'ಹೌದು, ನಾನು ಆಗ ತಪ್ಪು ಮಾಡಿದೆ': ರಾಹುಲ್ ಗಾಂಧಿ ವಿಷಾದ
ನವದೆಹಲಿ, ಮಾರ್ಚ್ 9: ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮುನ್ನ ಭಾರತೀಯ ಯುವ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು, ತಾವು ಯುವ ಮುಖಗಳಿಗಾಗಿ ಅತಿಯಾದ ಗಮನ ಕೊಡುವ ಮೂಲಕ ತಪ್ಪು ಮಾಡಿರುವುದಾಗಿ ಹೇಳಿದ್ದಾರೆ.
ಐವೈಸಿ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ರಾಜಕಾರಣದಲ್ಲಿ ನಂಬಿಕೆ ಹಾಗೂ ನಿಷ್ಠೆ ಮತ್ತು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವುದರ ಕುರಿತು ಅಭಿಪ್ರಾಯ ಹಂಚಿಕೊಂಡರು. 'ಕಾಂಗ್ರೆಸ್ ಅನ್ನು ಹೃದಯದಲ್ಲಿಟ್ಟುಕೊಂಡ'ವರಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ ಎನ್ನುವ ಮೂಲಕ ಪಕ್ಷದ ಸಿದ್ಧಾಂತಗಳಿಗೆ ಹೆಚ್ಚು ಬದ್ಧರಾಗಿರುವರಿಗೆ ಆದ್ಯತೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್‌ನ ನಾಯಕತ್ವದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು, ಪಕ್ಷದ ನಾಯಕತ್ವದ ಆಯ್ಕೆಗೆ ಚುನಾವಣೆ ನಡೆಯಬೇಕು ಹಾಗೂ ಕಾಯಂ ಅಧ್ಯಕ್ಷರ ಆಯ್ಕೆಯಾಗಬೇಕು ಎಂದು ಒತ್ತಾಯಿಸಿ ಪಕ್ಷದ ಹಿರಿಯ ನಾಯಕರು ಪತ್ರ ಬರೆದಿದ್ದು ವಿವಾದ ಸೃಷ್ಟಿಸಿತ್ತು. ರಾಹುಲ್ ಗಾಂಧಿ ಅವರ ಕಾರ್ಯವೈಖರಿ ಬಗ್ಗೆ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದೂ ಹೇಳಲಾಗಿತ್ತು.

ಹಿರಿಯರಿಗೆ ಆದ್ಯತೆ
ಈಗ ರಾಹುಲ್ ಗಾಂಧಿ ಅವರು ಪಕ್ಷದ ಕುರಿತಾದ ತಮ್ಮ ನಿಲುವಲ್ಲಿ ಬದಲಾವಣೆ ಮಾಡುವ ಬಗ್ಗೆ ಸುಳಿವು ನೀಡಿದ್ದು, ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧರಾಗಿರುವ ಹಿರಿಯರಿಗೆ ಆದ್ಯತೆ ನೀಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನ ಮರು ರಚನೆಗಾಗಿ ಜುಲೈ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮರಳಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದಿದೆ.

