ದೇಶದಲ್ಲಿ ಎಷ್ಟು ದಿನ ಉಳಿಯಬಹುದು ಕೊರೊನಾ ಎರಡನೇ ಅಲೆ? ಎಷ್ಟು ಹೊಸ ಪ್ರಕರಣ ಪತ್ತೆಯಾಗಲಿದೆ?
ನವದೆಹಲಿ, ಮಾರ್ಚ್ 25: ಇಂದಿಗೆ ಭಾರತದಲ್ಲಿ ಲಾಕ್‌ಡೌನ್ ಘೋಷಿಸಿ ಸರಿಯಾಗಿ ಒಂದು ವರ್ಷ. ಈ ಒಂದು ವರ್ಷದ ನಂತರ ಮತ್ತೆ ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಏರಿಕೆ ಕಂಡುಬಂದಿದೆ. ಫೆಬ್ರವರಿ ತಿಂಗಳಿನಲ್ಲಿ 9,000 ಆಸುಪಾಸಿನಲ್ಲಿದ್ದ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ. ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಆರಂಭಿಕ ಹಂತದಲ್ಲಿದೆ.
ಸೋಂಕಿನ ಎರಡನೇ ಅಲೆ ಹೊಡೆತವನ್ನು ತಗ್ಗಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿವೆ. ಈ ಎರಡನೇ ಅಲೆ ಎಷ್ಟು ದಿನ ಇರಬಹುದು ಎಂಬ ಕುತೂಹಲವೂ ಉಂಟಾಗಿದೆ. ಎರಡನೇ ಅಲೆ ಎಷ್ಟು ದಿನಗಳವರೆಗೆ ಮುಂದುವರೆಯಬಹುದು, ಇನ್ನೂ ಎಷ್ಟು ಹೊಸ ಪ್ರಕರಣಗಳು ಪತ್ತೆಯಾಗಬಹುದು ಎಂಬ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಮುಂದೆ ಓದಿ...

ಎಷ್ಟು ದಿನ ಇರಬಹುದು ಕೊರೊನಾ ಎರಡನೇ ಅಲೆ?
ಎಸ್‌ಬಿಐ ವರದಿ ಪ್ರಕಾರ, ಕೊರೊನಾ ಸೋಂಕಿನ ಎರಡನೇ ಅಲೆ ಸುಮಾರು ನೂರು ದಿನಗಳವರೆಗೂ ಇರಬಹುದು. ಫೆಬ್ರವರಿ 15ರಿಂದ ಲೆಕ್ಕ ತೆಗೆದುಕೊಂಡರೆ ಇನ್ನಷ್ಟು ದಿನಗಳ ಕಾಲ ಈ ಕೊರೊನಾ ಪ್ರಕರಣಗಳ ಏರಿಕೆ ಮುಂದುವರೆಯಲಿದೆ. ಏಪ್ರಿಲ್‌ವರೆಗೂ ಎರಡನೇ ಅಲೆ ಮುಂದುವರೆಯಲಿದ್ದು, ಮಾರ್ಚ್ 23ರವರೆಗಿನ ಅಂಕಿ ಅಂಶಗಳನ್ನು ಪರಿಗಣಿಸಿದ್ದೇ ಆದರೆ, ಎರಡನೇ ಅಲೆಯಲ್ಲಿ 25 ಲಕ್ಷ ಸೋಂಕಿತರು ಪತ್ತೆಯಾಗಲಿದ್ದಾರೆ ಎಂದು ಮುನ್ಸೂಚನೆ ನೀಡಲಾಗಿದೆ.

ಸ್ಥಳೀಯ ಲಾಕ್‌ಡೌನ್ ಕೆಲಸ ಮಾಡಲ್ಲ
28 ಪುಟಗಳ ಈ ವರದಿಯಲ್ಲಿ, ಸ್ಥಳೀಯ ಲಾಕ್‌ಡೌನ್ ಅಥವಾ ಇನ್ನಾವುದೇ ನಿರ್ಬಂಧಗಳು ಸೋಂಕಿನ ಹರಡುವಿಕೆ ತಡೆಯಲು ಪರಿಣಾಮಕಾರಿಯಾಗವು ಎಂದು ತಿಳಿಸಲಾಗಿದೆ. ಲಸಿಕೆ ನೀಡುವುದನ್ನು ತ್ವರಿತಗೊಳಿಸುವುದಷ್ಟೇ ಈ ಸೋಂಕನ್ನು ಸೋಲಿಸುವ ಭರವಸೆಯಾಗಲಿದೆ ಎಂದು ತಿಳಿಸಿದೆ.

ಏಪ್ರಿಲ್‌ನಲ್ಲಿ ಇನ್ನಷ್ಟು ಪ್ರಕರಣಗಳ ಹೆಚ್ಚಳ
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಎರಡನೇ ಏಪ್ರಿಲ್‌ವರೆಗೂ ಮುಂದುವರೆಯಲಿದ್ದು, ಏಪ್ರಿಲ್ ಮಧ್ಯದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿಯವರೆಗೂ ಸೋಂಕು ನಿಯಂತ್ರಣಕ್ಕೆ ಜನರು ಸ್ವಯಂ ನಿರ್ಬಂಧ ಹೇರಿಕೊಳ್ಳುವುದು ಸೂಕ್ತ ಎಂದು ತಿಳಿಸಿದೆ.

ಮುಂದಿನ ತಿಂಗಳು ಆರ್ಥಿಕತೆ ಮೇಲಿನ ಪರಿಣಾಮ ಗೋಚರ
ಈಗಾಗಲೇ ಸೋಂಕು ಮಿತಿ ಮೀರುತ್ತಿರುವ ಮಹಾರಾಷ್ಟ್ರ, ಪಂಜಾಬ್ ನಂಥ ಕೆಲ ರಾಜ್ಯಗಳಲ್ಲಿ ಸ್ಥಳೀಯ ಲಾಕ್ ಡೌನ್ ಹೇರಲಾಗಿದೆ. ಇದು ಸ್ಥಳೀಯ ಆರ್ಥಿಕತೆ ಮೇಲೆ ಪರಿಣಾಮ ಬೀರಿದ್ದು, ಈ ಪರಿಣಾಮ ಮುಂದಿನ ತಿಂಗಳು ಗೋಚರಿಸಲಿದೆ ಎಂದು ವರದಿ ತಿಳಿಸಿದೆ.

ಪ್ರಸ್ತುತ ದೇಶದಲ್ಲಿ ಎಷ್ಟು ಪ್ರಕರಣಗಳಿವೆ?
ಭಾರತದಲ್ಲಿ ಒಂದೇ ದಿನ 53476 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ ಐದು ತಿಂಗಳ ನಂತರದ ಮೊದಲ ಬಾರಿಗೆ ಸೋಂಕಿತ ಪ್ರಕರಣಗಳ ಸಂಖ್ಯೆ 50,000 ಗಡಿ ದಾಟಿದ್ದು, ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,17,87,534ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 26,490 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 1,12,31,650 ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 251 ಮಂದಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಈವರೆಗೂ ಮಹಾಮಾರಿಗೆ ಬಲಿಯಾದವರ ಸಂಖ್ಯೆ 1,60,692ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ 3,95,192 ಕೊರೊನಾ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.












Click it and Unblock the Notifications