ಎಸ್‌ಸಿ/ಎಸ್‌ಟಿ : ಬೇರೆ ರಾಜ್ಯದ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಇಲ್ಲ
ನವದೆಹಲಿ, ಆಗಸ್ಟ್ 30 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳು ಬೇರೆ ರಾಜ್ಯದಲ್ಲಿನ ಸರ್ಕಾರಿ ಉದ್ಯೋದಲ್ಲಿ ಮೀಸಲಾತಿ ಕೇಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಗುರುವಾರ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ ಈ ಕುರಿತು ಆದೇಶ ನೀಡಿದೆ. ಉದ್ಯೋಗದ ನಿಮಿತ್ತ ಪರಿಶಿಷ್ಟ ಜಾತಿ ಮತ್ತ ಪರಿಶಿಷ್ಟ ಪಂಗಡದ ವ್ಯಕ್ತಿಗಳು ಬೇರೆ ರಾಜ್ಯಕ್ಕೆ ವಲಸೆ ಹೋಗಿದ್ದರೆ, ಅಲ್ಲಿನ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕೇಳುವಂತಿಲ್ಲ ಎಂದು ಪೀಠ ತಿಳಿಸಿದೆ.

ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತ ಪರಿಶಿಷ್ಟ ಪಂಗಡದ ವ್ಯಕ್ತಿಗಳು ಎಂದು ನೋಂದಣಿಯಾಗಿದ್ದರೆ ಇದನ್ನೇ ಮಾನದಂಡವಾಗಿ ಇಟ್ಟುಕೊಂಡ ಬೇರೆ ರಾಜ್ಯದ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕೇಳುವಂತಿಲ್ಲ. ಅವರು ನೋಂದಣಿಯಾದ ರಾಜ್ಯದಲ್ಲಿ ಮಾತ್ರ ಮೀಸಲಾತಿ ಸಿಗಲಿದೆ.
ನ್ಯಾಯಮೂರ್ತಿ ಎನ್.ವಿ.ರಾಮನ್, ಆರ್.ಭಾನುಮತಿ, ಎಂ.ಶಾಂತನಗೌಡರ್ ಮತ್ತು ಎಸ್.ಎ.ನಜೀರ್ ಅವರಿದ್ದ ಸಂವಿಧಾನಿಕ ಪೀಠದಲ್ಲಿ ಪರಿಶಿಷ್ಟ ಜಾತಿ ಮತ್ತ ಪರಿಶಿಷ್ಟ ಪಂಗಡದ ಮೀಸಲಾತಿ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಯಿತು.
ನ್ಯಾಯಮೂರ್ತಿ ಆರ್.ಭಾನುಮತಿ ಅವರು ಎಸ್‌ಸಿ/ಎಸ್‌ಟಿ ಮೀಸಲಾತಿ ಬಗ್ಗೆ ಜಾರಿಯಲ್ಲಿರುವ ಕೇಂದ್ರ ಸರ್ಕಾರದ ನಿಯಮ ಕೇಂದ್ರಾಡಳಿತ ಪ್ರದೇಶ ಮತ್ತು ನವದೆಹಲಿಗೆ ಅನ್ವಯವಾಗಬಾರದು ಎಂದು ಅಭಿಪ್ರಾಯಪಟ್ಟರು.
ನ್ಯಾಯಪೀಠದಲ್ಲಿದ್ದ ಶೇ 4:1ರಷ್ಟು ನ್ಯಾಯಮೂರ್ತಿಗಳು ನಿಯಮ ದೆಹಲಿಗೆ ಅನ್ವಯವಾಗಬೇಕು ಎಂದು ಅಭಿಪ್ರಾಯಪಟ್ಟರು. ಬೇರೆ ರಾಜ್ಯದ ಎಸ್‌ಸಿ/ಎಸ್‌ಟಿ ವ್ಯಕ್ತಿಗಳು ದೆಹಲಿಯ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಕೇಳಬಹುದೇ? ಎಂದು ಅರ್ಜಿ ಸಲ್ಲಿಕೆಯಾಗಿತ್ತು.












Click it and Unblock the Notifications