ವಾಪಸ್ ಬರುವವರಿಗೆ ಬಾಗಿಲು ತೆರೆದಿರುತ್ತದೆ
ಯುವ ಕಾಂಗ್ರೆಸ್ ಮುಖಂಡರು ಪಕ್ಷದ ಧ್ಯೇಯಗಳಿಗೆ ಬದ್ಧರಾಗಿರಬೇಕು ಎಂದು ಕರೆ ನೀಡಿದ ರಾಹುಲ್, ಪಕ್ಷದೊಂದಿಗೆ ನಿಲ್ಲುವ ಮುಖಂಡರು ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕ ಗೌರವ ಪಡೆದುಕೊಳ್ಳಲಿದ್ದಾರೆ. ಹಾಗೆಯೇ ಪಕ್ಷದಿಂದ ಹೊರಹೋದವರು ವಾಪಸ್ ಬರಲು ಬಾಗಿಲುಗಳು ಸದಾ ತೆರೆದಿರುತ್ತವೆ ಎಂದಿದ್ದಾರೆ. ಕಾಂಗ್ರೆಸ್ ಅನ್ನು ಸಾಗರಕ್ಕೆ ಹೋಲಿಸಿದ ಅವರು, ಯಾರು ಬೇಕಾದರೂ ಪಕ್ಷಕ್ಕೆ ವಾಪಸ್ ಬರಬಹುದು. ಆದರೆ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರಿಗೆ ಅಧಿಕಾರದ ಹುದ್ದೆಗಳು ಸಿಗುತ್ತವೆ ಎಂದು ತಿಳಿಸಿದ್ದಾರೆ.

ರಾಹುಲ್‌ಗೆ ಅಧ್ಯಕ್ಷಗಿರಿ-ನಿರ್ಣಯ
ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್‌ನ ಅಧ್ಯಕ್ಷರಾಗಿ ಮತ್ತೆ ನೇಮಕ ಮಾಡುವಂತೆ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರಿಯ ಕಾರ್ಯಕಾರಿಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ರಾಹುಲ್ ಗಾಂಧಿ ಅವರು ಪುನಃ ಅಧ್ಯಕ್ಷಗಾದಿಗೆ ಏರುವುದು ಪಕ್ಷವನ್ನು ಬಲಪಡಿಸಲಿದೆ ಮತ್ತು ದೇಶದೆಲ್ಲೆಗಿನ ಘಟಕಗಳಿಗೆ ಉತ್ಸಾಹ ತುಂಬಲಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಸಿಂಧಿಯಾ ಕೊನೆಯ ಬೆಂಚಲ್ಲಿದ್ದಾರೆ
ಜ್ಯೋತಿರಾದಿತ್ಯ ಸಿಂಧಿಯಾ ಅವರು ಪಕ್ಷದಲ್ಲಿಯೇ ಇದ್ದಿದ್ದರೆ ಅವರನ್ನು ಖಂಡಿತವಾಗಿಯೂ ಈ ವೇಳೆಗೆ ಮುಖ್ಯಮಂತ್ರಿಯನ್ನಾಗಿ ಮಾಡಬಹುದಾಗಿತ್ತು. ಆದರೆ ಅವರು ಈಗ ಬಿಜೆಪಿಯಲ್ಲಿ ಹಿಂದಿನ ಬೆಂಚಿನವರಾಗಿದ್ದಾರೆ. ಬಿಜೆಪಿ ಸೇರುವ ಮೂಲಕ ಅವರು ಬೇರೆ ಹಾದಿ ಆಯ್ಕೆಮಾಡಿಕೊಂಡರು. ಅಲ್ಲಿ ಅವರು ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಆಗ ತೋರಿಸಿದ್ದರೆ ಕಥೆಯೇ ಬೇರೆ ಆಗುತ್ತಿತ್ತು
ರಾಹುಲ್ ಗಾಂಧಿ ಹೇಳಿಕೆಗೆ ಮಂಗಳವಾರ ತಿರುಗೇಟು ನೀಡಿರುವ ಜ್ಯೋತಿರಾದಿತ್ಯ ಸಿಂಧಿಯಾ, 'ರಾಹುಲ್ ಗಾಂಧಿ ಅವರು ಈಗ ತೋರಿಸುವ ಕಾಳಜಿಯನ್ನು ನಾನು ಕಾಂಗ್ರೆಸ್‌ನಲ್ಲಿದ್ದಾಗಲೂ ತೋರಿಸಿದ್ದರೆ ಆಗ ಸ್ಥಿತಿಯೇ ಬೇರೆಯಾಗಿರುತ್ತಿತ್ತು' ಎಂದು ಕಿಡಿಕಾರಿದ್ದಾರೆ.












Click it and Unblock the Notifications