ರಾಜಸ್ಥಾನ: ಕಿಡ್ನಾಪ್ ಮಾಡಿದ ಮಹಿಳೆಯ ಶವದ ಮೇಲೆ ಬುಲೆಟ್ ಗುರುತು- ಬಿಜೆಪಿ ಪ್ರತಿಭಟನೆ!
ಜೈಪುರ ಜುಲೈ 15: ರಾಜಸ್ಥಾನ ಮಹಿಳೆಯನ್ನು ಮನೆಯಿಂದ ಕಿಡ್ನಾಪ್ ಮಾಡಿ, ಬುಲೆಟ್ ಗುರುತುಗಳೊಂದಿಗೆ ಶವ ಪತ್ತೆಯಾದ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ.
ಜುಲೈ 12 ರಂದು 19 ವರ್ಷದ ಪರಿಶಿಷ್ಟ ಜಾತಿಯ ಮಹಿಳೆಯನ್ನು ನಾಲ್ಕು ಜನರು ಆಕೆಯ ಮನೆಯಿಂದ ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಆಕೆಯ ದೇಹವನ್ನು ನಿನ್ನೆ ಬಾವಿಯಿಂದ ಹೊರತೆಗೆಯಲಾಯಿತು. ಕುಟುಂಬಸ್ಥರು ಅತ್ಯಾಚಾರದ ಆರೋಪ ಮಾಡಿದ್ದರು. ಆದರೆ ಆಕೆಯ ದೇಹದ ಮೇಲೆ ಬುಲೆಟ್ ಗುರುತುಗಳು ಪತ್ತೆಯಾಗಿದೆ.

ಇದು ಚುನಾವಣಾ ಕಣದಲ್ಲಿರುವ ರಾಜಸ್ಥಾನದ ಕರೌಲಿಯಲ್ಲಿ ರಾಜಕೀಯ ಉದ್ವಿಗ್ನತೆಗೆ ಕಾರಣವಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ, ಅಶೋಕ್ ಗೆಹ್ಲೋಟ್ ಸರ್ಕಾರವು ಹದಗೆಟ್ಟಿದೆ ಎಂದು ಭಾರತೀಯ ಜನತಾ ಪಕ್ಷ ಮತ್ತು ಮಾಯಾವತಿಯ ಬಹುಜನ ಸಮಾಜ ಪಕ್ಷ ಆರೋಪಿಸಿದೆ.
ಇದರಿಂದ ಶವ ಇರಿಸಿರುವ ಆಸ್ಪತ್ರೆಯ ಹೊರಗೆ ಬಿಜೆಪಿಯವರು ಧರಣಿ ನಡೆಸುತ್ತಿದ್ದಾರೆ. ಈ ವಿಷಯವನ್ನು ಶುಕ್ರವಾರ ರಾಜಸ್ಥಾನ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಆಪ್ ಶಾಸಕರು ಘಟನೆಯ ಬಗ್ಗೆ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೋರಿದರು.
ಈ ವಿಚಾರದಲ್ಲಿ ಸಂತ್ರಸ್ತೆಯ ತಾಯಿ ಪೊಲೀಸರ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ, "ನಾವು ಮಲಗಿದ್ದಾಗ ಮೂರ್ನಾಲ್ಕು ಜನರು ಬೆಳಿಗ್ಗೆ 3 ಗಂಟೆ ಸುಮಾರಿಗೆ ಬಂದರು. ಅವರು ಅವಳ ಬಾಯಿಗೆ ಚಿಂದಿ ಬಟ್ಟೆಗಳನ್ನು ಹಾಕಿದರು ಮತ್ತು ಅವಳನ್ನು ಕರೆದೊಯ್ದರು. ನಾನು ಸಹಜವಾಗಿ ಕಿರುಚಿಕೊಂಡಿ ಅಳುತ್ತಿದ್ದೆ, ಆದರೆ ನಾವು ಆಗಲೇ ಪೊಲೀಸರಿಗೆ ಕರೆ ಮಾಡಿದೆವು. ಅವರು ಬರಲಿಲ್ಲ. ಅಷ್ಟರೊಳಗೆ ಆಕೆಯನ್ನು ಕರೆದೊಯ್ದಿದ್ದರು. ನಾವು ಪೊಲೀಸ್ ಠಾಣೆಗೆ ಹೋದೆವು. ಆದರೆ ಅವರು ಪ್ರಕರಣ ದಾಖಲಿಸಲು ನಿರಾಕರಿಸಿದರು. ಅವರು ನನಗೆ ಕೇಸು ದಾಖಲಿಸುವುದರಿಂದ ಏನೂ ಆಗುವುದಿಲ್ಲ ಎಂದು ಹೇಳಿದರು" ಎಂದು ಸಂತ್ರಸ್ತೆಯ ತಾಯಿ ಅಳಲು ತೋಡಿಕೊಂಡಿದ್ದಾರೆ.
ಶೋಧ ತಂಡಗಳು ಪ್ರಕರಣದ ಇತರ ಆರೋಪಿಗಳಿಗಾಗಿ ಹುಡುಕುತ್ತಿರುವಾಗ ಪೊಲೀಸರು ಇದುವರೆಗೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. "ಪ್ರಕರಣದಲ್ಲಿ ನಮಗೆ ಸುಳಿವು ಸಿಕ್ಕಿದೆ. ನಾವು ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡಿದ್ದೇವೆ ಮತ್ತು ಅವರು ಯಾರನ್ನಾದರೂ ಅನುಮಾನಿಸುತ್ತಿದ್ದಾರೆಯೇ ಎಂದು ಕೇಳಿದ್ದೇವೆ. ಅವರು ಇನ್ನೂ ಯಾವುದೇ ಹೆಸರನ್ನು ನೀಡಿಲ್ಲ. ಎಫ್ಐಆರ್ ದಾಖಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಧರಣಿಯ ನೇತೃತ್ವ ವಹಿಸಿರುವ ಬಿಜೆಪಿಯ ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ, ಸಂತ್ರಸ್ತೆಯ ಕುಟುಂಬ ಸದಸ್ಯರೊಂದಿಗೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಮತ್ತು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಆಡಳಿತ "ಈ ಅತ್ಯಂತ ಸೂಕ್ಷ್ಮ ವಿಷಯವನ್ನು ಆಳವಾಗಿ ತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಅವರನ್ನು ನ್ಯಾಯಾಂಗಕ್ಕೆ ತರಬೇಕು" ಎಂದು ಒತ್ತಾಯಿಸಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆಯೇ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ. "ಸಂತ್ರಸ್ತಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಾವಿಗೆ ಗುಂಡೇಟು ಕಾರಣ ಎಂದು ತೋರುತ್ತದೆ" ಎಂದು ಕರೌಲಿ ಎಸ್ಪಿ ಮಮತಾ ಗುಪ್ತಾ ಹೇಳಿದ್ದಾರೆ. ಪರೀಕ್ಷೆಯ ನಂತರ ಅತ್ಯಾಚಾರದ ಬಗ್ಗೆ ಫೋರೆನ್ಸಿಕ್ ತಜ್ಞರು ದೃಢೀಕರಣವನ್ನು ನೀಡಲಿದ್ದಾರೆ ಎಂದು ಅವರು ಹೇಳಿದರು.
ಪರಿಹಾರ ಮತ್ತು ಇತರ ಬೇಡಿಕೆಗಳಿಗಾಗಿ ಅಧಿಕಾರಿಗಳು ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications