ಸುಪ್ರೀಂ ಕೋರ್ಟ್ ನಮ್ದೇ, ನ್ಯಾಯಾಂಗವೂ ನಮ್ದೇ ಎಂದ ಉ.ಪ್ರ ಸಚಿವ
"ಸುಪ್ರೀಂ ಕೋರ್ಟ್ ನಮ್ಮದು, ಹೌದಲ್ಲವಾ? ನ್ಯಾಯಾಂಗವು ನಮ್ಮದು, ದೇಶವೂ ನಮ್ಮದು ಮತ್ತು ದೇವಾಲಯವೂ ನಮ್ಮದೇ" ಎಂಬ ಉತ್ತರಪ್ರದೇಶದ ಸಚಿವ ಮುಕುಟ್ ಬಿಹಾರಿ ವರ್ಮಾ ಅವರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ವರ್ಮಾ ಅವರು ನಾಲ್ಕು ಬಾರಿ ಬಿಜೆಪಿಯಿಂದ ಆಯ್ಕೆಯಾದವರು ಹಾಗೂ ಸದ್ಯಕ್ಕೆ ಸಹಕಾರ ಸಚಿವರು.
ಮಂದಿರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ ತೀರ್ಪು ಬಾಕಿಯಿದೆಯಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಶನಿವಾರ ಉತ್ತರಿಸಿದ ಮುಕುಟ್, ಸುಪ್ರೀಂ ಕೋರ್ಟ್ ನಮ್ಮದೇ ಇತ್ಯಾದಿಯಾಗಿ ಉತ್ತರಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಮತ ಧ್ರುವೀಕರಣಕ್ಕಾಗಿ ಇಂತಹ ಹೇಳಿಕೆ ನೀಡಲಾಗುತ್ತಿದೆ ಎಂದು ವಿಪಕ್ಷಗಳು ಅಭಿಪ್ರಾಯ ಪಟ್ಟಿವೆ.
ಮಾಧ್ಯಮದಿಂದ ಸಚಿವರನ್ನು ಮತ್ತೊಮ್ಮೆ ಪ್ರಶ್ನೆ ಮಾಡಿದಾಗ, ನಾನು ಹೇಳಿದ ರೀತಿ ಬೇರೆ. ಆದರೆ ಅದು ತಲುಪಿದ್ದು ಬೇರೆ ರೀತಿಯಲ್ಲಿ ಎಂದವರೇ, ತಾವು ಆ ಹಿಂದೆ ಹೇಳಿದ ಹೇಳಿಕೆಯನ್ನೇ ಪುನರುಚ್ಚರಿಸಿದ್ದಾರೆ.

"ಸುಪ್ರೀಂ ಕೋರ್ಟ್ ಕೂಡ ದೇಶದ ಭಾಗವೇ ಮತ್ತು ಅದು ನಮಗೆ ಸೇರಿದ್ದು. ಆದ್ದರಿಂದ ಅಯೋಧ್ಯಾದಲ್ಲಿ ಮಂದಿರ ನಿರ್ಮಾಣ ಆಗುವುದು ಖಚಿತ" ಎಂದಷ್ಟೇ ಹೇಳಿದ್ದಾಗಿ ಮುಕುಟ್ ಸಮಜಾಯಿಷಿ ನೀಡಿದ್ದಾರೆ. ನಾನು ಏನು ತಪ್ಪಾಗಿ ಹೇಳಿದೆ? ಈ ದೇಶ ನಮ್ಮದಾದ ಮೇಲೆ ಸುಪ್ರೀಂ ಕೋರ್ಟ್ ಮತ್ತೆಲ್ಲವೂ... ಎಂದಿದ್ದಾರೆ.
ಮುಕುಟ್ ಜತೆಗೆ ಇದ್ದ ಉತ್ತರಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ, ಈ ವಿವಾದದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದಿದ್ದಾರೆ.
ಉತ್ತರಪ್ರದೇಶದಲ್ಲಿ ಸಚಿವರಿಗೆ ಕಾನೂನಿನ ಬಗ್ಗೆ ಇರುವ ಅಗೌರವ ಹಾಗೂ ಅಹಂಕಾರವನ್ನು ಇದು ತೋರಿಸುತ್ತದೆ ಎಂದು ವಿಪಕ್ಷಗಳಾದ ಎಸ್ ಪಿ, ಕಾಂಗ್ರೆಸ್ ಇತರ ಪಕ್ಷಗಳು ಟೀಕಿಸಿವೆ.
ಒಂದು ವೇಳೆ ಮಂದಿರದ ವಿಚಾರ ಕೋರ್ಟ್ ನಲ್ಲಿ ಇತ್ಯರ್ಥ ಆಗದಿದ್ದರೆ ಕೇಂದ್ರ ಸರಕಾರದಿಂದ ರಾಮಮಂದಿರಕ್ಕಾಗಿ ಕಾನೂನೇ ತರಲು ಪ್ರಯತ್ನಿಸಲಾಗುವುದು ಎಂದು ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕಳೆದ ತಿಂಗಳು ಹೇಳಿದ್ದರು.












Click it and Unblock the Notifications