RSS Dasara: ಮಣಿಪುರ ಹಿಂಸಾಚಾರ ಬಗ್ಗೆ RSS ಮುಖ್ಯಸ್ಥರು ಹೇಳಿದ್ದೇನು?
ಇಂಫಾಲ್: ಮಣಿಪುರ ಕಳೆದ 5 ತಿಂಗಳಿಂದ ಹೊತ್ತಿ ಉರಿಯುತ್ತಿದ್ದು ನಿರಂತರವಾಗಿ ಹಿಂಸೆ ನಡೆಯುತ್ತಿದೆ. ಕಂಡ ಕಂಡವರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡು ಕುಹಕ ನಗೆ ಬೀರಿದ್ದಾರೆ. ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡವಾಗಿದ್ದು, ಮಣಿಪುರದ ಹಿಂಸೆ ಹಿಡಿತಕ್ಕೆ ತರಲು ಸರ್ಕಾರವು ಕಾರ್ಯಾಚರಣೆ ನಡೆಸುತ್ತಿದೆ. ಈ ಎಲ್ಲ ಬೆಳವಣಿಗೆಯ ನಡುವೆ RSS ಮುಖ್ಯಸ್ಥರು ಇಂದು ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡಿದ್ದಾರೆ.
ಹೌದು, ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್ ವಿಜಯದಶಮಿ ಸಮಾವೇಶದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್. 'ಮಣಿಪುರ ಹಿಂಸಾಚಾರ ನಡೆದಿಲ್ಲ, ನಡೆಸಿರುವುದು' ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಹಲವು ವರ್ಷಗಳಿಂದಲೂ ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯದ ಜನ ಸಹಬಾಳ್ವೆ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಅದು ಹೇಗೆ ಇದ್ದಕ್ಕಿದ್ದಂತೆ ಹಿಂಸಾಚಾರ ಭುಗಿಲೆದ್ದಿತು? ಸಂಘರ್ಷದಿಂದ ಬಾಹ್ಯ ಶಕ್ತಿಗಳಿಗೆ ಪ್ರಯೋಜನವಿದೆ. ಬಾಹ್ಯ ಶಕ್ತಿ ಹಿಂಸಾಚಾರದಲ್ಲಿ ಕೆಲಸ ಮಾಡಿದ ಅನುಮಾನವೂ ಇದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಆರೋಪಿಸಿದ್ದಾರೆ.

ಹಿಂಸಾಚಾರ ಶುರುವಾಗಿದ್ದು ಏಕೆ?
ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರವಾಗಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಹಿಂಸೆ ಭುಗಿಲೆದ್ದಿದೆ ಎಂಬ ಆರೋಪ ಇದೆ. ಮಣಿಪುರ ಜನಸಂಖ್ಯೆ ಪ್ರಮಾಣದಲ್ಲಿ ಸುಮಾರು ಶೇಕಡಾ 53 ರಷ್ಟು ಮೈತೇಯಿ ಜನಾಂಗವೇ ಇದ್ದು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾಗಳು ಹಾಗೂ ಕುಕಿಗಳನ್ನು ಒಳಗೊಂಡ ಬುಡಕಟ್ಟು ಜನಾಂಗದವರು, ಶೇಕಡಾ 40 ರಷ್ಟು ಇದ್ದಾರೆ. ಇವರು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಹೀಗೆ ಇವರ ನಡುವೆ ಭೀಕರ ಹಿಂಸಾಚಾರ ಶುರುವಾಗಿದ್ದು, ಈಗ ಮಣಿಪುರ ಹಿಂಸಾಚಾರದ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥರು ಮಾತನಾಡಿರುವುದು ಗಮನ ಸೆಳೆದಿದೆ.
ಗೃಹ ಸಚಿವ ಅಮಿತ್ ಶಾ ಅವರು...
ಮತ್ತೊಂದು ಕಡೆ ಅಮಿತ್ ಶಾ ಅವರ ಬಗ್ಗೆಯೂ ಆರ್‌ಎಸ್‌ಎಸ್ ಮುಖ್ಯಸ್ಥರು ಮಾತನಾಡಿ 'ಹಿಂಸಾಚಾರ ಭುಗಿಲೆದ್ದಾಗ ಮಣಿಪುರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ ಅವರು 3 ದಿನ ಅಲ್ಲಿ ತಂಗಿದ್ದರು. ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸಲು ಸಂಘದ ಕಾರ್ಯಕರ್ತರೂ ಶ್ರಮಿಸಿದ್ದರು. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಜನರ ಭಾವನೆಗಳನ್ನು ಕೆರಳಿಸುವ ಮೂಲಕ ಮತ ಸೆಳೆಯುವ ಯತ್ನ ನಡೆಯುತ್ತಿದೆ. ಇದರ ಬಗ್ಗೆ ಜನ ಎಚ್ಚರದಿಂದ ಇರಬೇಕು. ದೇಶದ ಏಕತೆ, ಸಮಗ್ರತೆ ಅಸ್ಮಿತೆ ಮತ್ತು ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಳ್ಳಬೇಕು' ಅಂತಾ ಹೇಳಿದ್ದಾರೆ ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್.\

ಒಟ್ನಲ್ಲಿ ಮಣಿಪುರದಲ್ಲಿ ಹಿಂಸಾಚಾರ ಹಿಡಿತಕ್ಕೆ ಬಂದು, ಪರಿಸ್ಥಿತಿ ಮೊದಲಿನ ರೀತಿ ಆಗಲಿ ಎಂಬುದೇ ಎಲ್ಲರ ಆಶಯ. ಈಗಾಗಲೆ ಹಿಂಸೆಯ ಭೀಕರತೆಗೆ ನೂರಾರು ಜನರು ಬಲಿಯಾಗಿ ಸಾವಿರಾರು ಜನ ಆಸ್ಪತ್ರೆಗೆ ಸೇರಿದ್ದಾರೆ. ಹಾಗೇ ಲಕ್ಷಾಂತರ ಅಮಾಯಕರು ತಮ್ಮ ಮನೆಯ ಕಳೆದುಕೊಂಡು, ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಡಿ ದೇಶ ಮಣಿಪುರ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದೆ.












Click it and Unblock the Notifications