ರಾಮ ನಮಗೆಲ್ಲರಿಗೂ ಸೇರಿದವನು: ಫಾರೂಕ್ ಅಬ್ದುಲ್ಲಾ
ನವದೆಹಲಿ, ಫೆಬ್ರವರಿ 9: 'ರಾಮ ಇಡೀ ಜಗತ್ತಿಗೆ ಸೇರಿದವನು. ರಾಮ ನಮ್ಮೆಲ್ಲರಿಗೂ ಸೇರಿದವನು' ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮಂಗಳವಾರ ಲೋಕಸಭೆಯಲ್ಲಿ ಹೇಳಿದರು.
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಅಬ್ದುಲ್ಲಾ ಮನವಿ ಮಾಡಿದರು. 'ನಾವು ಕೃಷಿ ಕಾಯ್ದೆಗಳನ್ನು ಮಾಡಿದ್ದೇವೆ. ರೈತರು ಈ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಬಯಸಿದರೆ ಅವರೊಂದಿಗೆ ಮಾತನಾಡುವುದರಿಂದ ನೀವು ಕಳೆದುಕೊಳ್ಳುವುದೇನು?' ಎಂದು ಪ್ರಶ್ನಿಸಿದರು.
ಹಿಂದೂಸ್ತಾನಿ ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ; ಗುಲಾಂ ನಬಿ ಆಜಾದ್
'ದಯವಿಟ್ಟು ಒಂದು ಪರಿಹಾರ ಕಂಡುಕೊಳ್ಳಿ. ನಾವು ಇಲ್ಲಿರುವುದು ಪರಿಹಾರಗಳನ್ನು ಕಂಡುಕೊಳ್ಳಲೇ ವಿನಾ ಅಡೆತಡೆಗಳನ್ನು ಸೃಷ್ಟಿಮಾಡುವುದ್ದಕ್ಕಲ್ಲ. ನೀವು ದಯವಿಟ್ಟು ಪ್ರತಿಷ್ಠೆಯ ಮೇಲೆ ನಿಲ್ಲಬೇಡಿ. ಇದು ನಮ್ಮ ದೇಶ. ನಾವು ಈ ದೇಶಕ್ಕೆ ಸೇರಿದ್ದೇವೆ. ದೇಶದ ಪ್ರತಿಯೊಬ್ಬರನ್ನೂ ಗೌರವಿಸೋಣ' ಎಂದು ಸರ್ಕಾರಕ್ಕೆ ಮನವಿ ಮಾಡಿದರು.
'ಒಬ್ಬ ವೈದ್ಯ ರಕ್ತದ ಬಾಟಲಿಯತ್ತ ನೋಡಿ, ಈ ರಕ್ತ ಹಿಂದೂವಿನದ್ದೇ ಅಥವಾ ಮುಸ್ಲಿಮನದ್ದೇ ಎಂದು ಕೇಳುವುದಿಲ್ಲ. ದೇವರು ನಮ್ಮೆಲ್ಲರನ್ನೂ ಒಂದೇ ರೀತ ಸೃಷ್ಟಿಸಿದ್ದಾನೆ. ನೀವು ದೇವಸ್ಥಾನಕ್ಕೆ ಹೋಗುತ್ತೀರಿ. ನಾನು ಮಸೀದಿಗೆ ಹೋಗುತ್ತೇನೆ. ರಾಮ ಇಡೀ ಜಗತ್ತಿದೆ ಸೇರಿದ್ದಾನೆ. ರಾಮ ನಮಗೆಲ್ಲರಿಗೂ ಸೇರಿದ್ದಾನೆ. ಹಾಗೆಯೇ ಮುಸ್ಲಿಮರು ಕುರಾನ್ ಹಿಡಿದುಕೊಂಡಂತೆ, ಕುರಾನ್ ನಮ್ಮದು ಮಾತ್ರವೇ ಅಲ್ಲ' ಎಂದು ಹೇಳಿದರು.