Ratan Tata: ಇದು ನಿಮ್ಮ ಸಿಂಹಾಸನ ಮೇಡಂ: ಮಹಿಳಾ ಪೈಲಟ್‌ಗೆ ರತನ್ ಟಾಟಾ ನೀಡಿದ ಗೌರವದ ಕಥೆ ಈಗ ಭಾರಿ ವೈರಲ್
Ratan Tata Inspirational Story: ಬಿಲಿಯನೇರ್‌ಗಳ ಜಗತ್ತಿನಲ್ಲಿ ಅಧಿಕಾರದ ಮದವೇ ವಿಜೃಂಭಿಸುವಾಗ, ಶಾಂತ ನಮ್ರತೆಯಿಂದ ಕೋಟ್ಯಂತರ ಜನರ ಹೃದಯ ಗೆದ್ದ ನಾಯಕ ರತನ್ ಟಾಟಾ ಆಗಿದ್ದರು. ನ್ಯೂಯಾರ್ಕ್‌ನಿಂದ ದೆಹಲಿಗೆ ಬಂದು ವಿಮಾನ ಲ್ಯಾಂಡ್ ಆದಾಗ, ದೇಶದ ಈ ಖ್ಯಾತ ಉದ್ಯಮಿಯು ಮಹಿಳಾ ಪೈಲಟ್‌ನ ಕಠಿಣ ಶ್ರಮಕ್ಕೆ ನೀಡಿದ ಆ ಒಂದು ಗೌರವ ಇಂದಿಗೂ ಅಜರಾಮರವಾಗಿ ಉಳಿದಿದೆ.
ಜನವರಿ 2021ರಲ್ಲಿ ಏರ್ ಇಂಡಿಯಾದ AI-176 ವಿಮಾನವು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಇತಿಹಾಸ ಸೃಷ್ಟಿಸಿತು. ಕ್ಯಾಪ್ಟನ್ ಝೋಯಾ ಅಗರ್ವಾಲ್ ನೇತೃತ್ವದ ಸಂಪೂರ್ಣ ಮಹಿಳಾ ವಿಮಾನ ಸಿಬ್ಬಂದಿ ಈ ಸಾಹಸಮಯ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಉತ್ತರ ಧ್ರುವದ ಮೇಲಿಂದ ಹಾರಾಟ ನಡೆಸಿದ ಈ ವಿಮಾನವು ಸುಮಾರು 16,000 ಕಿಲೋ ಮೀಟರ್ ದೂರವನ್ನು ತಡೆರಹಿತವಾಗಿ 17 ಗಂಟೆಗಳಲ್ಲಿ ಕ್ರಮಿಸಿ ವಿಶ್ವದಾಖಲೆ ಬರೆಯಿತು.

ಕ್ಯಾಪ್ಟನ್ ಝೋಯಾ ಅಗರ್ವಾಲ್ ಶ್ರಮದ ಹಾದಿ
ಕ್ಯಾಪ್ಟನ್ ಝೋಯಾ ಅವರ ಈ ಸಾಧನೆಯ ಹಿಂದಿನ ಶ್ರಮ ಅಪಾರವಾದ್ದದ್ದು. ಅವರು 2004ರಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಫಸ್ಟ್ ಆಫೀಸರ್ ಆಗಿ ಸೇರ್ಪಡೆಗೊಂಡರು. ತಮ್ಮ ಸತತ ಪರಿಶ್ರಮದಿಂದಾಗಿ 2013ರಲ್ಲಿ ಬೋಯಿಂಗ್ 777 ವಿಮಾನವನ್ನು ಹಾರಿಸಿದ ಅತ್ಯಂತ ಕಿರಿಯ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಮಾನಯಾನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅವರು ಅನೇಕ ಯುವತಿಯರಿಗೆ ಪ್ರೇರಣೆಯಾಗಿದ್ದಾರೆ.
ರತನ್ ಟಾಟಾರೊಂದಿಗೆ ಕಳೆದ ಅವಿಸ್ಮರಣೀಯ ಕ್ಷಣ
ಇದಾದ ಕೆಲವು ವರ್ಷಗಳ ನಂತರ ಕ್ಯಾಪ್ಟನ್ ಝೋಯಾ ಅವರಿಗೆ ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ಅವರನ್ನು ನ್ಯೂಯಾರ್ಕ್‌ನಿಂದ ದೆಹಲಿಗೆ ಕರೆತರುವ ವಿಮಾನದ ಪೈಲಟ್ ಆಗುವ ಅವಕಾಶ ಸಿಕ್ಕಿತು. ವಿಮಾನವು ದೆಹಲಿ ತಲುಪಿ ಲ್ಯಾಂಡ್ ಆದ ನಂತರ, ಝೋಯಾ ಅವರು ರತನ್ ಟಾಟಾ ಅವರೊಂದಿಗೆ ನೆನಪಿಗಾಗಿ ಒಂದು ಫೋಟೋ ತೆಗೆದುಕೊಳ್ಳಲು ಕಾಕ್ಪಿಟ್‌ಗೆ ಬಂದು ತಮ್ಮ ಪೈಲಟ್ ಸೀಟ್‌ನಿಂದ ಎದ್ದು ನಿಂತರು.
ಆಗ ರತನ್ ಟಾಟಾ ಅವರು ಝೋಯಾ ಅವರನ್ನು ತಡೆದು, 'ಕ್ಯಾಪ್ಟನ್ ಇದು ನಿಮ್ಮ ಸಿಂಹಾಸನ. ನಿಮ್ಮ ಶ್ರಮದಿಂದ ನೀವು ಇದನ್ನು ಗಳಿಸಿದ್ದೀರಿ,' ಎಂದು ಗೌರವದಿಂದ ಹೇಳಿದರು. ಅಷ್ಟೇ ಅಲ್ಲದೆ ರತನ್ ಟಾಟಾ ಅವರೇ ಸ್ವತಃ ಝೋಯಾ ಕುಳಿತಿದ್ದ ಸೀಟ್‌ನ ಹಿಂಭಾಗದಲ್ಲಿ ನಿಂತು ಅತ್ಯಂತ ನಮ್ರತೆಯಿಂದ ಫೋಟೋಗೆ ಪೋಸ್ ನೀಡಿದರು. ಅತ್ಯುನ್ನತ ಸ್ಥಾನದಲ್ಲಿದ್ದ ಉದ್ಯಮಿಯೊಬ್ಬರು ಒಬ್ಬ ಪೈಲಟ್‌ನ ಕಠಿಣ ಶ್ರಮಕ್ಕೆ ನೀಡಿದ ಗೌರವ ಅದಾಗಿತ್ತು.
ದಶಕಗಳ ಕಾಲ ಟಾಟಾ ಗ್ರೂಪ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ರತನ್ ಟಾಟಾ ಅವರ ನೇತೃತ್ವದಲ್ಲಿ, ಟಾಟಾ ಸಂಸ್ಥೆಯು 2022ರ ಆರಂಭದಲ್ಲಿ ಏರ್ ಇಂಡಿಯಾ ಕಂಪನಿಯನ್ನು ಸರ್ಕಾರದ ಕೈಯಿಂದ ಮರಳಿ ಸ್ವಾಧೀನಪಡಿಸಿಕೊಂಡಿತು. 2024ರ ಅಕ್ಟೋಬರ್ 9ರಂದು ಅವರು ಮುಂಬೈನಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.
ರತನ್ ಟಾಟಾ ಅಗಲಿಕೆಯ ನಂತರ ಕ್ಯಾಪ್ಟನ್ ಝೋಯಾ ಅವರು ಈ ಸವಿ ನೆನಪಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಈ ಫೋಟೋವನ್ನು ತಮ್ಮ ವೈಯಕ್ತಿಕ ಪ್ರೇರಣೆಗಾಗಿ ಮಾತ್ರ ಇಟ್ಟುಕೊಂಡಿದ್ದೇನೆ. ಆದರೆ ಟಾಟಾ ಅವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈಗ ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಿರುವುದಾಗಿಯೂ ಅವರು ತಿಳಿಸಿದರು.
ಈ ಘಟನೆಯಿಂದ ಕಲಿಯಬೇಕಾದ ಮಹತ್ವದ ಪಾಠಗಳು
* ನಿಜವಾದ ನಾಯಕತ್ವಕ್ಕೆ ದೊಡ್ಡ ಪ್ರಚಾರ ಅಥವಾ ಪ್ರದರ್ಶನದ ಅಗತ್ಯ ಇರುವುದಿಲ್ಲ. ಅದು ಇತರರಿಗೆ ಸೂಕ್ತ ಗೌರವ ನೀಡುವ ಸಣ್ಣ ಸಣ್ಣ ಕ್ಷಣಗಳಲ್ಲಿ ವ್ಯಕ್ತವಾಗುತ್ತದೆ.
* ಅಧಿಕಾರ ಅಥವಾ ಹಣದ ಗತ್ತು ಸದಾ ಸದ್ದು ಮಾಡುತ್ತದೆ. ಆದರೆ ನಿಜವಾದ ಗೌರವ ಮತ್ತು ನಮ್ರತೆ ಶಾಂತವಾಗಿರುತ್ತದೆ.
* ಇನ್ನೊಬ್ಬರ ಶ್ರಮವನ್ನು ಗುರುತಿಸಿ ಅವರಿಗೆ ಸಿಗಬೇಕಾದ ಗೌರವವನ್ನು ನೀಡುವುದರಿಂದ ಪರಸ್ಪರ ನಂಬಿಕೆ ಮತ್ತು ಗೌರವ ಹೆಚ್ಚಾಗುತ್ತದೆ.


Click it and Unblock the Notifications
