ನನ್ನನ್ನು ನಿಂದಿಸಬೇಡಿ, ಮೋದಿಗೆ ವಾದ್ರಾ 'ಎಫ್ಬಿ'ಯಲ್ಲಿ ಮನವಿ
ನವದೆಹಲಿ, ಮೇ 08: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ತಮ್ಮ ವಿರುದ್ಧ ಪ್ರಧಾನಿ ಮೋದಿ ಅವರು ವೈಯಕ್ತಿಕ ನಿಂದನೆ ಮಾಡುತ್ತಿರುವುದು ಅತ್ಯಂತ ದುಃಖ ತರಿಸಿದೆ ಎಂದು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಫೇಸ್ ಬುಕ್ ಪೋಸ್ಟ್ ನಲ್ಲಿ ಏನಿದೆ: ಪ್ರಧಾನಿ ಮೋದಿ ಅವರು ಚುನಾವಣಾ ಸಮಾವೇಶಗಳಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿ, ವೈಯಕ್ತಿಕ ನಿಂದನೆ ಮಾಡುತ್ತಿರುವುದು ತಿಳಿದು ಬಂದಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುವುದಾದರೆ ನನ್ನ ವಿರುದ್ಧ ನಿಂದನೆಯನ್ನು ಮಾಡಬೇಡಿ.

ದೇಶದಲ್ಲಿ ಬಡತನ, ನಿರುದ್ಯೋಗ, ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ವಿಷಯಗಳಿದ್ದು, ಈ ಬಗ್ಗೆ ಮಾತನಾಡದೆ, ನನ್ನ ವಿರುದ್ಧ ವಾಗ್ದಾಳಿ ನಡೆಸಿದ್ದೀರಿ, ಕಳೆದ ಐದು ವರ್ಷಗಳಿಂದ ನನ್ನ ಮೇಲೆ ನಿಮ್ಮ ಸರ್ಕಾರದಿಂದಲೇ ದೌರ್ಜನ್ಯವಾಗಿದೆ.
11 ಬಾರಿ ಸಮನ್ಸ್ ಸಿಕ್ಕಿದೆ. ಗಂಟೆಗಟ್ಟಲೇ ವಿಚಾರಣೆ ನಡೆಸಲಾಗಿದೆ. ನನ್ನ ಮೇಲಿನ ಆರೋಪ ಇನ್ನು ಸಾಬೀತಾಗಿಲ್ಲ. ಆದರೂ ನೀವು ನನ್ನ ಹೆಸರು ಉಲ್ಲೇಖಿಸಿ ನಿಂದಿಸುವುದು ಸರಿಯಲ್ಲ. ವಿಚಾರಣೆ ನಡೆಯುತ್ತಿರುವಾಗ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಿ, ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಮೋದಿ ಅವರು ಸಮಾವೇಶವೊಂದರಲ್ಲಿ ವಾದ್ರಾ ಅವರ ಹೆಸರು ಹೇಳದೆ ರೈತರನ್ನು ಲೂಟಿ ಮಾಡುತ್ತಿದ್ದ ಭ್ರಷ್ಟಾಚಾರಿಗಳನ್ನು ಈ ಚೌಕಿದಾರರನ್ನು ಕಟಕಟೆಗೆ ನಿಲ್ಲಿಸಿದ್ದಾನೆ. ರಾಜನಂತೆ ವರ್ತಿಸುತ್ತಿದ್ದವರು ನ್ಯಾಯಾಂಗ ವ್ಯವಸ್ಥೆಗೆ ತಲೆಬಾಗಬೇಕಿದೆ. ರೈತರಿಗೆ ನ್ಯಾಯ ಸಿಗಲಿದೆ ಎಂದಿದ್ದರು.












Click it and Unblock the Notifications