ಉತ್ತರಾಖಂಡದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 1,000 ರೂ. ನೀಡುತ್ತೇವೆ: ಕೇಜ್ರಿವಾಲ್
ಡೆಹ್ರಾಡೂನ್, ಡಿಸೆಂಬರ್ 14: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಉತ್ತರಾಖಂಡದಲ್ಲೂ ಮಹಿಳೆಯರಿಗಾಗಿ ಘೋಷಣೆಯೊಂದನ್ನು ಮಾಡಿದ್ದಾರೆ. "ಉತ್ತರಾಖಂಡದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಮಹಿಳೆಯರಿಗೂ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ನೀಡಲಾಗುತ್ತದೆ," ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕುಮಾನ್‌ನ ಯುಎಸ್ ನಗರದ ಕಾಶಿಪುರ ಪ್ರದೇಶಕ್ಕೆ ತಮ್ಮ ಒಂದು ದಿನದ ಭೇಟಿಯ ವೇಳೆಯಲ್ಲಿ ಅರವಿಂದ್ ಕೇಜ್ರಿವಾಲ್ ಈ ಘೋಷಣೆಯನ್ನು ಮಾಡಿದ್ದಾರೆ. ಯುಎಸ್ ನಗರವು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ತವರು ಜಿಲ್ಲೆ ಆಗಿದೆ.
"ನನಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಎಲ್ಲಾ ಮಾಧ್ಯಮಗಳು ಈ ಬಗ್ಗೆ ಮಾತನಾಡುತ್ತಾರೆ. ಈ ಹಣ ಎಲ್ಲಿಂದ ಬರುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ಉತ್ತರಾಖಂಡದ ಬಜೆಟ್ ಸರಿ ಸುಮಾರು 55000 ಕೋಟಿ ಆಗಿದೆ," ಎಂದು ತಿಳಿಸಿದ್ದಾರೆ.

ಹಣ ಎಲ್ಲಿಂದ ಬರುತ್ತದೆ?: ಅರವಿಂದ್ ಕೇಜ್ರಿವಾಲ್ ಹೇಳುವುದು ಹೀಗೆ..
"ಈ ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲವೇ? ಕೆಲವರು ಇಲ್ಲಿ ಶೇಕಡ 60 ರಷ್ಟು ಭ್ರಷ್ಟಾಚಾರ ಇದೆ ಎಂದು ಹೇಳಿದರೆ, ಇನ್ನೂ ಕೆಲವರು ಇಲ್ಲಿ ಶೇಕಡ 80 ರಷ್ಟು ಭ್ರಷ್ಟಾಚಾರ ಇದೆ ಎಂದು ಹೇಳುತ್ತಾರೆ. ನಾವು ಹೇಳುತ್ತೇವೆ ಇಲ್ಲಿ ಶೇಕಡ 20 ರಷ್ಟು ಭ್ರಷ್ಟಾಚಾರ ಇದೆ. ರಾಜ್ಯದ ಬಜೆಟ್‌ನ ಶೇಕಡ 20 ರಷ್ಟು ಅಂದರೆ 55,000 ಕೋಟಿ ರೂಪಾಯಿಇಲ್ಲಿ ಸುಮಾರು 11000 ಕೋಟಿ ರೂಪಾಯಿ ರಾಜಕಾರಣಿಗಳ ಜೇಬಿಗೆ ಹಾಗೂ ಸ್ವಿಸ್ ಬ್ಯಾಂಕಿಗೆ ಹೋಗುತ್ತದೆ," ಎಂದು ಅರವಿಂದ್ ಕೇಜ್ರಿವಾಲ್ ವಿವರಿಸಿದ್ದಾರೆ. "ಈ ಯೋಜನೆಗೆ ವರ್ಷಕ್ಕೆ ಸುಮಾರು 3000 ಕೋಟಿ ಬೇಕಾಗುತ್ತದೆ. ನಾನು ಸ್ವಿಸ್ ಬ್ಯಾಂಕಿಗೆ ಹಣ ಹೋಗುವುದನ್ನು ನಿಲ್ಲಿಸುತ್ತೇನೆ. ಸ್ವಿಸ್ ಬ್ಯಾಂಕಿಗೆ ಆ ಹಣ ಹೋಗುವ ಬದಲಾಗಿ ಮಹಿಳೆಯರಿಗೆ ಹೋಗುತ್ತದೆ. ಇದನ್ನು ನೀವು ಎಲ್ಲರಿಗೂ ಹೇಳಿ," ಎಂದು ಕೂಡಾ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಅರವಿಂದ್ ಕೇಜ್ರಿವಾಲ್ ಘೋಷಣೆಗಳು
ಉತ್ತರಾಖಂಡಕ್ಕೆ ಕೇಜ್ರಿವಾಲ್ ಇದು ಐದನೇ ಬಾರಿಗೆ ಭೇಟಿ ನೀಡುತ್ತಿದ್ದಾರೆ. ನವೆಂಬರ್ 21 ರಂದು ಹರಿದ್ವಾರಕ್ಕೆ ಭೇಟಿ ನೀಡಿದ್ದ ಅರವಿಂದ್ ಕೇಜ್ರಿವಾಲ್, "ಉತ್ತರಾಖಂಡದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಎಎಪಿ ಸರ್ಕಾರವು ಒದಗಿಸುವ ಉಚಿತ ತೀರ್ಥಯಾತ್ರೆಯ ಸೇವೆಯನ್ನು ರಾಜ್ಯದ ಜನರಿಗೆ ಒದಗಿಸುತ್ತೇವೆ," ಎಂದು ಘೋಷಿಸಿದರು. ಸೆಪ್ಟೆಂಬರ್‌ನಲ್ಲಿ ನೈನಿತಾಲ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕೇಜ್ರಿವಾಲ್ ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ, ಅದು ರಾಜ್ಯದ ಪ್ರತಿ ಮನೆಯಲ್ಲೂ (ಹರ್ ಘರ್ ರೋಜ್‌ಗಾರ್) ಉದ್ಯೋಗ ನೀಡುವುದಾಗಿ ಮತ್ತು ನಿರುದ್ಯೋಗಿ ಯುವಕರಿಗೆ 5000 ಸ್ಟೈಫಂಡ್ ನೀಡುವುದಾಗಿ ಘೋಷಿಸಿದರು.
ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದ ಆರು ತಿಂಗಳೊಳಗೆ 1 ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿಯೂ ಘೋಷಣೆ ಮಾಡಿದ್ದರು. ಆಗಸ್ಟ್ 17 ರಂದು, ಕೇಜ್ರಿವಾಲ್ ರಾಜ್ಯಕ್ಕೆ ಭೇಟಿ ನೀಡಿದಾಗ, ಅವರು ಕರ್ನಲ್ ಅಜಯ್ ಕೊಥಿಯಾಲ್ (ನಿವೃತ್ತ) ಅವರನ್ನು 2002 ರ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಮುಖ ಎಂದು ಘೋಷಿಸಿದರು. ಜಗತ್ತಿನಾದ್ಯಂತ ಇರುವ ಹಿಂದೂಗಳಿಗೆ ಉತ್ತರಾಖಂಡವನ್ನು ಎಎಪಿ ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಮಾಡುವುದಾಗಿ ಕೇಜ್ರಿವಾಲ್ ಘೋಷಿಸಿದ್ದರು. ಜುಲೈ 11 ರಂದು, ಕೇಜ್ರಿವಾಲ್ ರಾಜ್ಯಕ್ಕೆ ಭೇಟಿ ನೀಡಿದಾಗ, ಆಪ್ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದರು.
ಇನ್ನು ಈಗಾಗಲೇ ಎಎಪಿ ಅಧಿಕಾರಕ್ಕೆ ಬಂದರೆ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಮಹಿಳೆಯರಿಗೂ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಗೋವಾ ಹಾಗೂ ಪಂಜಾಬ್‌ನಲ್ಲಿ ಘೋಷಣೆ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications