ಡಬಲ್ ಅಲ್ಲ 7 ರೂಪಾಂತರಿ ಹೊಂದಿರುವ ಲ್ಯಾಂಬ್ಡಾ: ಎಚ್ಚರ ತಪ್ಪದಿರಿ ಜೋಕೆ!
ನವದೆಹಲಿ, ಜು.10: ಇತರ ಕೊರೊನಾವೈರಸ್ ತಳಿಗಳಿಗೆ ಹೋಲಿಸಿದಾಗ ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನಲ್ಲಿ ಸಿ .37 ವಂಶಾವಳಿ ಅಥವಾ ಲ್ಯಾಂಬ್ಡಾ ರೂಪಾಂತರದ ಪಾತ್ರವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನಗಳು ಬೇಕಾಗುತ್ತವೆ. ಆದರೆ ನಾವು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಜನರಲ್ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ನೀಡಿದ ಹೇಳಿಕೆಗಳನ್ನು ಪರಿಶೀಲಿಸಿದಾಗ ನಿಜಕ್ಕೂ ನಾವು ಆತಂಕಕ್ಕೆ ಒಳಗಾಗಬೇಕಾಗುವ ಕೆಲವು ಅಂಶಗಳು ಲಭಿಸುತ್ತದೆ.
ಡಾ ಟೆಡ್ರೊಸ್, ಲ್ಯಾಂಬ್ಡಾ ರೂಪಾಂತರವನ್ನು ಡೆಲ್ಟಾ ರೂಪಾಂತರದೊಂದಿಗೆ ಹೋಲಿಸಿದ್ದಾರೆ. ಡೆಲ್ಟಾ ಪ್ರಸ್ತುತ ವಿಶ್ವದಾದ್ಯಂತ ಹೆಚ್ಚು ಪ್ರಾಬಲ್ಯವಿರುವ ಕೊರೊನಾವೈರಸ್ ತಳಿಯಾಗಿದೆ. "ಡೆಲ್ಟಾದಂತಹ ಪ್ರಬಲವಾದ ಕೋವಿಡ್ ವೈರಸ್ ರೂಪಾಂತರದ ಹೊರಹೊಮ್ಮುವಿಕೆಯ ಬಗ್ಗೆ ನಾನು ಚಿಂತೆ ಮಾಡುತ್ತೇನೆ," ಎಂದು ಟೆಡ್ರೊಸ್ ಹೇಳಿದ್ದಾರೆ.
2020 ರ ಆಗಸ್ಟ್‌ನಲ್ಲಿ ಪೆರುವಿನಲ್ಲಿ ಹುಟ್ಟಿದ ಕೊರೊನಾವೈರಸ್‌ನ ಹೊಸ ರೂಪಾಂತರವು ಇದುವರೆಗೆ 31 ದೇಶಗಳಿಗೆ ಹರಡಿದೆ. ಇನ್ನು ಕೋವಿಡ್ -19 ರ ವೈಜ್ಞಾನಿಕ ದತ್ತಾಂಶ ಸಂಗ್ರಾಹಕ GISAID ದತ್ತಾಂಶದ ಪ್ರಕಾರ, ಲ್ಯಾಂಬ್ಡಾ ರೂಪಾಂತರದ ವಂಶಾವಳಿಯ 2,253 ಜೀನೋಮ್ ಅನುಕ್ರಮಗಳು ವಿವಿಧ ದೇಶಗಳಲ್ಲಿ ಈವರೆಗೆ ಪತ್ತೆಯಾಗಿವೆ. ಯುಕೆಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿದ್ದರೂ, ಲ್ಯಾಂಬ್ಡಾ ರೂಪಾಂತರದ ಹೊಂದಿರುವ ಮಾದರಿಗಳನ್ನು ದೇಶದಾದ್ಯಂತ ಕಂಡು ಬಂದಿದೆ. ಯುಎಸ್‌ನಲ್ಲಿ 50 ರಾಜ್ಯಗಳಲ್ಲಿ, ಇದುವರೆಗೆ 43 ರಾಜ್ಯಗಳಲ್ಲಿ ಪತ್ತೆಯಾಗಿದೆ. ಇಸ್ರೇಲ್, ಸ್ಪೇನ್, ಜರ್ಮನಿ, ಇಟಲಿ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಟರ್ಕಿ, ಮತ್ತು ಆಸ್ಟ್ರೇಲಿಯಾದಂತಹ ಇತರ ದೇಶಗಳಲ್ಲೂ ಲ್ಯಾಂಬ್ಡಾ ರೂಪಾಂತರ ಪತ್ತೆಯಾಗಿದೆ. ಡೆಲ್ಟಾ ರೂಪಾಂತರದಿಂದಾಗಿ ಉಂಟಾಗುವ ಕೋವಿಡ್ ಒತ್ತಡದಲ್ಲಿ ಹೆಚ್ಚಿನ ದೇಶಗಳು ಇನ್ನೂ ತತ್ತರಿಸುತ್ತಿದೆ. ಈಗ ಲ್ಯಾಂಬ್ಡಾ ರೂಪಾಂತರದ ಶೀಘ್ರ ಹರಡುವಿಕೆಯು ಜಗತ್ತಿಗೆ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡಲಿದೆ.

ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿದೆ ಲ್ಯಾಂಬ್ಡಾ
ಮೇ ಮತ್ತು ಜೂನ್ ತಿಂಗಳಲ್ಲಿ ಪೆರುವಿನಲ್ಲಿ ಶೇ. 82 ರಷ್ಟು ಪ್ರಕರಣಗಳು ಲ್ಯಾಂಬ್ಡಾ ರೂಪಾಂತರದಿಂದಾಗಿವೆ. ಆದರೆ ಅದೇ ಅವಧಿಯಲ್ಲಿ ಚಿಲಿಯಲ್ಲಿ ಶೇ.32 ಪ್ರಕರಣಗಳು ಲ್ಯಾಂಬ್ಡಾ ರೂಪಾಂತರವಾಗಿದೆ. ಅರ್ಜೆಂಟೀನಾವು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.37 ರಷ್ಟು ಕೊರೊನಾದ ಲ್ಯಾಂಬ್ಡಾ ರೂಪಾಂತರ ಪ್ರಕರಣಗಳನ್ನು ಹೊಂದಿದೆ ಎಂದು ದತ್ತಾಂಶ ತಿಳಿಸಿದೆ. ಪೆರುವಿನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಮರಣ ಪ್ರಮಾಣ ವರದಿಯಾಗಿದೆ. ದಕ್ಷಿಣ ಅಮೆರಿಕದ ಇತರ ದೇಶಗಳಲ್ಲಿ, ಅಂದರೆ ಅರ್ಜೆಂಟೀನಾ, ಬ್ರೆಜಿಲ್, ಕೊಲಂಬಿಯಾ, ಈಕ್ವೆಡಾರ್ ಮತ್ತು ಮೆಕ್ಸಿಕೊಗಳಲ್ಲಿಯೂ ಈ ರೂಪಾಂತರವು ವೇಗವಾಗಿ ಹರಡುತ್ತಿದೆ.

ಅಸಾಮಾನ್ಯ ಕೋವಿಡ್ ರೂಪಾಂತರಗಳ ತಳಿ ಲಾಂಬ್ಡಾ
''ಲ್ಯಾಂಬ್ಡಾ ತಳಿಯ ಬಗ್ಗೆ ಈಗ ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ. ಅಂದರೆ ಈವರೆಗೆ ಈ ತಳಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಈ ತಳಿಯ ಬಗ್ಗೆ ಸಂಪೂರ್ಣ ಮಾಹಿತಿ ಲಭಿಸುವಷ್ಟರಲ್ಲಿ ಇದರಲ್ಲಿ ಅನೇಕ ಅಸಾಮಾನ್ಯ ಆನುವಂಶಿಕ ಬದಲಾವಣೆಗಳು ಉಂಟಾಗುವ ಸಾಧ್ಯತೆಯಿದೆ. ಇದು ಹೆಚ್ಚು ಸಮಸ್ಯೆಯನ್ನೂ ಉಂಟು ಮಾಡಬಹುದು. ಮಾನವ ಜೀವಕೋಶಗಳ ಮೇಲೆ ಆಕ್ರಮಣ ಮಾಡಲು ವೈರಸ್ ಬಳಸುವ ಸ್ಪೈಕ್ ಪ್ರೋಟೀನ್ ಭಾಗದಲ್ಲಿ ಎರಡು ರೂಪಾಂತರಗಳನ್ನು ಕಂಡಿದ್ದರಿಂದ ಡೆಲ್ಟಾ ರೂಪಾಂತರವನ್ನು ಆರಂಭದಲ್ಲಿ ಡಬಲ್ ರೂಪಾಂತರಿತ ಎಂದು ಕರೆಯಲಾಗುತ್ತಿತ್ತು. ಲ್ಯಾಂಬ್ಡಾ ರೂಪಾಂತರದ ಸ್ಪೈಕ್ ಪ್ರೋಟೀನ್ ಏಳು ರೂಪಾಂತರಗಳನ್ನು ಕಂಡಿದೆ. ರೂಪಾಂತರಗಳಲ್ಲಿ ಒಂದಾದ L452Q ಹೆಚ್ಚು ಸಾಂಕ್ರಾಮಿಕವಾಗಿರಬಹುದು. ಯಾಕೆಂದರೆ ಈ ರೂಪಾಂತರವು ಡೆಲ್ಟಾ ರೂಪಾಂತರದ L452R ರೂಪಾಂತರವನ್ನು ಹೋಲುತ್ತದೆ. ಇದು ಇತರ ಕೊರೊನಾವೈರಸ್ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ,'' ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಇನ್ನು ಒಟ್ಟಾರೆಯಾಗಿ, ರೂಪಾಂತರವು ಶೇ. 75 ರಷ್ಟು ರೂಪಾಂತರವನ್ನು ಕಂಡಿದೆ ಎನ್ನಲಾಗಿದೆ.

ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಹರಡುತ್ತದೆಯೇ?
ಪೆರುವಿನ ಜೀವಶಾಸ್ತ್ರಜ್ಞರು ಲ್ಯಾಂಬ್ಡಾ ತಳಿಯು ಹೆಚ್ಚು ಹರಡಬಲ್ಲದು ಎಂದು ಹೇಳುತ್ತಾರೆ. ಲಿಮಾದ ಕೆಯೆಟಾನೊ ಹೆರೆಡಿಯಾ ವಿಶ್ವವಿದ್ಯಾಲಯದ ಜೀವಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ವೈದ್ಯ ಡಾ. ಪ್ಯಾಬ್ಲೊ ಟ್ಸುಕಯಾಮಾ ಪ್ರಕಾರ, ಲ್ಯಾಂಬ್ಡಾದ ಹರಡುವಿಕೆಯು ಇತರ ಕೊರೊನಾವೈರಸ್ ರೂಪಾಂತರಗಳಿಗಿಂತ ಹೆಚ್ಚಾಗಿದೆ. ಲಿಮಾ ಪೆರುವಿನ ರಾಜಧಾನಿ. ಡಿಸೆಂಬರ್‌ನಲ್ಲಿ ಡಾ. ಪ್ಯಾಬ್ಲೊ ಸುಕಯಾಮಾರನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಟೈಮ್ಸ್ ಮಾಡಿದ ವರದಿಯ ಪ್ರಕಾರ, ಲ್ಯಾಂಬ್ಡಾ ರೂಪಾಂತರವು 200 ಮಾದರಿಗಳಲ್ಲಿ ಒಂದಾಗಿದೆ. ಮಾರ್ಚ್‌ನಲ್ಲಿ ಶೇ.50 ಹಾಗೂ ಜೂನ್ ವೇಳೆಗೆ ಶೇ.80 ಕ್ಕೆ ಏರಿಕೆಯಾಗಿದೆ. ಲ್ಯಾಂಬ್ಡಾ ರೂಪಾಂತರಗಳ ಬಗ್ಗೆಗಿನ ಅಧ್ಯಯನವು ಇನ್ನೂ ಕೊನೆಗೊಂಡಿಲ್ಲ. ಆದರೆ ಲಾಂಬ್ಡಾವು ಸಾಂಕ್ರಾಮಿಕತೆಯನ್ನು 2 ಪಟ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. ಮತ್ತೊಂದು ಅಧ್ಯಯನವು ಲ್ಯಾಂಬ್ಡಾದ ರೂಪಾಂತರವು ಆಲ್ಫಾ ಮತ್ತು ಗಾಮಾ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಕಂಡುಹಿಡಿದಿದೆ. ಈ ಲ್ಯಾಂಬ್ಡಾ ತಳಿ ಡೆಲ್ಟಾ ತಳಿಗಿಂತ ಹೆಚ್ಚು ಸಾಂಕ್ರಾಮಿಕ ಎಂದು ಸಾಬೀತಾದರೆ, ಪ್ರಪಂಚದಾದ್ಯಂತ ಹೆಚ್ಚು ವೇಗವಾಗಿ ಹರಡಿದರೆ, ಅದು ಕೂಡಾ ಶೀಘ್ರದಲ್ಲೇ ಡೆಲ್ಟಾದಂತೆ ಆತಂಕಕಾರಿ ಕೊರೊನಾವೈರಸ್ ರೂಪಾಂತರವಾಗಲಿದೆ.

ಲಸಿಕೆ ಲ್ಯಾಂಬ್ಡಾವನ್ನು ತಟಸ್ಥಗೊಳಿಸುತ್ತದೆಯೇ?
ಲ್ಯಾಂಬ್ಡಾ ರೂಪಾಂತರದ ಬಗ್ಗೆ ಸೀಮಿತ ಸಂಖ್ಯೆಯ ಅಧ್ಯಯನಗಳು ಸೂಚಿಸಿದಂತೆ, ಅಸ್ತಿತ್ವದಲ್ಲಿರುವ ಎಂಆರ್‌ಎನ್‌ಎ ಲಸಿಕೆಗಳು ಲ್ಯಾಂಬ್ಡಾ ರೂಪಾಂತರವನ್ನು ತಟಸ್ಥಗೊಳಿಸಲು ಸಮರ್ಥವಾಗಿವೆ. ಆದರೆ ಈ ಕೊರೊನಾವೈರಸ್ ರೂಪಾಂತರದ ವಿರುದ್ಧ ಲಸಿಕೆ ಪರಿಣಾಮಕಾರಿತ್ವವನ್ನು ದೃಢೀಕರಿಸಲು ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದೆ.

ಭಾರತಕ್ಕೆ ಆತಂಕಕಾರಿಯಾಗಲಿದೆಯೇ ಈ ಲ್ಯಾಂಬ್ಡಾ?
ಭಾರತಕ್ಕೆ ಭೀತಿ ಹುಟ್ಟಿಸಲಿದೆ ಈ ಲ್ಯಾಂಬ್ಡಾ? ಹೌದು, ಏಕೆಂದರೆ ಏಕೆಂದರೆ ಅಮೆರಿಕ ಮತ್ತು ಯುರೋಪಿಯನ್ ದೇಶಗಳ ನಡುವೆ ಭಾರತ ಪ್ರಯಾಣ ಹೊಂದಿದೆ. ಸಾಂಕ್ರಾಮಿಕ ವೈರಸ್ ಹಂತ ಹಂತವಾಗಿ ಹರಡುತ್ತದೆ. ಎಚ್ಚರ ತಪ್ಪಿದರೆ ಇದು ಅಂತಿಮವಾಗಿ ದೇಶಾದ್ಯಂತ ಮಾರಕವಾದ ಎರಡನೇ ಕೋವಿಡ್ ಅಲೆಗಿಂತ ಅಧಿಕ ಪರಿಣಾಮ ಬೀರಲಿದೆ. ಮತ್ತೊಂದು ಅಲೆಗೆ ಕಾರಣವಾಗಬಹುದು. ನಾವು ಬಹುಶಃ ವಿನಾಶಕಾರಿ ಮೂರನೇ ಕೋವಿಡ್ ಅಲೆಯತ್ತ ಮುಖ ಮಾಡಿದ್ದೇವೆ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಜನರು ಎಚ್ಚರದಿಂದ ಇರುವುದು ಅಗತ್ಯ. ಹಾಗೆಂದು ಜನರು ಆತಂಕಕ್ಕೆ ಒಳಗಾಗಬೇಕಿಲ್ಲ. ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಸಾಕು ಎಂದು ಹೇಳುತ್ತಾರೆ ತಜ್ಞರು. ಈವರೆಗೆ ಭಾರತದಲ್ಲಿ ಯಾವುದೇ ಲ್ಯಾಂಬ್ಡಾ ರೂಪಾಂತರ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ. ಆದರೆ ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಪ್ರಯಾಣದೊಂದಿಗೆ ಲ್ಯಾಂಬ್ಡಾ ರೂಪಾಂತರ ಬರುವ ಸಾಧ್ಯತೆಯನ್ನು ನಾವು ತಳ್ಳಿಹಾಕುವಂತಿಲ್ಲ. ಭಾರತದಲ್ಲಿ ಲ್ಯಾಂಬ್ಡಾ ರೂಪಾಂತರದ ಪ್ರಕರಣಗಳು ಪತ್ತೆಯಾದ ನಂತರ, ಡೆಲ್ಟಾ ರೂಪಾಂತರದಂತೆ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಬಹುದು.
ಎರಡನೇ ಕೋವಿಡ್ ಅಲೆಯ ಹಿಂದಿನ ಮೊದಲ ಕಾರಣ ಡೆಲ್ಟಾ ರೂಪಾಂತರವಾಗಿದೆ. ಈಗ ಡೆಲ್ಟಾ ರೂಪಾಂತರವು ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ. ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಮುಖ್ಯ ಕಾರಣವೇ ಡೆಲ್ಟಾ ಎಂದು ಭಾರತವೂ ಒಪ್ಪಿಕೊಂಡಿದೆ. ಹಾಗಿರುವಾಗ ಈಗ ಲ್ಯಾಂಬ್ಡಾ ರೂಪಾಂತರದ ವಿಚಾರದಲ್ಲಿ ಭಾರತವು ಎಚ್ಚರಿಕೆಯ ಮಾರ್ಗವನ್ನು ತೆಗೆದುಕೊಳ್ಳಬೇಕು. ದೇಶದಲ್ಲಿ ಬಳಸುವ ಲಸಿಕೆಗಳು ಲ್ಯಾಂಬ್ಡಾವನ್ನು ತಟಸ್ಥಗೊಳಿಸಬಹುದಾದ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ. ಆ ಬಗ್ಗೆ ಅಧ್ಯಯನ ತಿಳಿಸಿದೆ. ಆದರೆ ಭಾರತದಲ್ಲಿ ಇರುವ ಕೋವಿಶೀಲ್ಡ್, ಕೊವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆಗಳು ಲ್ಯಾಂಬ್ಡಾ ವಿರುದ್ದ ಪರಿಣಾಮಕಾರಿಯೇ? ಲ್ಯಾಂಬ್ಡಾವನ್ನು ತಟಸ್ಥಗೊಳಿಸುತ್ತದೆಯೇ ಎಂಬ ಬಗ್ಗೆ ಯಾವುದೇ ಅಧ್ಯಯನಗಳಿಲ್ಲ. ನಮ್ಮ ಜನಸಂಖ್ಯೆಯ ಶೇ.70 ಕ್ಕಿಂತ ಅಧಿಕ ಜನರು ಇನ್ನೂ ಲಸಿಕೆ ಪಡೆದಿಲ್ಲ ಎಂಬುವುದು ಕೂಡಾ ಈ ಸಂದರ್ಭದಲ್ಲಿ ಗಮನಾರ್ಹ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications