ಗಂಡ-ಮಗಳನ್ನು ಕಳೆದುಕೊಂಡರೂ ಕುಗ್ಗಲಿಲ್ಲ; ಒಂದು ಕಣ್ಣಿಗೆ ಬ್ಯಾಂಡೇಜ್‌ನಲ್ಲೇ RAS ಗೆದ್ದ ರೋಹಿಣಿ!
ರಾಜಸ್ಥಾನದ ಸಣ್ಣ ಗ್ರಾಮದ ಮಹಿಳೆಯೊಬ್ಬರು ಎದುರಿಸಿದ ಸಂಕಷ್ಟಗಳು ಎಂಥವರನ್ನೂ ಕುಗ್ಗಿಸುವಂತಿದ್ದವು. ಆದರೆ ಪತಿ, 10 ವರ್ಷದ ಮಗಳು ಹಾಗೂ ಕಣ್ಣಿನ ದೃಷ್ಟಿಗೆ ಎದುರಾದ ಆಘಾತಗಳ ನಡುವೆಯೂ ಅವರು ತಮ್ಮ ಸರ್ಕಾರಿ ಅಧಿಕಾರಿಯಾಗುವ ಕನಸನ್ನು ಕೈಬಿಡಲಿಲ್ಲ. ಇದು ರಾಜಸ್ಥಾನದ ರೋಹಿಣಿ ಗುರ್ಜರ್ ಅವರ ಹೋರಾಟದ ಕಥೆ.
ರಾಜಸ್ಥಾನದ ಘುಘ್ರಾ ಗ್ರಾಮದ ರೋಹಿಣಿ ಗುರ್ಜರ್ ಬಾಲ್ಯದಿಂದಲೇ ಸರ್ಕಾರಿ ಅಧಿಕಾರಿಯಾಗುವ ಕನಸು ಕಂಡಿದ್ದರು. 2006ರಲ್ಲಿ ತಮ್ಮ ಗ್ರಾಮದ ಮೊದಲ ಪದವೀಧರ ಯುವತಿಯಾಗಿ ಹೊರಹೊಮ್ಮಿದ ಅವರು ಬಳಿಕ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಮದುವೆಯಾದ ನಂತರ ಪತಿಯೊಂದಿಗೆ ಸೇರಿ ಸರ್ಕಾರಿ ಉದ್ಯೋಗ ಪಡೆಯುವ ಗುರಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದ್ದರು.

ಹೃದಯಾಘಾತದಿಂದ ಪತಿ ಮೃತ
ಆದರೆ 2021ರಲ್ಲಿ ಹೃದಯಾಘಾತದಿಂದ ಪತಿ ಮೃತಪಟ್ಟರು. ಪತಿಯ ಅಗಲಿಕೆಯ ನೋವಿನ ನಡುವೆಯೇ ರೋಹಿಣಿ ಸಮಾಜದ ಟೀಕೆ ಹಾಗೂ ಅವಮಾನವನ್ನೂ ಎದುರಿಸಬೇಕಾಯಿತು. ಕೆಲವರು ಅವರನ್ನು 'ಮಾಟಗಾತಿ' ಎಂದು ಕರೆದಿದ್ದರು. ಈ ಎಲ್ಲ ನೋವುಗಳ ನಡುವೆಯೂ ಅವರು ತಮ್ಮ ಕನಸನ್ನು ಬಿಟ್ಟುಕೊಡಲಿಲ್ಲ.
Rohini Gurjar: 10 ವರ್ಷದ ಮಗಳು ಮೃತ
ಸುಮಾರು 15 ವರ್ಷಗಳ ಬಳಿಕ ಮತ್ತೆ ಪುಸ್ತಕಗಳನ್ನು ಕೈಗೆತ್ತಿಕೊಂಡ ರೋಹಿಣಿ 2023ರಲ್ಲಿ RAS ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ ಮುಂದಿನ ಹಂತದ ತಯಾರಿ ನಡೆಯುತ್ತಿರುವಾಗ ಮತ್ತೊಂದು ಭೀಕರ ಆಘಾತ ಎದುರಾಯಿತು. RAS ಮೇನ್ಸ್ ಪರೀಕ್ಷೆಗೆ ಕೇವಲ 8 ದಿನಗಳು ಬಾಕಿ ಇರುವಾಗ ಅವರ 10 ವರ್ಷದ ಮಗಳು ಮೃತಪಟ್ಟರು.
Rohini Gurjar: ಅಪಘಾತದಲ್ಲಿ ಕಣ್ಣಿಗೆ ಗಾಯ
ಮಗಳ ಸಾವಿನ ನೋವಿನಿಂದ ಹೊರಬರುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿತು. ಕೇವಲ ಎರಡು ದಿನಗಳ ಬಳಿಕ ನಡೆದ ಅಪಘಾತದಲ್ಲಿ ಅವರ ಒಂದು ಕಣ್ಣಿಗೆ ಗಂಭೀರ ಗಾಯವಾಯಿತು. ಕಣ್ಣಿಗೆ ಬ್ಯಾಂಡೇಜ್ ಹಾಕಿಕೊಂಡಿದ್ದರೂ ಕುಟುಂಬದ ಸದಸ್ಯರು ಪರೀಕ್ಷೆಗೆ ಹಾಜರಾಗುವಂತೆ ಧೈರ್ಯ ತುಂಬಿದರು.
ಕುಟುಂಬದ ಬೆಂಬಲದೊಂದಿಗೆ ರೋಹಿಣಿ ನೋವನ್ನು ಬದಿಗಿಟ್ಟು ಪರೀಕ್ಷಾ ಕೇಂದ್ರಕ್ಕೆ ತೆರಳಿದರು. ಒಂದು ಕಣ್ಣಿಗೆ ಬ್ಯಾಂಡೇಜ್ ಹಾಕಿಕೊಂಡೇ RAS ಮೇನ್ಸ್ ಪರೀಕ್ಷೆ ಬರೆದರು. ಅವರ ಪರಿಶ್ರಮ ವ್ಯರ್ಥವಾಗಲಿಲ್ಲ. ಮೇನ್ಸ್‌ನಲ್ಲಿ ಉತ್ತೀರ್ಣರಾಗಿ ಸಂದರ್ಶನ ಹಂತವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದರು.
RAS 2024ರಲ್ಲಿ MBC ವಿಧವಾ ವರ್ಗದಲ್ಲಿ ಎರಡನೇ ರ‍್ಯಾಂಕ್ ಪಡೆದುಕೊಂಡಿರುವ ರೋಹಿಣಿ ಗುರ್ಜರ್ ಇದೀಗ ರಾಜಸ್ಥಾನ ಅಕೌಂಟ್ಸ್ ಸರ್ವೀಸ್‌ಗೆ ಆಯ್ಕೆಯಾಗಿದ್ದಾರೆ. ಪತಿಯ ಸಾವಿನ ನೋವು, ಮಗಳ ಅಗಲಿಕೆ, ಕಣ್ಣಿನ ಗಂಭೀರ ಗಾಯ ಹಾಗೂ ಸಮಾಜದ ಟೀಕೆ ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ಕನಸಿನ ಹಾದಿಯಿಂದ ಹಿಂದೆ ಸರಿಯದ ರೋಹಿಣಿ ಗುರ್ಜರ್ ಅವರ ಕಥೆ, ಧೈರ್ಯ ಮತ್ತು ಸಂಕಲ್ಪಕ್ಕೆ ಪ್ರೇರಣೆಯಾಗಿದೆ.


Click it and Unblock the Notifications
