ನಾಳೆಯಿಂದಲೇ ಶಬರಿಮಲೆ ವರ್ಚುವಲ್ ಕ್ಯೂ ಬುಕಿಂಗ್ ಆರಂಭ, ಉಚಿತ ಟಿಕೆಟ್ ಪಡೆಯುವುದು ಹೇಗೆ?

ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿರುವ ಲಕ್ಷಾಂತರ ಭಕ್ತರಿಗೆ ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿಯು ಮಹತ್ವದ ಮಾಹಿತಿಯೊಂದನ್ನ ನೀಡಿದೆ. ಶಬರಿಮಲೆ ಮಂಡಲ ಮತ್ತು ಮಕರವಿಳಕ್ಕು ಯಾತ್ರೆಯ ಋತು ಸಮೀಪಿಸುತ್ತಿದ್ದು, ಸುಗಮ ದರ್ಶನಕ್ಕಾಗಿ ಶಬರಿಮಲೆ ವರ್ಚುವಲ್ ಕ್ಯೂ ಬುಕಿಂಗ್ ನಾಳೆಯಿಂದ (ಆಗಸ್ಟ್ 29) ಅಧಿಕೃತವಾಗಿ ಆರಂಭವಾಗಲಿದೆ.

ಬೆಳಿಗ್ಗೆ 10 ಗಂಟೆಯಿಂದಲೇ ಭಕ್ತರು ಆನ್‌ಲೈನ್ ಮೂಲಕ ತಮ್ಮ ದರ್ಶನದ ಸ್ಲಾಟ್‌ಗಳನ್ನ ಕಾಯ್ದಿರಿಸಿಕೊಳ್ಳಬಹುದು. ಯಾವುದೇ ಗೊಂದಲಗಳಿಲ್ಲದೆ ಶಬರಿಮಲೆ ದರ್ಶನ ಟಿಕೆಟ್ ಪಡೆಯಲು ಭಕ್ತರಿಗೆ ಈ ಮೂಲಕ ಅವಕಾಶ ಕಲ್ಪಿಸಲಾಗಿದೆ.

Sabarimala Virtual Queue Booking Starts Tomorrow Check Route Wise Quota amp amp Spot Booking Details

ಆನ್‌ಲೈನ್ ಬುಕಿಂಗ್ ಮಾಡುವುದು ಹೇಗೆ?

ವರ್ಚುವಲ್ ಕ್ಯೂ ಮೂಲಕ ಬುಕಿಂಗ್ ಮಾಡಿಕೊಳ್ಳಲು ಇಚ್ಛಿಸುವ ಭಕ್ತರು ದೇವಸ್ವಂ ಮಂಡಳಿಯ ಅಧಿಕೃತ ವೆಬ್‌ಸೈಟ್ www.sabarimalaonline.org ಗೆ ಭೇಟಿ ನೀಡಿ ತಮ್ಮ ಸ್ಲಾಟ್ ಬುಕ್ ಮಾಡಬಹುದು. ಶಬರಿಮಲೆ ದರ್ಶನದ ಈ ಆನ್‌ಲೈನ್ ಬುಕಿಂಗ್ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭಕ್ತರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ, ನೇರವಾಗಿ ವೆಬ್‌ಸೈಟ್ ಮೂಲಕವೇ ತಮ್ಮ ಆಧಾರ್ ಅಥವಾ ಇತರ ಅಧಿಕೃತ ಗುರುತಿನ ಚೀಟಿಯ ವಿವರಗಳನ್ನ ನಮೂದಿಸಿ ಟಿಕೆಟ್ ಕಾಯ್ದಿರಿಸಬಹುದು. ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ನೂಕುನುಗ್ಗಲು ತಪ್ಪಿಸಲು ಮತ್ತು ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ಈ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ಮಾರ್ಗವಾರು ದರ್ಶನ ಟಿಕೆಟ್ ಕೋಟಾ ವಿವರ

ಭಕ್ತರು ತಾವು ಶಬರಿಮಲೆಗೆ ತೆರಳುವ ಮಾರ್ಗವನ್ನ ಮೊದಲೇ ನಿರ್ಧರಿಸುವುದು ಒಳಿತು. ಏಕೆಂದರೆ ಆಯಾ ಮಾರ್ಗಗಳಿಗೆ ಅನುಗುಣವಾಗಿ ದರ್ಶನದ ಕೋಟಾವನ್ನ ನಿಗದಿಪಡಿಸಲಾಗಿದೆ. ಪ್ರಮುಖವಾಗಿ ನಿಲಕ್ಕಲ್-ಪಂಪಾ ಮಾರ್ಗದ ಮೂಲಕ ಆಗಮಿಸುವವರಿಗಾಗಿ ಪ್ರತಿದಿನ ಗರಿಷ್ಠ 60,000 ಭಕ್ತರಿಗೆ ವರ್ಚುವಲ್ ಕ್ಯೂ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಅದೇ ರೀತಿ, ಎರುಮೇಲಿ ಅರಣ್ಯ ಮಾರ್ಗ ಹಾಗೂ ವಂದಿಪೆರಿಯಾರ್-ಸತ್ರಂ ಮಾರ್ಗದ ಮೂಲಕ ಆಗಮಿಸುವ ಭಕ್ತರಿಗೆ ಪ್ರತಿದಿನ ತಲಾ 3,000 ಆನ್‌ಲೈನ್ ಟಿಕೆಟ್‌ಗಳು ಲಭ್ಯವಿರಲಿವೆ. ಭಕ್ತರು ತಮ್ಮ ಪ್ರಯಾಣದ ಯೋಜನೆಯ ಆಧಾರದ ಮೇಲೆ ಸೂಕ್ತ ಮಾರ್ಗವನ್ನ ಆಯ್ಕೆ ಮಾಡಿಕೊಂಡು ಸ್ಲಾಟ್ ಕಾಯ್ದಿರಿಸಿಕೊಳ್ಳಬೇಕು.

ರಿಯಲ್ ಟೈಮ್ ಅಥವಾ ಸ್ಪಾಟ್ ಬುಕಿಂಗ್ ಕೇಂದ್ರಗಳು

ಆನ್‌ಲೈನ್‌ನಲ್ಲಿ ವರ್ಚುವಲ್ ಕ್ಯೂ ಬುಕಿಂಗ್ ಮಾಡಲು ಸಾಧ್ಯವಾಗದ ಅಥವಾ ಆನ್‌ಲೈನ್ ಕೋಟಾದಲ್ಲಿ ಟಿಕೆಟ್ ಸಿಗದ ಭಕ್ತರ ಅನುಕೂಲಕ್ಕಾಗಿ ರಿಯಲ್ ಟೈಮ್ ಸ್ಲಾಟ್ ಬುಕಿಂಗ್ ಅಂದರೆ 'ಸ್ಪಾಟ್ ಬುಕಿಂಗ್' ಕೇಂದ್ರಗಳನ್ನ ಸಹ ತೆರೆಯಲಾಗುತ್ತಿದೆ.

ನಿಲಕ್ಕಲ್, ಎರುಮೇಲಿ ಮತ್ತು ವಂದಿಪೆರಿಯಾರ್‌ನಲ್ಲಿ ಈ ರಿಯಲ್ ಟೈಮ್ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ನಿಲಕ್ಕಲ್ ಕೇಂದ್ರದ ಮೂಲಕ ಪ್ರತಿದಿನ 10,000 ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಹಾಗೆಯೇ ಎರುಮೇಲಿ ಮತ್ತು ವಂದಿಪೆರಿಯಾರ್ ಸತ್ರಂ ಕೇಂದ್ರಗಳಲ್ಲಿ ತಲಾ 2,000 ಭಕ್ತರಿಗೆ ಸ್ಪಾಟ್ ಬುಕಿಂಗ್ ಮೂಲಕ ಪ್ರವೇಶ ಲಭ್ಯವಿರುತ್ತದೆ.

ಪಂಪಾದಲ್ಲಿ ಸ್ಪಾಟ್ ಬುಕಿಂಗ್ ಇರುವುದಿಲ್ಲ

ಭಕ್ತರು ಗಮನಿಸಬೇಕಾದ ಅತಿ ಮುಖ್ಯವಾದ ಅಂಶವೆಂದರೆ, ಈ ಬಾರಿ ಪಂಪಾದಲ್ಲಿ ಯಾವುದೇ ರಿಯಲ್ ಟೈಮ್ ಸ್ಲಾಟ್ ಬುಕಿಂಗ್ ಕೇಂದ್ರ ಇರುವುದಿಲ್ಲ. ಹೀಗಾಗಿ ಪಂಪಾಗೆ ತಲುಪುವ ಮುನ್ನವೇ ಭಕ್ತರು ಮೇಲ್ಕಂಡ ಕೇಂದ್ರಗಳಲ್ಲಿ ತಮ್ಮ ಟಿಕೆಟ್ ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಬರುವ ಭಕ್ತರು ನಿಗದಿತ ಸಮಯಕ್ಕೆ ಸರಿಯಾಗಿ ಆಗಮಿಸಿ, ದೇವಸ್ವಂ ಮಂಡಳಿ ನಿಯಮಗಳನ್ನ ಪಾಲಿಸುವ ಮೂಲಕ ಸುಗಮ ದರ್ಶನಕ್ಕೆ ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಭಕ್ತರಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳು

ಶಬರಿಮಲೆಯ ಮಂಡಲ-ಮಕರವಿಳಕ್ಕು ಋತುವು ಅತಿ ಹೆಚ್ಚು ಭಕ್ತರನ್ನು ಸೆಳೆಯುವ ಕಾಲವಾಗಿರುವುದರಿಂದ, ಭಕ್ತರು ಕಡ್ಡಾಯವಾಗಿ ಆನ್‌ಲೈನ್ ಟಿಕೆಟ್ ಪ್ರಿಂಟ್ ಅಥವಾ ಮೊಬೈಲ್‌ನಲ್ಲಿ ಸಾಫ್ಟ್ ಕಾಪಿಯನ್ನು ಹೊಂದಿರಬೇಕು. ಇದರ ಜೊತೆಗೆ ಕಾಯ್ದಿರಿಸುವಾಗ ನೀಡಿದ ಅಸಲಿ ಗುರುತಿನ ಚೀಟಿಯನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಮುಖ್ಯ.

ಟಿಕೆಟ್ ಇಲ್ಲದೆ ಬರುವ ಭಕ್ತರನ್ನ ದರ್ಶನಕ್ಕೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕಾರಣ, ಭಕ್ತರು ಪ್ರಯಾಣ ಬೆಳೆಸುವ ಮುನ್ನವೇ ವರ್ಚುವಲ್ ಕ್ಯೂ ಅಥವಾ ಸ್ಪಾಟ್ ಬುಕಿಂಗ್ ಮೂಲಕ ತಮ್ಮ ದರ್ಶನವನ್ನು ಖಚಿತಪಡಿಸಿಕೊಳ್ಳುವುದು ಅನಿವಾರ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+