು, ಪ್ರಿಂಟರ್‌ಗಳು ಮತ್ತು ಸೆಟ್‌ಟಾಪ್ ಬಾಕ್ಸ್‌ಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿವೆ.
Screen Protector: ದೇಶೀಯ ಉತ್ಪಾದಕರಿಗೆ ಉತ್ತೇಜನ
ಹೊಸ ನಿಯಮದಿಂದ ಭಾರತದಲ್ಲಿ ಸ್ಕ್ರೀನ್ ಪ್ರೊಟೆಕ್ಟರ್‌ಗಳ ಉತ್ಪಾದನೆಗೂ ಉತ್ತೇಜನ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ದೇಶೀಯ ಎಲೆಕ್ಟ್ರಾನಿಕ್ಸ್ ತಯಾರಕರಿಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಭಾರತದಲ್ಲಿ ಈಗಾಗಲೇ ಸ್ಕ್ರೀನ್ ಪ್ರೊಟೆಕ್ಟರ್‌ಗಳ ಉತ್ಪಾದನೆ ಆರಂಭಿಸಿರುವ Optiemus Infracom ಸಂಸ್ಥೆ, ಹೊಸ ನಿಯಮವನ್ನು ಸ್ವಾಗತಿಸಿದೆ.
ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಅಶೋಕ್ ಗುಪ್ತಾ ಅವರ ಪ್ರಕಾರ, ಕಂಪನಿ ಈಗಿರುವ ಸ್ಕ್ರೀನ್ ಪ್ರೊಟೆಕ್ಟರ್ ಉತ್ಪಾದನಾ ಸಾಮರ್ಥ್ಯದ ಜೊತೆಗೆ ಹೆಚ್ಚುವರಿಯಾಗಿ 2 ಕೋಟಿ ಯೂನಿಟ್‌ಗಳ ಸಾಮರ್ಥ್ಯ ನಿರ್ಮಿಸಲು ಯೋಜಿಸಿದೆ.
Optiemus Infracom ಉತ್ತರ ಪ್ರದೇಶದ ನೋಯ್ಡಾದಲ್ಲಿ ಟೆಂಪರ್ಡ್ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಟರ್‌ಗಳ ಉತ್ಪಾದನಾ ಘಟಕ ಸ್ಥಾಪಿಸಿದೆ. ಅಮೆರಿಕದ ವಸ್ತು ತಂತ್ರಜ್ಞಾನ ಸಂಸ್ಥೆ Corningನ ತಂತ್ರಜ್ಞಾನವನ್ನು ಬಳಸಿಕೊಂಡು ಇಲ್ಲಿ ಸ್ಕ್ರೀನ್ ಪ್ರೊಟೆಕ್ಟರ್‌ಗಳನ್ನು ತಯಾರಿಸಲಾಗುತ್ತಿದೆ. ಕಂಪನಿ 2027ರ ಜನವರಿಯಿಂದ ಉತ್ಪನ್ನಗಳ ರವಾನೆ ಆರಂಭಿಸುವ ನಿರೀಕ್ಷೆಯಲ್ಲಿದೆ.
ಪ್ರಸ್ತುತ ಹಣಕಾಸು ವರ್ಷದಲ್ಲಿ ಟೆಂಪರ್ಡ್ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಟರ್‌ಗಳ ವ್ಯವಹಾರದಿಂದ 1,800ರಿಂದ 2,000 ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ. ಭಾರತದಲ್ಲಿ ಸ್ಕ್ರೀನ್ ಪ್ರೊಟೆಕ್ಟರ್‌ಗಳ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿದೆ. ಉದ್ಯಮದ ಅಂದಾಜಿನ ಪ್ರಕಾರ, ವರ್ಷಕ್ಕೆ 50 ಕೋಟಿಗೂ ಹೆಚ್ಚು ಯೂನಿಟ್‌ಗಳ ಮಾರುಕಟ್ಟೆ ಇದೆ.
ಮೊಬೈಲ್ ಸಾಧನ ತಯಾರಕರ ಉದ್ಯಮ ಸಂಘಟನೆ ICEA ಅಧ್ಯಕ್ಷ ಪಂಕಜ್ ಮೊಹಿಂದ್ರೂ ಅವರ ಪ್ರಕಾರ, ಕಡ್ಡಾಯ BIS ಪ್ರಮಾಣೀಕರಣವು ಕಡಿಮೆ ಗುಣಮಟ್ಟದ ಉತ್ಪನ್ನಗಳಿಂದ ಗ್ರಾಹಕರನ್ನು ರಕ್ಷಿಸುವುದರ ಜೊತೆಗೆ ದೇಶೀಯ ಮತ್ತು ಜಾಗತಿಕ ಉತ್ಪಾದಕರಿಗೆ ಸಮಾನ ಸ್ಪರ್ಧಾತ್ಮಕ ಅವಕಾಶ ಕಲ್ಪಿಸಬಹುದು.
ಈ ಕ್ರಮದಿಂದ ಗುಣಮಟ್ಟ ಆಧಾರಿತ ಸ್ಕ್ರೀನ್ ಪ್ರೊಟೆಕ್ಟರ್ ಉದ್ಯಮಕ್ಕೆ (ndustry) ಉತ್ತೇಜನ ಸಿಗಬಹುದು. ಉದ್ಯಮದ ಅಂದಾಜಿನ ಪ್ರಕಾರ, ಇದು 12,000ರಿಂದ 16,000 ಕೋಟಿ ರೂ. ಮೌಲ್ಯದ ಉದ್ಯಮವಾಗಿ ಬೆಳೆಯುವ ಸಾಧ್ಯತೆಯಿದ್ದು, ಸುಮಾರು 60 ಸಾವಿರ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಬಹುದು. ಅಲ್ಲದೆ, ಸುಮಾರು 2,000 ಕೋಟಿ ರೂ. ಜಿಎಸ್‌ಟಿ ಆದಾಯಕ್ಕೆ ಕೊಡುಗೆ ನೀಡುವ ಸಾಧ್ಯತೆಯಿದೆ.
20 ಸಾವಿರ ಕೋಟಿ ರೂ. ಮಾರುಕಟ್ಟೆ
2025ರಲ್ಲಿ ಭಾರತದಲ್ಲಿನ (mobile) ಟೆಂಪರ್ಡ್ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಟರ್‌ಗಳ ದೇಶೀಯ ಮಾರುಕಟ್ಟೆ ಸುಮಾರು 40 ಕೋಟಿ ಅಷ್ಟಿತ್ತು. ಇದರ ಚಿಲ್ಲರೆ ಮೌಲ್ಯ ಸುಮಾರು 20,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಹೀಗಾಗಿ, 2027ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ BIS ನಿಯಮವು ಗ್ರಾಹಕರಿಗೆ ಸಿಗುವ ಸ್ಕ್ರೀನ್ ಪ್ರೊಟೆಕ್ಟರ್‌ಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುವುದರ ಜೊತೆಗೆ, ಭಾರತದಲ್ಲಿ ಈ ಉತ್ಪನ್ನಗಳ ಸ್ಥಳೀಯ ಉತ್ಪಾದನೆ ಮತ್ತು ಗುಣಮಟ್ಟದ ಮಾನದಂಡಗಳಿಗೂ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.


Click it and Unblock the Notifications
