ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಕರೆ ತರುವಂತೆ ಸುಪ್ರೀಂನಲ್ಲಿ ಪಿಐಎಲ್
ನವದೆಹಲಿ, ಫೆಬ್ರವರಿ 25: ಉಕ್ರೇನ್ ಹಾಗೂ ರಷ್ಯಾ ಯುದ್ಧ ನಡೆಯುತ್ತಿದ್ದು, ಆ ದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಸೂಕ್ತವಾದ ಆಹಾರ, ಔಷಧ ಮತ್ತು ವಸತಿಗೆ ಅಗತ್ಯವಾಗುವಂತಹ ಜೀವನಾವಶ್ಯಕ ಮತ್ತು ತುರ್ತು ಸಾಮಗ್ರಿಗಳನ್ನು ಒದಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ವಕೀಲ ವಿಶಾಲ್ ತಿವಾರಿ ಅವರು ನ್ಯಾಯಾಲಯವನ್ನು ಕೋರಿದ್ದಾರೆ.
"ಉಕ್ರೇನ್‌ನ ವಾಯುಪ್ರದೇಶವನ್ನು ನಿರ್ಬಂಧಿಸಲಾಗಿದ್ದು ಅಲ್ಲಿಗೆ ಕಳುಹಿಸಲಾದ ಏರ್ ಇಂಡಿಯಾ ವಿಮಾನ ಯಾವುದೇ ಭಾರತೀಯ ನಾಗರಿಕರನ್ನು ಕರೆತರಲಾಗದೆ ಹಿಂತಿರುಗಿದೆ. ಇದರಿಂದಾಗಿ ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಪರಿಸ್ಥಿತಿ ಇನ್ನಷ್ಟು ಹದಗೆಡುವಂತಾಗಿದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತಮ್ಮ ಜೀವ ಮತ್ತು ಸ್ವತ್ತಿಗೆ ಸಂಬಂಧಿಸಿದಂತೆ ಭಾರತೀಯ ವ್ಯಕ್ತಿಗಳು/ ನಾಗರಿಕರು ಬೆದರಿಕೆ ಎದುರಿಸುತ್ತಿದ್ದಾರೆ. ಅನೇಕರು ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ ಎಂದು ತಿಳಿಸಲಾಗಿದೆ.
10 ದಿನಗಳ ಹಿಂದೆ ಯುದ್ಧದ ಪರಿಸ್ಥಿತಿ ಉಂಟಾದಾಗ ಯುಕ್ರೇನ್‌ನಿಂದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ವಿಫಲವಾಗಿದೆ. ಯುದ್ಧದಂತಹ ಸ್ಥಿತಿ ಶೀಘ್ರವೇ ಸಂಭವಿಸಲಿದೆ ಎಂದು ಕೇಂದ್ರಕ್ಕೆ ಮುನ್ಸೂಚನೆ ಇದ್ದರೂ ಅಗತ್ಯ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ಉಕ್ರೇನ್‌ನ ವಿವಿಗಳಲ್ಲಿ ಅಧ್ಯಯನ ಮಾಡಿದ ಭಾರತೀಯ ವಿದ್ಯಾರ್ಥಿಗಳ ಎಂಬಿಬಿಎಸ್ ಪದವಿಗೆ ಭಾರತದಲ್ಲಿ ಮನ್ನಣೆ ನೀಡಬೇಕು ಎಂದು ಕೂಡ ಕೋರಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಮೊದಲ ದಿನದಂದು 137 ಜನರು ಮರಣವನ್ನಪ್ಪಿದ್ದಾರೆ. ಇದು ಯುರೋಪ್ನಲ್ಲಿ ಎರಡನೇ ಮಹಾಯುದ್ಧದ ನಂತರ ನಡೆಯುತ್ತಿರುವ ಮೊದಲ ಭೀಕರ ಕದನವಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರದಂದು ಉಕ್ರೇನ್ ಮೇಲೆ ಸೇನಾ ಕಾರ್ಯಚರಣೆ ಘೋಷಿಸಿದ್ದರು.
ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಅಲ್ಲಿನ ಪ್ರಮುಖ ನಗರಗಳ ಮೇಲೆ ರಷ್ಯಾದ ಮಿಲಿಟರಿ ಪಡೆಗಳು ದಾಳಿ ನಡೆಸಲಾಗಿದೆ. ಈ ಬಿಕ್ಕಟ್ಟಿಗೆ ವಿಶ್ವದ ನಾಯಕರು ಆತಂಕ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಯುದ್ಧಪೀಡಿತ ಪ್ರದೇಶದಲ್ಲಿರುವ ಭಾರತೀಯರರನ್ನು ಹಂತಹಂತವಾಗಿ ಕರೆತರಲು ಭಾರತ ಸರ್ಕಾರ ಯೋಜನೆ ಹಾಕಿಕೊಂಡಿದೆ ಎಂಬ ಮಾಹಿತಿ ಬಂದಿದೆ. ರೊಮಾನಿಯಾ ಹಾಗೂ ಇನ್ನಿತರ ಸಮೀಪದ ದೇಶಗಳ ವಾಯುನೆಲೆ ಬಳಸಿಕೊಂಡು ವಿದ್ಯಾರ್ಥಿಗಳನ್ನು ಏರ್ ಲಿಫ್ಟ್ ಮಾಡುವ ಸಾಧ್ಯತೆಯಿದೆ.
ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ MEA ಸಲಹೆ
ಏತನ್ಮಧ್ಯೆ,ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಉಕ್ರೇನ್‌ನಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರಜೆಗಳಿಗೆ ಸಲಹೆಯನ್ನು ನೀಡಿದೆ. ರಷ್ಯಾದ ದಾಳಿಯ ನಡುವೆ ಉಕ್ರೇನ್ ದೇಶದಲ್ಲಿ ಪ್ರಯಾಣವನ್ನು ಕಷ್ಟಕರವಾಗಿಸಿದೆ. ಕೀವ್‌ನಲ್ಲಿ ಸಿಲುಕಿರುವ ಮತ್ತು ಉಳಿಯಲು ಸ್ಥಳದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸ್ಥಳೀಯ ಸಂಸ್ಥೆಗಳೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೊಂಡಿದೆ.
ಉಕ್ರೇನ್‌ನಲ್ಲಿ ಭಾರತದ ಸುಮಾರು 18 ಸಾವಿರ ಜನರಿದ್ದಾರೆ ಎಂದು ವಿದೇಶಾಂಗ ಇಲಾಖೆಯ ರಾಜ್ಯಖಾತೆಯ ಸಚಿವ ವಿ ಮುರಳೀಧರನ್ ತಿಳಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ತ್ರಿಶೂರ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರದ ರಾಜ್ಯಖಾತೆ ಸಚಿವರು, ಉಕ್ರೇನ್‌ನಲ್ಲಿರುವ ಎಲ್ಲ ವಿದ್ಯಾರ್ಥಿಗಳು ಜನರ ಸುರಕ್ಷತೆ ಬಗ್ಗೆ ಮೊದಲ ಆದ್ಯತೆ ನೀಡುತ್ತಿದ್ದು, ಈ ಸಂಬಂಧ ಅಲ್ಲಿನ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ 18 ಸಾವಿರ ಜನರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆತರುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.
ಉಕ್ರೇನ್‌ನ ಡೊನ್‌ಬಾಸ್ ಪ್ರದೇಶದಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ, ಈ ಸಂಬಂಧ ಎಲ್ಲ ಮಾಹಿತಿಯನ್ನು ರವಾನಿಸಲಾಗಿದೆ. ಉಕ್ರೇನ್ ವಾಯುಪ್ರದೇಶವನ್ನು ಮುಚ್ಚಿರುವ ಕಾರಣ ವಿಶೇಷ ವಿಮಾನಗಳ ವೇಳಾಪಟ್ಟಿಯನ್ನು ರದ್ದುಗೊಳಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ ಎಂದರು.












Click it and Unblock the Notifications