ಸನಾತನ ಧರ್ಮವೆಂಬುದು ಎಚ್‌ಐವಿ, ಕುಷ್ಠರೋಗವಿದ್ದಂತೆ: ಉದಯನಿಧಿ ಸ್ಟಾಲಿನ್ ಬಳಿಕ ಡಿಎಂಕೆ ಸಂಸದ ಎ ರಾಜಾ ಹೇಳಿಕೆ
ಚೆನ್ನೈ, ಸೆಪ್ಟೆಂಬರ್ 07: ಸನಾತನ ಧರ್ಮ ಕುರಿತ ವಿವಾದದ ಬೆಂಕಿಗೆ ಡಿಎಂಕೆ ಸಂಸದ ಎ ರಾಜಾ ತುಪ್ಪ ಸುರಿದಿದ್ದಾರೆ. ಸನಾತನ ಧರ್ಮವೆಂಬುದು ಡೆಂಗ್ಯು, ಮಲೇರಿಯಾ ಕೊರೊನಾ ವೈರಸ್ ಇದ್ದಂತೆ ಎಂಬ ಹೇಳಿಕೆಯನ್ನು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ್ದಾರೆ. ಈ ವಿವಾದ ಹಸಿಯಾಗಿರುವಾಗಲೇ, ಸನಾತನ ಧರ್ಮವು ಎಚ್‌ಐವಿ, ಕುಷ್ಠರೋಗವಿದ್ದಂತೆ ಎಂದು ಡಿಎಂಕೆ ಸಂಸದ ಎ ರಾಜಾ ಹೇಳಿದ್ದಾರೆ.
ಸನಾತನದ ಧರ್ಮವು ಸಾಮಾಜಿಕ ಕಳಂಕವಾಗಿದೆ. ಇದು ಎಚ್‌ಐವಿ ಮತ್ತು ಕುಷ್ಠರೋಗದಂತಹ ಕಾಯಿಲೆಗಳಿಗೆ ಸಮಾನವಾಗಿದೆ ಎಂದು ರಾಜಾ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ವಿರುದ್ಧ ಚೆನ್ನೈನಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಎ ರಾಜಾ, 'ಸನಾತನ ಧರ್ಮದ ಕುರಿತು ಉದಯನಿಧಿ ದೃಷ್ಟಿಕೋನವು ಮೃದುವಾಗಿದೆ ಎಂದು ತಿಳಿಸಿದ್ದಾರೆ.
'ಉದಯನಿಧಿ ಹೇಳಿರುವ ರೋಗಗಳು ಸಾಮಾಜಿಕ ಕಳಂಕವನ್ನು ಹೊಂದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸಮಾಜದಲ್ಲಿ ಅಸಹ್ಯಕರವಾಗಿ ನೋಡಲಾಗುವ ಎಚ್‌ಐವಿ ಹಾಗೂ ಕುಷ್ಠರೋಗದಂತೆ ಸನಾತನ ಧರ್ಮವು ಸಾಮಾಜಿಕ ಪಿಡುಗಾಗಿದೆ' ಎಂದು ಹೇಳಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಸನಾತನ ಧರ್ಮವನ್ನು ಅನುಸರಿಸುವ ಶೇ 80 ಭಾರತದ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
'ಉದಯನಿಧಿ ಸ್ಟಾಲಿನ್ ನಂತರ, ಈಗ ಡಿಎಂಕೆಯ ಎ ರಾಜಾ ಅವರು ಸನಾತನ ಧರ್ಮವನ್ನು ಅವಹೇಳನ ಮಾಡಿದ್ದಾರೆ. ಇದು ಸನಾತನ ಧರ್ಮವನ್ನು ಅನುಸರಿಸುವ ಶೇ 80 ಭಾರತದ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡು ಮಾಡಿದ ದ್ವೇಷದ ಭಾಷಣವಲ್ಲದೆ ಬೇರೇನೂ ಅಲ್ಲ' ಎಂದು ತಿಳಿಸಿದ್ದಾರೆ.
ಇದು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಿಜವಾದ ಲಕ್ಷಣವಾಗಿದೆ. ಹಿಂದೂಗಳನ್ನು ಕೀಳಾಗಿ ಕಾಣುವುದೊಂದೇ ಚುನಾವಣೆಗಳನ್ನು ಗೆಲ್ಲುವ ಏಕೈಕ ಮಾರ್ಗವೆಂದು ಅವರು ಭಾವಿಸಿದಂತಿದೆ. ಇದನ್ನು ಮುಂಬೈ ಸಭೆಯಲ್ಲಿ ನಿರ್ಧರಿಸಲಾಗಿದೆಯೇ ಎಂದು ಮಾಳವೀಯ ಪ್ರಶ್ನಿಸಿದ್ದಾರೆ.
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಕಳೆದ ವಾರ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳೊಂದಿಗೆ ಹೋಲಿಸಿ ವಿವಾದವನ್ನು ಹುಟ್ಟು ಹಾಕಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರನ್ನು ಬೆಂಬಲಿಸಿರುವ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್, ಪ್ರಧಾನಿ ಮೋದಿ ನಕಲಿ ಸುದ್ದಿಗಳನ್ನು ನಂಬುವರೇ ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications